ವಿದ್ಯುತ್ ಸಮಸ್ಯೆ ನಿವಾರಣೆಗೆ ಕ್ರಮ: ಸಚಿವ ಸುನೀಲ್ ಕುಮಾರ್

Update: 2021-12-30 12:39 GMT

ಬೆಂಗಳೂರು, ಡಿ. 30: ಗ್ರಾಮೀಣ ಪ್ರದೇಶಗಳಲ್ಲಿ ರೈತರಿಗೆ ಆಗುತ್ತಿರುವ ವಿದ್ಯುತ್ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಶೇ.100ರಷ್ಟು ವಿದ್ಯುತ್ ಸಮಸ್ಯೆ ನಿವಾರಣೆ ಗುರಿ ಸಾಧಿಸಲಾಗಿದೆ ಎಂದು ಇಂಧನ ಸಚಿವ ವಿ.ಸುನಿಲ್‍ಕುಮಾರ್ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿದ್ಯುತ್ ಪರಿವರ್ತಕಗಳಿಗೆ ಸಂಬಂಧಿಸಿದಂತೆ ರೈತರು ದೂರು ಸಲ್ಲಿಸಿದ 24 ಗಂಟೆಯೊಳಗೆ ಸಮಸ್ಯೆ ಪರಿಹಾರದ ಮೂಲಕ ವಿದ್ಯುತ್ ಇಲಾಖೆ ಶೇ.100 ರಷ್ಟು ಗುರಿ ಸಾಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ವಿದ್ಯುತ್ ಸರಬರಾಜು ಕಂಪೆನಿ ವ್ಯಾಪ್ತಿಯಲ್ಲಿ ಪರಿವರ್ತಕಗಳ ಬ್ಯಾಂಕ್ ಸ್ಥಾಪಿಸಲಾಗಿದೆ, ರೈತರ ಮನವಿಗೆ ತಕ್ಷಣ ಸ್ಪಂದಿಸುವ ಮೂಲಕ ಜನಸ್ನೇಹಿ ಕಾರ್ಯದಲ್ಲಿ ವಿದ್ಯುತ್ ಇಲಾಖೆ ಇತರ ಇಲಾಖೆಗಳಿಗಿಂತ ಮುಂದಿದೆ. 27,650 ವಿದ್ಯುತ್ ಪರಿವರ್ತಕಗಳು ವಿಫಲಗೊಂಡಿರುವ ಕುರಿತು ರೈತರು ದೂರು ದಾಖಲಿಸಿದ್ದರು. 24 ಗಂಟೆಯೊಳಗೆ ಈ ಪೈಕಿ 21,145 ಪರಿವರ್ತಕಗಳನ್ನು ಬದಲಾಯಿಸಲಾಗಿದೆ. ರಸ್ತೆ ಸಂಪರ್ಕ ಸೇರಿದಂತೆ ಉಳಿದ ಅಡೆತಡೆಗಳಿರುವೆಡೆ 24 ಗಂಟೆಗಳ ನಂತರ 6,492 ಪರಿವರ್ತಕಗಳನ್ನು ಬದಲಾಯಿಸುವ ಮೂಲಕ ಶೇ.100 ಗುರಿ ಸಾಧಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News