ಕೊರಗರನ್ನು ಕಾಡಿದ ಖಾಕಿ ಕೊರೋನ

Update: 2021-12-30 10:07 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಹುಟ್ಟೂರಿನಲ್ಲೇ, ಒಮೈಕ್ರಾನ್ ತನ್ನ ಭೀಕರ ದಾಳಿಯ ಮೂಲಕ ಮಾಧ್ಯಮಗಳಲ್ಲಿ ಸುದ್ದಿ ಮಾಡಿದೆ. ವಿಶೇಷವೆಂದರೆ, ದಾಳಿ ನಡೆಸುವ ಸಂದರ್ಭದಲ್ಲಿ ಒಮೈಕ್ರಾನ್ ಖಾಕಿ ಸಮವಸ್ತ್ರಗಳನ್ನು ಧರಿಸಿತ್ತು. ಕೈಯಲ್ಲಿ ಲಾಠಿ ಇತ್ತು. ಕಾಲಲ್ಲಿ ಬೂಟುಗಳಿದ್ದವು. ಎಲ್ಲಕ್ಕಿಂತ ವಿಶೇಷವಾಗಿ, ಈ ಒಮೈಕ್ರಾನ್‌ಗಳು ಮಾತನಾಡುತ್ತಿದ್ದವು. ದಾಳಿ ನಡೆಸುತ್ತಿರುವ ಸಂದರ್ಭದಲ್ಲಿ ಅವಾಚ್ಯವಾಗಿ ನಿಂದಿಸುತ್ತಿದ್ದವು. ಇನ್ನೂ ಒಂದು ವಿಶೇಷವಿದೆ. ಜಿಲ್ಲೆಯ ಹಲವೆಡೆಗಳಲ್ಲಿ ಜನಸಂದಣಿಗಳಿದ್ದರೂ, ಈ ಒಮೈಕ್ರಾನ್ ಕೊರಗರ ಕಾಲನಿಯ ಮೆಹೆಂದಿ ಕಾರ್ಯಕ್ರಮವನ್ನೇ ಹುಡುಕಿಕೊಂಡು ಹೋಗಿದೆ. ರಾತ್ರಿ ಸುಮಾರು ಹತ್ತು ಗಂಟೆಗೆ ಈ ಕಾಲನಿಗೆ ನುಗ್ಗಿದ ಒಮೈಕ್ರಾನ್ ತಂಡ, ಹೆಂಗಸು ಮಕ್ಕಳು ಎನ್ನದೆ ಎಲ್ಲರ ಮೇಲೆ ಹಲ್ಲೆ ನಡೆಸಿದೆ. ಹಲವರು ಈ ದಾಳಿಯಿಂದ ಗಾಯಗೊಂಡಿದ್ದಾರೆ. ಬಹುಶಃ ಒಮೈಕ್ರಾನ್ ಹೀಗೆ ಮನುಷ್ಯರ ವೇಷದಲ್ಲಿ ಬಡವರ ಕಾಲನಿಗೆ ನುಗ್ಗಿ, ಅಲ್ಲಿನ ಶುಭ ಕಾರ್ಯಕ್ರಮವನ್ನು ಧ್ವಂಸ ಮಾಡಿರುವುದು ವಿಶ್ವದಲ್ಲೇ ಪ್ರಥಮವಿರಬೇಕು.

