ತುಮಕೂರು: ಸೇವಾ ಭದ್ರತೆಗೆ ಒತ್ತಾಯಿಸಿ ಬೂಟ್‍ಪಾಲಿಶ್ ಮಾಡುವ ಮೂಲಕ ಅತಿಥಿ ಉಪನ್ಯಾಸಕರ ಧರಣಿ
ತುಮಕೂರು: ಸೇವಾ ಭದ್ರತೆಗಾಗಿ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಬೂಟ್ ಪಾಲಿಶ್ ಮಾಡುವ ಮೂಲಕ ಸರ್ಕಾರದ ನೀತಿಗಳನ್ನು ಖಂಡಿಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತಿರುವ ಅತಿಥಿ ಉಪನ್ಯಾಸಕರು ತರಕಾರಿ, ಮಜ್ಜಿಗೆ, ಮಾರುವ ಮೂಲಕ ಗಮನ ಸೆಳೆದರು. ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಸಿಐಟಿಯು, ಕೊಳಗೇರಿ ಹಿತರಕ್ಷಣಾ ಸಮಿತಿ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದವು.
ಈ ವೇಳೆ ಮಾತನಾಡಿದ ಅತಿಥಿ ಉಪನ್ಯಾಸಕಿ ಚೈತ್ರಶ್ರೀ ಅವರು, ತಿಂಗಳಿಗೆ 11 ಸಾವಿರ ನೀಡಿ ದುಡಿಸಿಕೊಳ್ಳುತ್ತಿರುವ ಸರ್ಕಾರ, ಅತಿಥಿ ಉಪನ್ಯಾಸಕರನ್ನು ಕಡೆಗಣಿಸಿದೆ, ಡಾಕ್ಟರೇಟ್, ಎಂಫಿಲ್ ಪದವಿಗಳನ್ನು ಪಡೆದಿರುವವರನ್ನು ಕೂಲಿ ಕಾರ್ಮಿಕರಿಗಿಂತ ಕಡೆಯಾಗಿ ನೋಡುತ್ತಿದ್ದು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಆಗ್ರಹಿಸಿದರು.
ಸರ್ಕಾರ ಅತಿಥಿ ಉಪನ್ಯಾಸಕರಿಗೆ ಸೆಮಿಸ್ಟರ್‍ಗೆ ಮಾತ್ರ ನೇಮಕಾತಿ ನೀಡುತ್ತಿದ್ದು, ಎರಡು ಸೆಮಿಸ್ಟರ್‍ಗೆ ಮಾತ್ರ ಸಂಬಳ ನೀಡುತ್ತಿದ್ದು, ಉಳಿದ ಅವಧಿಯಲ್ಲಿ ಅತಿಥಿ ಉಪನ್ಯಾಸಕರನ್ನು ಕೆಲಸ ಮಾಡಿಸಿಕೊಂಡು ಸಂಬಳ ನೀಡದೇ ಕೆಲಸ ಮಾಡಿಸುವ ಹುನ್ನಾರ ಮಾಡುತ್ತಿದ್ದಾರೆ, ಇಂತಹ ಲಜ್ಜೆಗೇಡಿ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಎಲ್ಲ ಅತಿಥಿ ಉಪನ್ಯಾಸಕರ ಸಂಘಟನೆಗಳು ಅನಿರ್ದಿಷ್ಟಾವಧಿ ಹೋರಾಟ ಅಂತಿಮ ಹೋರಾಟವಾಗಿದ್ದು, ಹೋರಾಟ ತಾರ್ಕಿಕ ಅಂತ್ಯ ಕಾಣಿಸುವವರೆಗೆ, ಅತಿಥಿ ಉಪನ್ಯಾಸಕರ ಹೋರಾಟ ಮುಂದುವರೆಸಲಿದ್ದು, ಅಲ್ಲಿಯವರೆಗೆ ತರಗತಿ ಬಹಿಷ್ಕರಿಸಲಾಗುವುದು, ಅತಿಥಿ ಉಪನ್ಯಾಸಕರಿಲ್ಲದೇ ಶೈಕ್ಷಣಿಕ ಚಟುವಟಿಕೆಗಳು ನಡೆಯುವುದಿಲ್ಲ ಎನ್ನುವುದನ್ನು ಅರಿತು ಸರ್ಕಾರ ಸೇವಾ ಭದ್ರತೆಯನ್ನು ಕಲ್ಪಿಸಲಿ ಎಂದರು.
ಹೋರಾಟದಲ್ಲಿ ಸಿಐಟಿಯುನ ಸೈಯದ್‍ಮುಜೀಬ್, ಸುಬ್ರಮಣ್ಯ, ದೊರೆರಾಜು, ಡಾ.ಶಿವಣ್ಣತಿಮ್ಲಾಪುರ, ಚೇತನ್, ಅಂಜನ್‍ಮೂರ್ತಿ, ರಂಗಧಾಮಯ್ಯ ಜೆ.ಸಿ,ಶಿವಣ್ಣ, ಗಂಗಾಧರ್,ಗಂಗಾಬಿಕೆ, ಅಂಬಿಕಾ, ಸುಧಾ,ಡಾ.ಕುಮಾರ್, ಡಾ.ಶಿವಯ್ಯ, ಡಾ.ಸಿದ್ದನಾಯ್ಕ, ಸುರೇಶ್, ಕರಿಯಣ್ಣ, ಜಲಜಾಕ್ಷಿ, ಸುಧಾ ತಿಪಟೂರು, ಡಾ.ವೆಂಕಟೇಶಯ್ಯ, ಪಿ.ಸಿ.ಲೋಕೇಶ್, ರವೀಂದ್ರ, ಮಹದೇವ್ ಇತರರಿದ್ದರು.