ಹೊರ ದೇಶದಲ್ಲಿ ಕ್ರೆಡಿಟ್ ಕಾರ್ಡ್ ಕಳವು: ಅರ್ಜಿದಾರನಿಗೆ ಹಣ ವಾಪಸ್ ಕೊಡಲು ಬ್ಯಾಂಕ್‍ಗೆ ಕೋರ್ಟ್ ಆದೇಶ
ಬೆಂಗಳೂರು, ಡಿ.28: ಹೊರ ದೇಶಕ್ಕೆ ಹೋದ ಸಂದರ್ಭದಲ್ಲಿ ಕಳ್ಳರು ಕ್ರೆಡಿಟ್ ಕಾರ್ಡ್ ಕದ್ದು ಡ್ರಾ ಮಾಡಿಕೊಂಡಿದ್ದ ಹಣವನ್ನು ಬಲವಂತವಾಗಿ ಪಡೆದಿದ್ದ ಬ್ಯಾಂಕ್‍ಗೆ ದಂಡ ವಿಧಿಸಿರುವ ಗ್ರಾಹಕ ನ್ಯಾಯಾಲಯ ಅರ್ಜಿದಾರರಿಗೆ 1 ಲಕ್ಷ ರೂ. ಹಣವನ್ನು ವಾಪಸ್ ಕೊಡುವಂತೆ ಆದೇಶಿಸಿದೆ.
ಫ್ರಾನ್ಸ್ ದೇಶದ ಪ್ಯಾರಿಸ್‍ಗೆ ತೆರಳಿದ್ದ ವೇಳೆ ಕಳ್ಳತನವಾಗಿದ್ದ ಕಾರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ ನಿಗದಿತ ಅವಧಿಯಲ್ಲಿ ತಿಳಿಸಿದ್ದರೂ ಬ್ಯಾಂಕ್ ಹಣ ಕಟ್ಟಿಸಿಕೊಂಡಿದೆ ಎಂದು ಆಕ್ಷೇಪಿಸಿ, ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‍ನ ನಿವಾಸಿ ವಿಜಯ್ ಬಸುತ್ಕರ್ ನೀಡಿದ್ದ ದೂರಿನ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಅರ್ಜಿದಾರರು, ನಿಯಮಗಳ ಅನುಸಾರ ದೂರು ನೀಡಿದ್ದಾರೆ. ಈ ವಿಚಾರದಲ್ಲಿ ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳದ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಂದಲೇ ಕಳ್ಳತನವಾದ ಹಣ ಪಡೆದ ಕ್ರಮ ಸರಿಯಲ್ಲ ಎಂದು ಹೇಳಿದೆ. ಅಲ್ಲದೇ, ಬ್ಯಾಂಕ್ ಬಲವಂತದಿಂದ ಜಮೆ ಮಾಡಿಸಿಕೊಂಡಿರುವ 1 ಲಕ್ಷ ರೂಪಾಯಿಯನ್ನು ಬಡ್ಡಿ ಸಹಿತ ಹಿಂಪಾವತಿಸಬೇಕು. ಅಲ್ಲದೇ, ನ್ಯಾಯಾಲಯದ ವೆಚ್ಚ ಪರಿಹಾರವಾಗಿ 5 ಸಾವಿರ ಮತ್ತು ತೊಂದರೆ ನೀಡಿದ್ದಕ್ಕಾಗಿ 10 ಸಾವಿರ ಪರಿಹಾರ ನೀಡಬೇಕು ಎಂದು ಆದೇಶಿಸಿದೆ.