ಮತಾಂತರವಾದವರು ಮೂಲ ಧರ್ಮಕ್ಕೆ ಮರಳಿ ಬಂದರೆ ತಪ್ಪೇನಿದೆ?: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಹಾವೇರಿ: ಮತಾಂತರವಾದವರು ಮೂಲ ಧರ್ಮಕ್ಕೆ ಮರಳಿ ಬಂದರೆ ತಪ್ಪೇನಿದೆ. ಮರಳಿ ಬಂದವರಿಗೆ ಇಂಥದ್ದೇ ಸ್ಥಾನಮಾನ ಕೊಡಬೇಕು ಅಂಥ ಏನೂ ಇಲ್ಲ. ಇದನ್ನು ಬಿಜೆಪಿ ಮಾತ್ರ ಹೇಳುತ್ತಿಲ್ಲ. ಒಳ್ಳೆಯವರೆಲ್ಲರೂ ಇದನ್ನೇ ಹೇಳುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಮಂಗಳವಾರ ಹಾವೇರಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ‘ಪ್ರಗತಿ ಪರಿಶೀಲನಾ ಸಭೆ’ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾವುದೇ ಮತದವರು ನೆಮ್ಮದಿಯಾಗಿ ಅವರ ಮತಗಳಲ್ಲೇ ಬದುಕಲಿ. ಬೇರೆ ಮತಕ್ಕೆ ಹೋಗುವ ಇಚ್ಛೆಯಿದ್ದರೆ ಡಿಸಿಗೆ ಅರ್ಜಿ ಕೊಡಲಿ. ಅದನ್ನು ಬಿಟ್ಟು ಆಮಿಷಕ್ಕೆ ಒಳಗಾಗಿ ಮತಾಂತರವಾಗಬಾರದು ಎಂಬ ಉದ್ದೇಶದಿಂದ ‘ಮತಾಂತರ ನಿಷೇಧ ಕಾಯ್ದೆ’ ಜಾರಿಗೆ ತರಲಾಗಿದೆ. ಇದನ್ನು ಒಪ್ಪದವರು ಸ್ವಾರ್ಥದಿಂದ ಆಕ್ಷೇಪ ಮಾಡಿದ್ದಾರೆಯೇ ಹೊರತು ಧರ್ಮದ ಒಳಿತಿಗಾಗಿ ಅಲ್ಲ ಎಂದರು.
ಶೇ40ರಷ್ಟು ಕಮಿಷನ್ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ, ನನ್ನ ಇಲಾಖೆಯಲ್ಲಿ ಶೇ1ರಷ್ಟು ಕಮಿಷನ್ ಇದ್ದರೆ ತೋರಿಸಿ ಕೊಡಲಿ. ಸತ್ಯ ಹರಿಶ್ಚಂದ್ರರ ಮೊಮ್ಮಕ್ಕಳು ಹೇಳುವುದಕ್ಕೆಲ್ಲ ಉತ್ತರ ಕೊಡಬೇಕು ಎಂದು ಏನು ಇಲ್ಲ. ನಾವು ಭ್ರಷ್ಟಾಚಾರ ರಹಿತರಾಗಿ ಕೆಲಸ ಮಾಡುತ್ತಿದ್ದೇವೆ. ದೂರುಗಳಿದ್ದರೆ ತಿಳಿಸಲಿ, ಸರಿಪಡಿಸುತ್ತೇವೆ’ ಎಂದು ಪರೋಕ್ಷಾಗಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.