ಮೈಸೂರು: 'ರಂಗಾಯಣ ಉಳಿಸಿ' ಹೋರಾಟಕ್ಕೆ ಪರ್ಯಾಯವಾಗಿ ಸಂಘಪರಿವಾರದಿಂದ ಪ್ರತ್ಯೇಕ ಪ್ರತಿಭಟನೆ
ಮೈಸೂರು,ಡಿ.29: ರಂಗಾಯಣ ಉಳಿಸಿ ಹೋರಾಟ ಸಮಿತಿ ನಡೆಸುತ್ತಿರುವ ಪ್ರತಿಭಟನೆಗೆ ಪರ್ಯಾಯವಾಗಿ ಕೆಲವು ಸಂಘ ಪರಿವಾರದ ಕಾರ್ಯಕರ್ತರು ಪ್ರತ್ಯೇಕ ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದ ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾದ ಘಟನೆ ನಡೆಯಿತು.
ನಗರದ ಕಲಾಮಂದಿರದ ರಂಗಾಯಾಣ ಗೇಟ್ ಮುಂಭಾಗ ಕಳೆದ ಹತ್ತು ದಿನಗಳಿಂದ ರಂಗಾಯಣ ಉಳಿಸಿ ಹೋರಾಟ ಸಮಿತಿ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ನವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದು, ಅದಕ್ಕೆ ಪರ್ಯಾಯವಾಗಿ ಅಡ್ಡಂಡ ಸಿ.ಕಾರ್ಯಪ್ಪ ಪರವಾಗಿ ಕೆಲವು ಸಂಘ ಪರಿವಾರದ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದ ಪರಿಣಾಮ ಕೆಲ ಕಾಲ ಪರಿಸ್ಥಿತಿ ಉದ್ವಿಗ್ನ ಗೊಂಡು ಕೈ ಮೀರುವ ಹಂತ ತಲುಪಿತ್ತಾದರೂ ಎಸಿಪಿ ಶಿವಶಂಕರ್ ಪರಿಸ್ಥಿತಿ ನಿಭಾಯಿಸಯವಲ್ಲಿ ಯಶಸ್ವಿಯಾದರು.
ಚಕ್ರವರ್ತಿ ಸೂಲಿಬೆಲೆ ಬ್ರಿಗೇಡ್ ಗ್ರೂಪ್ ಮತ್ತು ಮೈಸೂರು ರಕ್ಷಣಾ ವೇದಿಕೆ ಕಾರ್ಯ ಕರ್ತರು ಅಡ್ಡಂಡ ಸಿ.ಕಾರ್ಯಪ್ಪ ಅವರ ಪರ ಜಯಗೋಷ ಕೂಗುವುದರ ಜೊತೆಗೆ ಪ್ರಗತಿಪರರ ವಿರುದ್ಧ ಧಿಕ್ಕಾರ ಕೂಗಿದರು.
ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡಿ ಕುವೆಂಪು ಅವರ ಜನ್ಮ ದಿನದ ಅಂಗವಾಗಿ ರಂಗ ಗೀತೆಗಳನ್ನು ಹಾಡುತ್ತಿದ್ದ ಹೋರಾಟಗಾರರು, ತಮ್ಮ ವಿರುದ್ಧ ಧಿಕ್ಕಾರ ಕೂಗಿದ್ದರಿಂದ ಕೆರಳಿ ಮತ್ತಷ್ಟು ಏರು ಧನಿಯಲ್ಲಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ದ ಧಿಕ್ಕಾರ ಕೂಗಿದರು.
ಇದೇ ವೇಳೆ ಪೊಲೀಸರು ಮತ್ತು ಪ್ರಗತಿ ಪರ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನೆ ವೇಳೆ ಧಿಕ್ಕಾರ ಕೂಗಿದ ಸಂಘಪರಿವಾರದ ಕಾರ್ಯ ಕರ್ತರ ವಿರುದ್ಧ ಕೆಂಡ ಮಂಡಲರಾದ ರೈತ ಸಂಘದ ರಾಜ್ಯ ಸಂಚಾಲಕ ಹೊಸಕೋಟೆ ಬಸವರಾಜ್ ಮಾತನಾಡಿ, ನಮ್ಮ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ ಎಂದರೆ ಏನರ್ಥ, ಅವರು ಬೇಕಿದ್ದರೆ ಅಡ್ಡಂಡ ಸಿ.ಕಾರ್ಯಪ್ಪನ ಪರ ಘೋಷಣೆ ಕೂಗಲಿ ನಮ್ಮ ವಿರುದ್ಧ ಧಿಕ್ಕಾರ ಕೂಗಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ, ಇದಕ್ಕೆ ಪೊಲೀಸರೆ ಹೊಣೆಗಾರರಾಗ ಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಮಾತನಾಡಿ, ಇದು ಬಹುತ್ವದ ನಾಡು ನಮ್ಮನ್ನು ತಡೆಯುವ ಅಧಿಕಾರ ಯಾರಿಗೂ ಇಲ್ಲ, ನಾವು ಇದೇ ಸ್ಥಳದಲ್ಲಿ ಪ್ರತಿಭಟನೆ ಮಾಡುತ್ತೇವೆ, ನಮ್ಮನ್ನು ತಡೆಯಲು ಯಾರಿಗೂ ಅಧಿಕಾರ ಇಲ್ಲ ಸಾಂವಿಧಾತ್ಮಕವಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ನಾವು ಯಾರಿಗೂ ತೊಂದರೆ ಕೊಡುವುದಾಗಲಿ ಇನ್ನೊಬ್ಬರನ್ನು ನೋಯಿಸುವುದಾಗಿ ಮಾಡುತ್ತಿಲ್ಲ, ಹಾಗಾಗಿ ಪೊಲೀಸರು ನಮಗೆ ಸಹಕರಿಸಬೇಕು ಎಂದು ಹೇಳಿದರು.
