ರಂಗಾಯಣ ರಾಷ್ಟ್ರದ ಸಾಂಸ್ಕೃತಿಕ ಸಂಸ್ಥೆ, ಇದಕ್ಕೆ ಮಸಿ ಬಳಿಯುವ ಕ್ರಿಯೆ ಸಮರ್ಥನೀಯವಾದುದಲ್ಲ: ಪ್ರೊ.ಅರವಿಂದ ಮಾಲಗತ್ತಿ
ಮೈಸೂರು: ರಂಗಾಯಣ ಎನ್ನುವಂತಹದು ರಾಷ್ಟ್ರದ ಸಾಂಸ್ಕೃತಿಕ ಕಿರೀಟ ಇದ್ದಂತೆ, ಇಂತಹ ಕೀರೀಟ ಬರಬೇಕಾದರೆ ಈ ಸಂಸ್ಥೆಗೆ ಘಟಾನು ಘಟಿಗಳು ನಿರ್ದೇಶಕರಾಗಿ ಬಂದು ತಮ್ಮ ಬೌದ್ಧಿಕ ಶಕ್ತಿಯನ್ನು ದಾರೆಯೆರೆದಿದ್ದಾರೆ. ಹೀಗೆ ಕಟ್ಟಿ ಬೆಳೆಸಿದ ರಾಷ್ಟ್ರೀಯ ಸಾಂಸ್ಕøತಿಕ ಸಂಸ್ಥೆಗೆ ಮಸಿ ಬಳಿಯುವ ಕ್ರಿಯೆ ಸಮರ್ಥಿನೀಯವಾದುದ್ದಲ್ಲ, ಹಾಗಾಗಿ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಖ್ಯಾತ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಆಗ್ರಹಿಸಿದರು.
ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟುವುದಕ್ಕೆ ಸಾಕಷ್ಟು ಶ್ರಮ ಬೇಕಾಗುತ್ತದೆ, ಅದನ್ನು ಕೆಡುವುದಕ್ಕೆ ಅಲ್ಪಾವಧಿ ಸಾಕಾಗುತ್ತದೆ ಎನ್ನುವುದಕ್ಕೆ ರಂಗಾಯಣದ ಇಂದಿನ ಪರಿಸ್ತಿತಿ ಇದು ದೊಡ್ಡ ಉದಾಹರಣೆಯಾಗಿದೆ ಎಂದು ಹೇಳಿದರು.
ಯಾವುದೇ ಒಂದು ಸಂಸ್ಥೆಯ ನಾಯಕರಾದವರಿಗೆ ನಾಯಕತ್ವದ ವಿಶಾಲ ಮನೋಭಾವ ಇರಬೇಕು ಹೊರತು ವ್ಯಕ್ತಿಗತ ನೆಲೆ ಇರಬಾರದು, ಆದರೆ ಅಡ್ಡಂಡ ಸಿ.ಕಾರ್ಯಪ್ಪ ತಮ್ಮ ಕೋಮುವಾದಿ ತನವನ್ನು ಇಲ್ಲಿ ಭಿತ್ತುತ್ತಿದ್ದಾರೆ ಹೊರತು ಸಾಂಸ್ಕೃತಿಕ ನೆಲೆಯಲ್ಲಿ ನೋಡುವ ಮನೋಭಾವ ಅವರಲ್ಲಿ ಇಲ್ಲವಾಗಿದೆ ಎಂಬುದು ಅವರ ಮಾತುಗಳ ಮೂಲಕ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಅಡ್ಡಂಡ ಸಿ.ಕಾರ್ಯಪ್ಪ, ಹೋರಾಟಗಾರರಿಗೆ ಒಂದು ರೀತಿಯಲ್ಲಿ ಆಹ್ವಾನ ಕೊಡುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ನಾಯಕರಾದವರಿಗೆ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಮನೋಭಾವ ಇರಬೇಕೆ ಹೊರತು ಇನ್ನೊಬ್ಬರ ಎದುರಿಗೆ ನಿಂತು ಪ್ರತಿಷ್ಠೆಯಿಂದ ಹೇಳುವುದು ಸಮರ್ಥನೀಯ ಕ್ರಮ ಅಲ್ಲ ಎಂದು ಹೇಳಿದರು.
ರಾಷ್ಟ್ರೀಯ ನೆಲೆಯಲ್ಲಿ ಮಾತನಾಡಿದ ಇಂತಹ ಸಂಸ್ಥೇಗೆ ಮಸಿ ಬಳಿಯುವ ಯಾವುದೇ ನಾಯಕರು ಹೆಚ್ಚುಕಾಲ ಇಲ್ಲಿ ಇರುವುದು ಕ್ಷೇಮವಲ್ಲ, ಗೌರಯುತವಾಗಿ ಅವರು ತೆರಳುವುದು ಸಂಸ್ಥೆಗೂ ಕ್ಷೇಮ ಮತ್ತು ಅವರಿಗೂ ಕ್ಷೇಮ,.ಹಾಗಾಗಿ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಇಲ್ಲಿಂದ ತೆರಳಬೇಕು ಎಂದು ಆಗ್ರಹಿಸಿದರು.