ಕೊರೋನ ಬರಲಿ, ಒಮೈಕ್ರಾನ್ ಬರಲಿ, ಈ ದೇಶದಲ್ಲಿ ಚುನಾವಣಾ ಪ್ರಚಾರಗಳಿಗೆ, ರಾಜಕಾರಣಿಗಳ ವಿವಾಹ ಸಂಭ್ರಮಗಳಿಗೆ, ಉತ್ಸವ ಜಾತ್ರೆಗಳಿಗೆ ಯಾವುದೇ ಅಡ್ಡಿಯಾಗಿಲ್ಲ. ಒಮೈಕ್ರಾನ್‌ನಂತಹ ವೈರಸ್‌ನ ರಾಜಕೀಯ ಪ್ರಜ್ಞೆ ಅದೆಷ್ಟು ಸೂಕ್ಷ್ಮವಾಗಿದೆಯೆಂದರೆ, ಚುನಾವಣೆ ಘೋಷಣೆಯಾದಾಕ್ಷಣ ಅದು ಬದಿಗೆ ಸರಿದು ನಿಲ್ಲುತ್ತದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅಡ್ಡಿ ಪಡಿಸುವುದು ಸಂವಿಧಾನ ವಿರೋಧಿ ಕೃತ್ಯ ಎನ್ನುವುದು ಕೊರೋನಕ್ಕೆ ಬಹುಚೆನ್ನಾಗಿ ಗೊತ್ತಿದೆ. ಆದುದರಿಂದಲೇ, ರಾಜಕಾರಣಿಗಳು ಅದೆಷ್ಟು ಜನ ಸೇರಿಸಲಿ, ಅಲ್ಲಿಗೆ ತೆರಳಿ ತೊಂದರೆ ಕೊಟ್ಟದ್ದಿಲ್ಲ. ಹಾಗೆಯೇ ಚುನಾವಣೆಗೆ ಪೂರಕವಾಗಿರುವ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನೂ ಅತ್ಯಂತ ಗೌರವದಿಂದ ನೋಡುವ ಕೊರೋನವನ್ನು ‘ಅಪ್ಪಟ ಹಿಂದುತ್ವ ರಾಷ್ಟ್ರೀಯವಾದಿ’ ಎಂದು ಕರೆಯಬಹುದು. ಹಾಗೆಯೇ ರಾಜಕಾರಣಿಗಳು, ಕಾರ್ಪೊರೇಟ್ ಕುಳಗಳ ಮದುವೆ, ಮೆಹೆಂದಿ ಸಂಭ್ರಮಗಳಲ್ಲೂ ಕೊರೋನದ ಸಹಕಾರ ಸಣ್ಣದೇನೂ ಅಲ್ಲ. ಬೃಹತ್ ಉದ್ಯಮಿಗಳ ಜೊತೆಗೂ ಕೊರೋನ ಕೊಡು ಕೊಳ್ಳುವಿಕೆಯ ಸಂಬಂಧವನ್ನು ಹೊಂದಿದೆ. ಮತಾಂತರ ಕಾಯ್ದೆಯನ್ನು ಜಾರಿಗೊಳಿಸುವುದಕ್ಕೂ ಕೊರೋನ ಹೃದಯ ತುಂಬಿದ ಸಹಕಾರವನ್ನು ನೀಡಿದೆ. ಒಂದು ವೇಳೆ ಅದೇನಾದರೂ ಅಸಹಕಾರವನ್ನು ವ್ಯಕ್ತಪಡಿಸಿದ್ದಿದ್ದರೆ ಅಧಿವೇಶನವೇ ನಡೆಯುತ್ತಿರಲಿಲ್ಲ. ಅಧಿವೇಶನ ನಡೆಯದೇ ಇರುತ್ತಿದ್ದರೆ ‘ಮತಾಂತರ ಕಾಯ್ದೆ’ ಅನುಮೋದನೆಯಾಗುತ್ತಿರಲಿಲ್ಲ. ಈಗಾಗಲೇ ಕೊರೋನ ವೈರಸ್ ಹಲವು ಬಾರಿ ಮತಾಂತರಗೊಂಡ ಸಂತ್ರಸ್ತನಾಗಿರುವುದರಿಂದ, ಮತಾಂತರ ಕಾಯ್ದೆ ಜಾರಿ ಅದರ ವೈಯಕ್ತಿಕ ಅಗತ್ಯವೂ ಆಗಿರಬೇಕು. ಇಷ್ಟೆಲ್ಲ ಉದಾರಿಯಾಗಿರುವ ಕೊರೋನ ಕೋಟದಲ್ಲಿ ಕೊರಗರ ಕಾಲನಿಯ ಮೆಹೆಂದಿ ಕಾರ್ಯಕ್ರಮದ ಬಗ್ಗೆ ಮಾತ್ರ ಇಷ್ಟೊಂದು ಅಸಹನೆಯನ್ನು ವ್ಯಕ್ತಪಡಿಸಿದ್ದು ಮತ್ತು ಲಾಠಿಗಳ ಮೂಲಕ ಅಮಾಯಕರ ಮೇಲೆ ದಾಳಿ ನಡೆಸಿರುವುದು ಯಾಕಿರಬಹುದು ಎನ್ನುವುದು ಈಗ ರಾಜ್ಯಮಟ್ಟದ ಚರ್ಚೆಯಾಗಿ ಬಿಟ್ಟಿದೆ.

