ಬಾಳೆಹೊನ್ನೂರು: ಮರಕ್ಕೆ ಕಾರು ಢಿಕ್ಕಿ; ಬೆಂಗಳೂರು ಮೂಲದ ಯುವತಿ ಮೃತ್ಯು
ಚಿಕ್ಕಮಗಳೂರು, ಡಿ.29: ಮರಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮಹಿಳೆಯೊಬ್ಬರು ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣ ಸಮೀಪದ ಸೀಗೋಡು ಗ್ರಾಮದ ಬಳಿ ಬುಧವಾರ ವರದಿಯಾಗಿದೆ.
ಅಪಘಾತದಲ್ಲಿ ಮೃತ ಪಟ್ಟ ಮಹಿಳೆಯನ್ನು ಬೆಂಗಳೂರು ನಗರದ ಮಾರತ್‍ಹಳ್ಳಿ ನಿವಾಸಿ ಗೀತಾ(28) ಎಂದು ತಿಳಿದು ಬಂದಿದ್ದು, ಬೆಂಗಳೂರಿನಿಂದ ಶೃಂಗೇರಿಗೆ ಕಾರಿನಲ್ಲಿ ಪ್ರವಾಸಕ್ಕೆ ಬಂದಿದ್ದ ತಂಡ ಬುಧವಾರ ಶೃಂಗೇರಿಯಿಂದ ಬಾಳೆಹೊನ್ನೂರು ಮಾರ್ಗವಾಗಿ ಬೆಂಗಳೂರಿಗೆ ಹಿಂದಿರುಗುತ್ತಿದ್ದ ವೇಳೆ ಬಾಳೆಹೊನ್ನೂರು ಪಟ್ಟಣ ಸಮೀಪದ ಸೀಗೋಡು ಗ್ರಾಮದ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದಿದೆ.
ಈ ಘಟನೆಯಲ್ಲಿ ಕಾರಿನ ಮುಂಭಾಗದಲ್ಲಿದ್ದ ಗೀತಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದ್ದು, ಕಾರಿನಲ್ಲಿದ್ದ ಚಾಲಕ ಸೇರಿದಂತೆ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿಯೂ ಗಂಭೀರವಾಗಿದೆ. ಗಾಯಾಳುಗಳನ್ನು ಶಿವಮೊಗ್ಗ ನಗರದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಘಟನೆ ವೇಳೆ ಕಾರಿನಲ್ಲಿದ್ದ ಮಗುವೊಂದು ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ.
ಆಂಬುಲೆನ್ಸ್ ಸಿಗದೇ ಯುವತಿ ಸಾವು: ಅಪಘಾತದ ಸ್ಥಳದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರು. ಈ ವೇಳೆ ಸ್ಥಳೀಯರು ಆಂಬುಲೆನ್ಸ್ಗೆ ಕರೆ ಮಾಡಿದ್ದರು. ಬಾಳೆಹೊನ್ನೂರು ಆಸ್ಪತ್ರೆಯ ಆಂಬುಲೆನ್ಸ್ ಕೆಟ್ಟು ಹೋಗಿದ್ದರಿಂದ 108 ವಾಹನ ಬೇರೆ ಕಡೆಯಿಂದ ಸುಮಾರು 1 ಗಂಟೆ ಕಾಲ ತಡವಾಗಿ ಬಂದಿದ್ದು, ಆಂಬುಲೆನ್ಸ್ ಬರುವಷ್ಟರಲ್ಲಿ ಮಹಿಳೆ ನೋವಿನಿಂದ ಒದ್ದಾಡಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.