ನೈಟ್ ಕರ್ಫ್ಯೂ ಮಾರ್ಗಸೂಚಿಯನ್ನು ಜನ ಕಟ್ಟುನಿಟ್ಟಾಗಿ ಪಾಲಿಸಬೇಕು: ಸಚಿವ ಡಾ.ಕೆ.ಸುಧಾಕರ್

Update: 2021-12-28 14:40 GMT

ಬೆಂಗಳೂರು, ಡಿ.28: ರಾಜ್ಯ ಸರಕಾರವು ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಸದ್ಯಕ್ಕೆ 10 ದಿನ ನೈಟ್ ಕಫ್ರ್ಯೂ ಜಾರಿ ಮಾಡಿ ಮಾರ್ಗಸೂಚಿ ಬಿಡುಗಡೆ ಮಾಡಿದ್ದೇವೆ. ಜನರು ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಅನ್ನೋದು ಸರಕಾರದ ಆಶಯ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಮಂಗಳವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ 10 ದಿನಗಳ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಯಾವ ರೀತಿ ಈ ಹೊಸ ಪ್ರಬೇಧ ವ್ಯವಹರಿಸುತ್ತಿದೆ. ಅದಕ್ಕೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳು, ತಜ್ಞರ ಜೊತೆ ಸಮಾಲೋಚನೆ ಮಾಡುತ್ತೇವೆ ಎಂದರು.

ನೈಟ್ ಕಫ್ರ್ಯೂ ಜಾರಿ ಮಾಡುತ್ತಿರುವ ಕುರಿತು ಈಗಾಗಲೆ ಮುಖ್ಯಮಂತ್ರಿ ಹಾಗೂ ನಾನು ಸ್ಪಷ್ಟಣೆ ನೀಡಿದ್ದೇವೆ. ಪದೇ ಪದೇ ಅದನ್ನು ಮಾತನಾಡಿಕೊಂಡಿದ್ದರೆ ಪ್ರಯೋಜನವಿಲ್ಲ. ಈಗ ರಾತ್ರಿ 10 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಮೊದಲನೆ ಹಂತ, ಎರಡನೆ ಹಂತದಲ್ಲಿ ಲಾಕ್‍ಡೌನ್ ಆಗಿತ್ತು. ಯಾಕಾಗಿ ಲಾಕ್‍ಡೌನ್ ಮಾಡಲಾಗಿತ್ತು ಅನ್ನೋದನ್ನು ನೈಟ್ ಕಫ್ರ್ಯೂಗೆ ವಿರೋಧಿಸುವವರು ಅರ್ಥ ಮಾಡಿಕೊಳ್ಳಬೇಕು ಎಂದು ಸುಧಾಕರ್ ಹೇಳಿದರು.

ಸರಕಾರ ಏನಾದರೂ ತೀರ್ಮಾನ ಮಾಡುವ ಮುನ್ನ ಅನೇಕ ವಿಚಾರಗಳ ಬಗ್ಗೆ, ತಾಂತ್ರಿಕ ತಜ್ಞರ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಂಡಿರುತ್ತದೆ. ಯಾವುದೋ ಚಟುವಟಿಕೆಗಳನ್ನು ನಿರ್ಬಂಧ ಮಾಡುವುದರಿಂದ ನಮಗೇನು ಸಂತೋಷ ಆಗುತ್ತಾ ? ಅಗತ್ಯ ಸಂದರ್ಭಗಳಲ್ಲಿ ಇಂತಹ ತೀರ್ಮಾನಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಕೋವಿಡ್ ಸೋಂಕಿತರಾಗುವವರ ಪೈಕಿ ಯಾರಿಗೆ ನಿಜವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅಗತ್ಯವಿದೆ. ಅಂತಹವರಿಗೆ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಲ್ಲಿ ದಾಖಲಾತಿ ಮಾಡಿಕೊಳ್ಳಬೇಕು ಎಂದು ನಿಯಮ ಮಾಡಿದ್ದೇವೆ. ಈ ಹಿಂದೆ ಪಾಸಿಟಿವ್ ಬಂದ ತಕ್ಷಣ ಅಗತ್ಯವಿಲ್ಲದಿದ್ದರೂ ಹೋಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದರು ಎಂದು ಸುಧಾಕರ್ ಹೇಳಿದರು.

15-18 ವರ್ಷದವರಿಗೆ ಕೋವ್ಯಾಕ್ಸಿನ್ ನೀಡಲು ನಿನ್ನೆ ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿ ಬಂದಿದೆ. ಕೋವ್ಯಾಕ್ಸಿನ್ ಲಭ್ಯತೆ ಕುರಿತು ಸಭೆ ಮಾಡಿ, ಕೇಂದ್ರ ಸರಕಾರದೊಂದಿಗೂ ಮಾತನಾಡುತ್ತೇವೆ. ರಾಜ್ಯದಲ್ಲಿ 15-18 ವರ್ಷದೊಳಗಿನ 43 ಲಕ್ಷ ಮಕ್ಕಳಿದ್ದಾರೆ. ಕೋವ್ಯಾಕ್ಸಿನ್ ಯಾವ ರೀತಿ ಸರಬರಾಜು ಆಗುತ್ತೆ ಅನ್ನೋದನ್ನು ನೋಡಬೇಕು. ಜನವರಿ 3ರಂದು ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಚಾಲನೆ ನೀಡುತ್ತಾರೆ ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರ ಈವರೆಗೆ ಕೋವಿಡ್ ಲಸಿಕೆ ಪೂರೈಕೆಯಲ್ಲಿ ನಮಗೆ ಆದ್ಯತೆ ನೀಡುತ್ತಿತ್ತೋ, ಈಗಲೂ ಅದೇ ರೀತಿ ಕೋವ್ಯಾಕ್ಸಿನ್ ಲಸಿಕೆ ಸರಬರಾಜು ಮಾಡಲಿದೆ ಎಂಬ ವಿಶ್ವಾಸವಿದೆ ಎಂದು ಸುಧಾಕರ್ ಹೇಳಿದರು. 

ಮತಾಂತರ ನಿಷೇಧ ಕಾಯ್ದೆಗೆ ಸಮರ್ಥನೆ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಸರಕಾರದ ಪ್ರಮುಖ ಕರ್ತವ್ಯಗಳಲ್ಲಿ ಒಂದಾಗಿದೆ. ಸಂವಿಧಾನದ ಆಶಯ ಈಡೇರಿಸುವ ಉದ್ದೇಶದಿಂದಲೆ ಸರಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದೆ. ಇದು ಎಲ್ಲರ ಹಿತದೃಷ್ಟಿಯಿಂದ ತಂದಿರುವುದು. ಯಾವುದೋ ಒಂದು ಧರ್ಮದ ವಿರುದ್ಧ ಎಂದು ಯಾರೂ ಭಾವಿಸಬಾರದು ಎಂದು ಸುಧಾಕರ್ ಹೇಳಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ವಾರದಲ್ಲೆ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲಾಗುವುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಧಾಕರ್, ಅವರು ಅಧಿಕಾರಕ್ಕೆ ಬರುವುದಿಲ್ಲ. ಆದುದರಿಂದ, ಇಂತಹ ಹೇಳಿಕೆ ನೀಡಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News