ಎಸಿಪಿ ಶಿವಶಂಕರ್ ಮಾತನಾಡಿ ಇಲ್ಲಿ ಪ್ರತಿಭಟನೆ ಮಾಡಬಾರದು ಎಂದು ಹೇಳಿದ್ದರೂ ಇಲ್ಲೇ ಮಾಡುತ್ತಿದ್ದೀರಿ, ಸಭೆ ಸೇರಿ ಮಾತನಾಡಿಕೊಂಡು ಬರುತ್ತೇವೆ ಎಂದು ಹೋದವರು ಮತ್ತೆ ಏನನ್ನೂ ಹೇಳಲಿಲ್ಲ, ಹಾಗಾಗಿ ಇಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ, ಜಿಲ್ಲಾಧಿಕಾರಿಗಳ ಕಚೇರಿ ಬಳಿ ಮಾಡಿ ಎಂದು ಹೇಳಿದರು. ಇದರಿಂದ ಕೆಂಡಮಂಡಲಾರದ ಹಿರಿಯ ಸಮಾಜವಾದಿ ಪ.ಮಲ್ಲೇಶ್, ನಾವು ಪೊಲೀಸರ ಮಾತನ್ನು ಕೇಳಿ ಪ್ರತಿಭಟನೆ ಮಾಡಬೇಕಿಲ್ಲ, ಯಾರಿಗೂ ತೊಂದರೆ ಕೊಟ್ಟು ಅಥವಾ ಸಂಚಾರಕ್ಕೆ ಅಡ್ಡಿ ಪಡಿಸಿ ಪ್ರತಿಭಟನೆ ಮಾಡುತ್ತಿಲ್ಲ, ಹಾಗಾಗಿ ನಾವು ಇಲ್ಲೇ ಪ್ರತಿಭಟನೆ ಮಾಡುತ್ತೇವೆ ಬೇಕಿದ್ದರೆ ಏನಾದರೂ ಮಾಡಿಕೊಳ್ಳಿ ಎಂದು ಆಕ್ರೋಶ ಭರಿತರಾಗಿ ಹೇಳಿದರು.
ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಎಸಿಪಿ ಶಿವಶಂಕರ್ ಎರಡೂ ಗುಂಪುಗಳನ್ನು ಬಂಧಿಸುವಂತೆ ಸೂಚಿಸಿದರಾದರೂ ಪ್ರಗತಿಪರರು ಒಂದು ಗಂಟೆ ಮಾತ್ರ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದು, ಅದರಂತೆ ಸಮಯ ಮುಗಿದ ಕಾರಣ ಪ್ರತಿಭಟನೆ ಸ್ಥಳ ಬಿಟ್ಟು ಕದಲಿದರು.
ಮತ್ತೆ ಕೆಲವು ಸಂಘಪರಿವಾರದ ಮತ್ತು ಬಿಜೆಪಿ ಕಾರ್ಯಕರ್ತರು ಪ್ರಗತಿಪರರ ವಿರುದ್ಧ ಧಿಕ್ಕಾರ ಕೂಗಿದರು. ಇದೇ ವೇಳೆ ಅವರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದಾಗ ಸ್ಥಳದಿಂದ ತೆರಳಿದ್ದಾರೆ.
ಪ್ರತಿಭಟನೆಯಲ್ಲಿ ಹಿರಿಯ ಸಮಾಜವಾದಿ ಪ.ಮಲ್ಲೇಶ್, ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ಖ್ಯಾತ ಸಾಹಿತಿ ಅರವಿಂದ ಮಾಲಗತ್ತಿ. ಪತ್ರಕರ್ತ ಟಿ.ಗುರುರಾಜ್, ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ್ (ಜನ್ನಿ), ಜಿ.ಪಿ.ಬಸವರಾಜು, ಕೃಷ್ಣ ಜನಮನ, ರಂಗಕರ್ಮಿಗಳಾದ ಕೃಷ್ಣಪ್ರಸಾದ್, ಮೈಮ್ ರಮೇಶ್, ಸಾಹಿತಿಗಳಾದ ನಾ.ದಿವಾಕರ, ಮಾಜಿ ಮೇಯರ್ ಪುರುಷೋತ್ತಮ್, ಬಿಎಸ್ಪಿ ಮುಖಂಡ ಚನ್ನಕೇಶವ, ಶಂಭಯ್ಯ, ದಸಂಸ ಮುಖಂಡರುಗಳಾದ ಚೋರನಹಳ್ಳಿ ಶಿವಣ್ಣ, ಕೆ.ವಿ.ದೇವೇಂದ್ರ, ಪ್ರೊ.ಕಾಳಚನ್ನೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.