×
Ad

ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ: ಕಾಂಗ್ರೆಸ್ ಜಯಭೇರಿ, ಬಿಜೆಪಿಗೆ ಅಲ್ಪತೃಪ್ತಿ, ಜೆಡಿಎಸ್ ಗೆ ನಾಲ್ಕನೇ ಸ್ಥಾನ

Update: 2021-12-30 19:22 IST

ಬೆಂಗಳೂರು, ಡಿ. 30: ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸಹಿತ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಪ್ರತಿಪಕ್ಷ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನಗಳಿಸಿದ್ದು, ಆಡಳಿತಾರೂಢ ಬಿಜೆಪಿ ಹಿನ್ನಡೆ ಅನುಭವಿಸಿದ್ದು, ಪಕ್ಷೇತರರು ಮೂರನೆ ಸ್ಥಾನದಲ್ಲಿದ್ದರೆ, ಜೆಡಿಎಸ್ ನಾಲ್ಕನೆ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಅವಧಿ ಮುಕ್ತಾಯಗೊಂಡಿದ್ದ 58 ನಗರ ಸ್ಥಳೀಯ ಸಂಸ್ಥೆಗಳು, 59 ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಹಾಗೂ ವಿವಿಧ ಕಾರಣಗಳಿಂದ ತೆರವಾಗಿದ್ದ ಸ್ಥಳೀಯ ಸಂಸ್ಥೆಯ 9 ವಾರ್ಡ್‍ಗಳು ಹಾಗೂ 401 ಗ್ರಾಮೀಣ ಸ್ಥಳೀಯ ಸಂಸ್ಥೆ ಉಪಚುನಾವಣೆ ಸೇರಿದಂತೆ ಸಾರ್ವತ್ರಿಕ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಒಟ್ಟು 1,184 ವಾರ್ಡ್‍ಗಳ ಪೈಕಿ ಕಾಂಗ್ರೆಸ್-501, ಬಿಜೆಪಿ-433, ಜೆಡಿಎಸ್-45, ಆಮ್ ಆದ್ಮಿ, ಎಐಎಂಐಎಂ 2, ಜನತಾಪಕ್ಷ 1, ಎಸ್‍ಡಿಪಿಐ 6 ಹಾಗೂ 195 ಸ್ಥಾನಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

ಒಟ್ಟು 26 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ, ಆಡಳಿತಾರೂಢ ಬಿಜೆಪಿ ಕೇವಲ 17ರಲ್ಲಿ ಜಯಗಳಿಸಿದೆ. ಒಂದು ಸ್ಥಳೀಯ ಸಂಸ್ಥೆಯಲ್ಲಿ ಜೆಡಿಎಸ್ ಬಾವುಟ ಹಾರಿಸಿದೆ. 10 ಸ್ಥಳೀಯ ಸಂಸ್ಥೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಉಳಿದ 4 ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷೇತರರು ಅಧಿಕಾರದ ಗದ್ದುಗೆ ಏರಿದ್ದಾರೆ.

19 ಪುರಸಭೆಗಳ ಪೈಕಿ ಕಾಂಗ್ರೆಸ್ 11ರಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ 6 ಕಡೆಗಳಲ್ಲಿ ಅಧಿಕಾರ ಹಿಡಿದಿದೆ. 34 ಪಟ್ಟಣ ಪಂಚಾಯಿತಿಗಳ ಪೈಕಿ ಕಾಂಗ್ರೆಸ್ 15 ಹಾಗೂ ಬಿಜೆಪಿ 8 ಕಡೆಗಳಲ್ಲಿ ಜಯ ಗಳಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಶಿಗ್ಗಾಂವ ತಾಲೂಕಿನ ಬಂಕಾಪುರ ಪುರಸಭೆಯಲ್ಲಿ ಹಾಗೂ ಗುತ್ತಲ ಪ.ಪಂ.ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ಬಿಜೆಪಿ ಮುಖಭಂಗ ಅನುಭವಿಸಿದೆ.

ನಗರ ಸ್ಥಳೀಯ ಸಂಸ್ಥೆಗಳಿಗೆ ಡಿ.27ರಂದು ಮತದಾನ ನಡೆದಿದ್ದು, ಇಂದು(ಡಿ.30) ಬೆಳಗ್ಗೆ 8ಗಂಟೆಯಿಂದ ಆಯಾ ಸ್ಥಳೀಯ ಸಂಸ್ಥೆಗಳ ಕೇಂದ್ರದಲ್ಲಿ ಮತ ಎಣಿಕೆ ಕಾರ್ಯ ನಡೆದಿತ್ತು. ಇದೀಗ ಫಲಿತಾಂಶ ಹೊರಬಿದ್ದಿದೆ. ಶೇ.42ರಷ್ಟು ಕಾಂಗ್ರೆಸ್, ಶೇ.36ರಷ್ಟು ಬಿಜೆಪಿ ಹಾಗೂ ಪಕ್ಷೇತರರು ಶೇ.17ರಷ್ಟು ಸ್ಥಾನಗಳನ್ನು ಗಳಿಸಿದ್ದಾರೆ ಎಂದು ಗೊತ್ತಾಗಿದೆ.

‘ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶವನ್ನು ಗಳಿಸಿದರೆ ಕಾಂಗ್ರೆಸ್ ಪರವಾದ ಅಲೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ‘ಪಟ್ಟಣ ಪಂಚಾಯಿತಿಯಲ್ಲಿ ನಮ್ಮ ಸಂಖ್ಯೆ ಹೆಚ್ಚಿದೆ. ಕಾಂಗ್ರೆಸ್‍ನವರು ಕನಸು ಕಾಣಲು ತೆರಿಗೆ ಕೊಡಬೇಕಿಲ್ಲ. ಅವರು ಕನಸು ಕಾಣಲಿ. ಆದರೆ, 2023ರ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುವುದು' ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News