ಕೊರೋನ ನೀತಿಸಂಹಿತೆಯನ್ನು ಉಲ್ಲಂಘಿಸಿ ಮೆಹೆಂದಿ ಕಾರ್ಯಕ್ರಮ ನಡೆಸಿರುವುದು ಈ ದಾಳಿಗೆ ಕಾರಣವಾಗಿದ್ದರೆ, ಅದಕ್ಕಾಗಿ ಬೇರೆ ಬೇರೆ ಕಾನೂನು ಕ್ರಮಗಳಿವೆ. ಕೊರೋನ ಯಾವ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳುವಂತಿಲ್ಲ. ವಿವಿಧೆಡೆ ಹೊಸ ವರ್ಷದ ಹಿನ್ನೆಲೆಯಲ್ಲಿ ನೂರಾರು ಜನರ ಗುಂಪುಗಳು ಅಲ್ಲಲ್ಲಿ ಸಂಭ್ರಮ ಪಡುತ್ತಿರುವಾಗ ಅವರ ಮೇಲೆ ಮೃದು ನಿಲುವು ತಳೆದಿರುವ ಹಲವು ಉದಾಹರಣೆಗಳು ನಮ್ಮ ಮುಂದಿರುವಾಗ ಈ ಖಾಕಿ ವೇಷದ ಕೊರೋನಕ್ಕೆ, ಕೊರಗ ಸಮುದಾಯ ಮೆಹೆಂದಿ ಕಾರ್ಯಕ್ರಮ ಹಮ್ಮಿಕೊಂಡಾಗ ಮಾತ್ರ ಈ ಪರಿಯ ಸಿಟ್ಟು ಬಂದಿರುವುದು ಯಾಕೆ? ಬಹುಶಃ ಕೊರಗ ಸಮುದಾಯ ಮದುವೆ ಸಂಭ್ರಮವನ್ನು ಸಾರ್ವಜನಿಕವಾಗಿ ಆಚರಿಸುವುದು, ಅವರು ಸಂಗೀತ ಹಾಕಿ ನರ್ತಿಸಿವುದೇ ‘ರಾಷ್ಟ್ರೀಯವಾದಿ ಕೊರೋನ’ಕ್ಕೆ ಅಸಹನೆ ಉಂಟು ಮಾಡಿರಬಹುದೆ? ‘ನಾವು ಆಜ್ಞೆ ಕೊಟ್ಟಾಗ ಡೋಲು ಬಾರಿಸಿ ಕುಣಿಯಬೇಕಾದವರು, ಮೆಹೆಂದಿ ಹಚ್ಚಿ ತಮಗೆ ಬೇಕಾದಂತೆ ಕುಣಿದ ಕಾರಣಕ್ಕೆ ರಾಷ್ಟ್ರೀಯವಾದಿ ಕೊರೋನಕ್ಕೆ ಸಿಟ್ಟು ಬಂತೆ? ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದಾದರೆ, ಸಮಾರಂಭ ಹಮ್ಮಿಕೊಂಡವರ ಮೇಲೆ ಕೇಸು ದಾಖಲಿಸಬಹುದು ಅಥವಾ ಕಠಿಣ ಎಚ್ಚರಿಕೆ ನೀಡಿ ಕಾರ್ಯಕ್ರಮವನ್ನು ನಿಲ್ಲಿಸಬಹುದಿತ್ತು. ಆದರೆ ಇಲ್ಲಿ ಮದುಮಗ ಎನ್ನುವುದನ್ನೂ ನೋಡದೆ ಲಾಠಿಯಲ್ಲಿ ಥಳಿಸಿ ಇಡೀ ಕುಟುಂಬವನ್ನೇ ಅವಮಾನಿಸಲಾಗಿದೆ. ಇದು ಕೇವಲ ಆಕಸ್ಮಿಕ ಖಂಡಿತ ಅಲ್ಲ. ಖಾಕಿ ಧರಿಸಿದ ಕೊರೋನ ಮತ್ತು ಆ ಕೊರೋನವನ್ನು ಪೋಷಿಸುತ್ತಿರುವ ಸಮಾಜಕ್ಕೆ ಕೊರಗರ ಬಗ್ಗೆ ಇರುವ ಅಸಹನೆಯೇ ದಾಳಿಗೆ ಕಾರಣ. ಕೊರೋನ ಈ ನಾಡಿಗೆ ಆಗಮಿಸುವ ಮೊದಲೇ ಅಸ್ಪಶ್ಯತೆ, ಅಜಲು ಪದ್ಧತಿ ಮೊದಲಾದ ಮಾರಕ ವೈರಸ್‌ಗಳಿಂದ ಸಂತ್ರಸ್ತರಾಗಿರುವ ಕೊರಗರು ಸಹಜವಾಗಿಯೇ ಕೊರೋನದ ಕುರಿತಂತೆ ಹೆಚ್ಚಿನ ಆತಂಕವನ್ನು ಹೊಂದಿಲ್ಲ. ಅವರನ್ನು ಕಾಡುತ್ತಿರುವ ಬಡತನ, ಅನಕ್ಷರತೆ, ಹಸಿವು, ಅಸ್ಪಶ್ಯತೆಗಳಿಗೆ ಹೋಲಿಸಿದರೆ ಕೊರೋನ ಒಂದು ವೈರಸ್ಸೇ ಅಲ್ಲ. ತನಗಿಂತಲೂ ಕ್ರೂರವಾದ ವೈರಸ್‌ಗಳನ್ನು ಎದುರಿಸಿ ಪ್ರತಿರೋಧ ಶಕ್ತಿಯನ್ನು ತನ್ನದಾಗಿಸಿಕೊಂಡಿರುವ ಕೊರಗರ ಕುರಿತಂತೆ ಕೊರೋನ ಅಸೂಯೆ ಪಟ್ಟು ಈ ದಾಳಿ ಎಸಗಿರುವ ಸಾಧ್ಯತೆಗಳೂ ಇಲ್ಲದಿಲ್ಲ.

ಒಂದು ಕಾಲದಲ್ಲಿ 55,000ಕ್ಕೂ ಮಿಕ್ಕಿದ್ದ ಕೊರಗರ ಸಂಖ್ಯೆ ಇಂದು 11,000 ಕ್ಕಿಳಿದಿದೆ. ಈ ಇಳಿಕೆಗೂ ಕೊರೋನ ಸಾವಿಗೂ ಯಾವ ಸಂಬಂಧವೂ ಇಲ್ಲ. ಪಾಕಿಸ್ತಾನದಲ್ಲಿ ಹಿಂದೂಗಳ ಸಂಖ್ಯೆ ಇಳಿಮುಖವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿರುವ ನಮ್ಮ ಬಿಜೆಪಿ ನಾಯಕರು, ಅವಿಭಜಿತ ದಕ್ಷಿಣ ಕನ್ನಡದಲ್ಲಿ ಅಳಿವಿನಂಚಿಗೆ ತಲುಪುತ್ತಿರುವ ಕೊರಗ ಸಮುದಾಯದ ಬಗ್ಗೆ ಯಾವತ್ತೂ ಸಾರ್ವಜನಿಕವಾಗಿ ಮಾತನಾಡಿದ್ದಿಲ್ಲ. ಈಗಲೂ ಕೊರಗ ಸಮುದಾಯದ ಜನರ ಸರಾಸರಿ ಆಯಸ್ಸು 50 ವರ್ಷವನ್ನು ದಾಟುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಮೃತಪಟ್ಟವರಲ್ಲಿ 25 ವರ್ಷದಿಂದ 