ಹಾಸ್ಟೆಲ್ ಕುಂದುಕೊರತೆ ನಿವಾರಣೆಗೆ ‘ಸಹಾಯವಾಣಿ’ ಶೀಘ್ರ ಆರಂಭ: ಕೋಟ ಶ್ರೀನಿವಾಸ ಪೂಜಾರಿ
ಹಾವೇರಿ, ಡಿ.28: ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್‍ಗಳ ಕುಂದುಕೊರತೆ ನಿವಾರಣೆಗೆ ಜ.10ರೊಳಗೆ ‘ಸಹಾಯವಾಣಿ’ ಆರಂಭಿಸುತ್ತೇವೆ ಎಂದು ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಮಂಗಳವಾರ ಹಾವೇರಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ‘ಪ್ರಗತಿ ಪರಿಶೀಲನಾ ಸಭೆ’ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಾಯವಾಣಿ ಆರಂಭಿಸುವ ಸಂಬಂಧ ಬಿಎಸ್‍ಎನ್‍ಎಲ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಹಾಸ್ಟೆಲ್ ಕೊಠಡಿಗಳ ಹೆಚ್ಚಳಕ್ಕೆ ಬೇಡಿಕೆ ಬಂದಿದೆ. ಪ್ರತಿ ಜಿಲ್ಲೆಗೂ ಎರಡ್ಮೂರು ಹೊಸ ಹಾಸ್ಟೆಲ್ ತೆರೆಯಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಹೆಣ್ಣುಮಕ್ಕಳಿಗೆ ಪ್ರಥಮ ಪ್ರಾಶಸ್ತ್ಯ ನೀಡುತ್ತೇವೆ ಎಂದು ಹೇಳಿದರು.
ಹಾಸ್ಟೆಲ್‍ಗಳಿಗೆ ಆಹಾರ ಸರಬರಾಜು ಪೂರೈಕೆ ಟೆಂಡರ್ ನಲ್ಲಿ ಪಾರದರ್ಶಕತೆ ತರಲು ಹೊಸ ಸುತ್ತೋಲೆ ಹೊರಡಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಡಿಸಿ ನೇತೃತ್ವದ ಸಮಿತಿಯನ್ನು ಪುನರ್ ರಚಿಸಲಾಗಿದೆ. ಯಾವ ದಾಕ್ಷಿಣ್ಯಕ್ಕೂ ಒಳಗಾಗುವುದಿಲ್ಲ. ಲೋಪದೋಷಗಳು ಕಂಡುಬಂದರೆ ಅಧಿಕಾರಿಗಳೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.