ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ: ನನ್ನ ಕ್ಷೇತ್ರದಲ್ಲಿ ಬಿಜೆಪಿ ಯಾವತ್ತೂ ಗೆದ್ದಿಲ್ಲ ಎಂದ ಸಿಎಂ ಬೊಮ್ಮಾಯಿ

Update: 2021-12-30 13:57 GMT

ಬೆಂಗಳೂರು, ಡಿ. 30: ‘ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನನ್ನ ಕ್ಷೇತ್ರದಲ್ಲಿ ಬಿಜೆಪಿ ಯಾವತ್ತೂ ಗೆಲುವು ಸಾಧಿಸಿಲ್ಲ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿಗ್ಗಾವಿ ತಾಲೂಕಿನ ಬಂಕಾಪುರ ಪುರಸಭೆ ಹಾಗೂ ಹಾವೇರಿ ತಾಲೂಕು ಗುತ್ತಲ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಈ ಬಾರಿ ನಮ್ಮ ಸಾಧನೆ ಉತ್ತಮವಾಗಿದೆ ಎಂದು ತಿಳಿಸಿದರು.

ಹಲವು ಕಡೆ ಅಲ್ಪಸಂಖ್ಯಾತರು ಜಾಸ್ತಿ ಇದ್ದಾರೆ. ಹೀಗಾಗಿ ನಮಗೆ ದೊಡ್ಡ ಪ್ರಮಾಣದ ಯಶಸ್ಸು ಸಿಕ್ಕಿಲ್ಲ. ಈ ಬಾರಿ ಗದಗ ಮತ್ತಿತರ ಕಡೆ ಕೆಲವು ಪ್ರಯತ್ನಗಳನ್ನು ಮಾಡಿದ್ದರಿಂದ ಯಶಸ್ಸು ಸಿಕ್ಕಿದೆ. ಇನ್ನಷ್ಟು ಕೆಲಸ ಮಾಡಬೇಕು, ಮಾಡುತ್ತೇವೆ. ಯಾವುದೇ ಭೇದ ಇಲ್ಲದೇ ಎಲ್ಲ ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆಗಳ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು.

ನಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ಬಿಜೆಪಿ ಎಂದೂ ಗೆಲುವು ಸಾಧಿಸಿಲ್ಲ. ಅಲ್ಲಿ ಅಲ್ಪಸಂಖ್ಯಾತರು ಶೇ.65ರಷ್ಟು ಇದ್ದಾರೆ. ಇದನ್ನು ನಾನು ಹೇಳುವುದು ಸಮಂಜಸ ಅಲ್ಲ. ಅದೇ ಪರಿಸ್ಥಿತಿ ಗುತ್ತಲದಲ್ಲೂ ಇದೆ ಎಂದ ಅವರು, ಕಾಂಗ್ರೆಸ್‍ನವರಿಗೆ ಬುಡನೇ ಇಲ್ಲ. ಹೀಗಾಗಿ ಮನಸೋ ಇಚ್ಛೆ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಗ್ರಾ.ಪಂ., ಪಟ್ಟಣ ಪಂಚಾಯಿತಿಯಲ್ಲಿ ನಮ್ಮ ಸಂಖ್ಯೆ ಹೆಚ್ಚಿದೆ ಎಂದು ಸಮರ್ಥಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News