45 ವರ್ಷದವರೇ ಅಧಿಕ. ಅಪೌಷ್ಟಿಕತೆ ಇವರ ಸಾವಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಇವರಿಗೆ ಪುನರ್ವಸತಿ ನೀಡುವ ಹೆಸರಿನಲ್ಲಿ ಒಂದಿಷ್ಟು ಜನರಿಗೆ ಭೂಮಿಯನ್ನು ನೀಡಲಾಗಿದೆಯಾದರೂ, ಆ ಬಂಜರು ಭೂಮಿಯಲ್ಲಿ ಏನನ್ನು ಬೆಳೆಯಬೇಕು, ಹೇಗೆ ಬೆಳೆಯಬೇಕು ಎನ್ನುವುದು ತಿಳಿಯದೆ ಅವರಲ್ಲಿ ಹಲವರು ಮತ್ತೆ ತಮ್ಮ ಮೂಲ ಬದುಕಿಗೆ ಮರಳಿದ್ದಾರೆ. ಈ ಪುನರ್ವಸತಿ ಯೋಜನೆಯು ಇನ್ನೂ ಶೇ. 50ರಷ್ಟು ದಲಿತರನ್ನು ತಲುಪಿಲ್ಲ. ಕೊರೋನ ಕಾಲದಲ್ಲಿ ಇವರ ಸಂಕಟಗಳೇನು ಎಂದು ಪ್ರತ್ಯೇಕವಾಗಿ ಸರಕಾರ ವಿಚಾರಿಸಿದ್ದಿಲ್ಲ. ಸರಕಾರದ ಸವಲತ್ತುಗಳನ್ನು ಪಡೆದ ಕೊರಗರು ಒಂದಿಷ್ಟು ನೆಮ್ಮದಿಯ ಬದುಕನ್ನು ನಡೆಸುತ್ತಾ, ಮುಖ್ಯವಾಹಿನಿಯಲ್ಲಿ ಗುರುತಿಸಲು ಪ್ರಯತ್ನ ಪಟ್ಟರೆ ಸಮಾಜದ ಕಣ್ಣು ಕೆಂಪಗಾಗುತ್ತದೆ. ತಮ್ಮಂತೆಯೇ ಮೆಹೆಂದಿ, ಸೀಮಂತ ಎಂದು ಕಾರ್ಯಕ್ರಮಗಳನ್ನು ನಡೆಸುತ್ತಾ ಸಂಭ್ರಮಿಸುವುದು, ಈ ನೆಲದ ಜಾತೀಯ ವೈರಸ್‌ಗಳನ್ನು ಕೆರಳಿಸುವುದು ಸಹಜವೂ ಕೂಡ. ಜಾತಿಯ ವೈರಸ್ ಮತ್ತು ಕೊರೋನ ವೈರಸ್ ಜೊತೆಗೂಡಿದರೆ ಏನಾಗಬಹುದೋ ಅದೇ ಮಂಗಳವಾರ ಕೊರಗರ ಕಾಲನಿಯಲ್ಲಿ ನಡೆದಿದೆ. ಈ ಕೊರಗ ಸಮುದಾಯದ ಅಮಾಯಕರ ಮೇಲೆ ಎರಗಿದ ಧೀರೋದಾತ್ತ ಪಡೆಗಳಿಗೆ ರಾಜ್ಯ ಸರಕಾರ ಶೀಘ್ರದಲ್ಲೇ ‘ಕೊರೋನ ಶೌರ್ಯ ಪ್ರಶಸ್ತಿ’ಯನ್ನು ನೀಡಿ ಗೌರವಿಸಿ, ತನ್ನ ಯೋಗ್ಯತೆಯನ್ನು ದೇಶಕ್ಕೆ ಬಹಿರಂಗಪಡಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News