ಕಲ್ಯಾಣ ಯೋಜನೆಗಳಿಗೆ ಜನರ ಅರ್ಹತೆ ಮಾನದಂಡಕ್ಕೆ ಹೊಸ ಪೋರ್ಟೆಲ್
ಬೆಂಗಳೂರು: ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಅನುವು ಮಾಡಿಕೊಡುವ ಜತೆಗೆ, ಸೌಲಭ್ಯ ಯಾರಿಗೆ ತೀರಾ ಅನಿವಾರ್ಯವಿದೆ ಎಂದು ನಿರ್ಧರಿಸಲು ನೆರವು ನೀಡುವ ಹೊಸ ತಂತ್ರಜ್ಞಾನ ಪ್ಲಾಟ್‌ಫಾರ್ಮ್ ಅನ್ನು ಕರ್ನಾಟಕ ಸರ್ಕಾರ ಆರಂಭಿಸಲಿದೆ.
ಸುವಿಧಾ ಪ್ಲಾಟ್‌ಫಾರ್ಮ್ ನೇರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧೀನದಲ್ಲಿ ಕಾರ್ಯ ನಿರ್ವಹಿಸಲಿದೆ. ಚುನಾವಣಾ ವರ್ಷದಲ್ಲಿ ಹಲವು ಕಲ್ಯಾಣ ಯೋಜನೆಗಳ ಘೋಷಣೆಗೆ ಸಿಎಂ ಸಜ್ಜಾಗಿದ್ದು, ಹಲವು ಇ-ಆಡಳಿತ ಉಪಕ್ರಮಗಳ ಭಾಗವಾಗಿ ಈ ಪೋರ್ಟೆಲ್ ಕಾರ್ಯ ನಿರ್ವಹಿಸಲಿದೆ.
ಈ ಸಮಗ್ರ ಪ್ಲಾಟ್‌ಫಾರ್ಮ್ ನಾಗರಿಕರಿಗೆ ಕಲ್ಯಾಣ ಯೋಜನೆಗಳನ್ನು ಕಂಡುಕೊಳ್ಳಲು ಮತ್ತು ಅವುಗಳಿಗೆ ಅರ್ಜಿ ಸಲ್ಲಿಸಲು ನೆರವಾಗಲಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಇ-ಆಡಳಿತ) ರಾಜೀವ್ ಚಾವ್ಲಾ ಹೇಳಿದರು.
"ಸುವಿಧಾ ಪ್ಲಾಟ್‌ಫಾರ್ಮ್, ಪ್ರಮಾಣಪತ್ರ ಅಥವಾ ದಾಖಲೆಗಳ ಸೇವೆಗೆ ಲಭ್ಯವಿರುವ ಸೇವಾ ಸಿಂಧುವಿಗಿಂತ ಭಿನ್ನ. ನೇರ ಪ್ರಯೋಜನವನ್ನು ಒಳಗೊಂಡ ಕಲ್ಯಾಣ ಯೋಜನೆಗಳಿಗಾಗಿಯೇ ಸುವಿಧಾ ಆರಂಭಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರ 250ಕ್ಕೂ ಹೆಚ್ಚು ಕಲ್ಯಾಣ ಯೋಜನೆಗಳನ್ನು ಜನತೆಗೆ ಒದಗಿಸುತ್ತಿದ್ದು, ಇವುಗಳಲ್ಲಿ ಬಹುತೇಕ ಯೋಜನೆಗಳನ್ನು ಸಿಬ್ಬಂದಿಯೇ ಸಂಸ್ಕರಿಸುತ್ತಾರೆ. ಹಲವು ಯೋಜನೆಗಳಿಗೆ ನಿಗದಿತ ಬಜೆಟ್‌ಗಿಂತ ಹೆಚ್ಚು ಫಲಾನುಭವಿಗಳು ಅರ್ಜಿ ಸಲ್ಲಿಸುತ್ತಾರೆ. ಉದಾಹರಣೆಗೆ ಗಂಗಾ ಕಲ್ಯಾಣ ಯೋಜನೆಯಡಿ ಪ್ರಸಕ್ತ ವರ್ಷ 930 ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲು ಉದ್ದೇಶಿಸಿದ್ದರೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಈ ಯೋಜನೆಗಾಗಿ 17300 ಅರ್ಜಿಗಳು ಬಂದಿವೆ. ಇದಕ್ಕಾಗಿ ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲು ಸೇವೆ ಒದಗಿಸುವ ತತ್ವದ ಆಧಾರದಲ್ಲಿ ಫಲಾನುಭವಿಗಳನ್ನು ಗುರುತಿಸಲಾಗುತ್ತಿದೆ.
"ಸುವಿಧಾ ವ್ಯವಸ್ಥೆಯಲ್ಲಿ ’ಅಗತ್ಯತೆಯ ಅಂಕ’ಗಳನ್ನು ಅರ್ಜಿದಾರರಿಗೆ ನೀಡಲಾಗುತ್ತದೆ. ಇದು ಇಲಾಖೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲು ಅನುಕೂಲವಾಗಲಿದೆ. ಅತಿ ಹೆಚ್ಚು ಅಗತ್ಯತೆ ಇರುವವರು ಆದ್ಯತೆ ಪಡೆಯುತ್ತಾರೆ. ಅಂಕಗಳ ಮಾನದಂಡ ಗಳನ್ನು ಅಂತಿಮಪಡಿಸುವ ಬಗ್ಗೆ ಇಲಾಖೆಗಳ ಜತೆ ಮಾತುಕತೆ ನಡೆದಿದೆ ಎಂದು ಚಾವ್ಲಾ ವಿವರಿಸಿದರು.
ಸುವಿಧಾ ಯೋಜನಾ ನಿರ್ದೇಶಕ ಅಭಿಷೇಕ್ ವಸಂತ ನಾಯ್ಕ ಅವರ ಪ್ರಕಾರ, ಸುವಿಧಾಗೆ ಲಾಗ್ ಇನ್ ಮಾಡುವ ವೇಳೆ ನಾಗರಿಕರು ಮೂಲಭೂತ ವಿವರಗಳನ್ನು ನೀಡಬೇಕಾಗುತ್ತದೆ. ಸುವಿಧಾ ಹಲವು ಐಟಿ ವ್ಯವಸ್ಥೆಗಳಿಗೆ ಸಂಪರ್ಕ ಹೊಂದಿ ಈ ದತ್ತಾಂಶವನ್ನು ದೃಢೀಕರಿಸುತ್ತದೆ.