×
Ad

ಕಾಂಗ್ರೆಸ್ ಪಾದಯಾತ್ರೆಯಿಂದ ಮೇಕೆದಾಟು ಬಿಕ್ಕಟ್ಟು ಮತ್ತಷ್ಟು ಜಟಿಲವಾಗುತ್ತದೆ: ಎಚ್.ಡಿ.ಕುಮಾರಸ್ವಾಮಿ

Update: 2021-12-30 20:10 IST

ಬಿಡದಿ, ಡಿ.30: ಮೇಕೆದಾಟು ವಿಚಾರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದು, ಕಾಂಗ್ರೆಸ್ ಪಾದಯಾತ್ರೆ ಕೇವಲ ಮತಕ್ಕಾಗಿ ಮಾಡುತ್ತಿರುವ ಯಾತ್ರೆ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಗುರುವಾರ ಬಿಡದಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು ನನ್ನನ್ನು ಪಾದಯಾತ್ರೆಗೆ ಕರೆದಿದ್ದಾರೆ. ಆ ಯಾತ್ರೆಯಲ್ಲಿ ಭಾಗವಹಿಸಿ ಏನು ಮಾಡೋದು ಹೇಳಿ ಎಂದು ಪ್ರಶ್ನಿಸಿದರು.

ಕೇವಲ ಒಂದು ತಾಂತ್ರಿಕ ಸಮಸ್ಯೆಯಿಂದ ಯೋಜನೆ ನನೆಗುದಿಗೆ ಬಿದ್ದಿದೆ. ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮಾತನಾಡಬೇಕು. ಅದು ಬಿಟ್ಟು ಪಾದಯಾತ್ರೆ ಮಾಡಿ ಆ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. 

ಗೌಡರ ಪಾದಯಾತ್ರೆ ಬೇರೆ: ದೇವೇಗೌಡರು ಹಲವು ಬಾರಿ ಪಾದಯಾತ್ರೆ ಮಾಡಿದ್ದಾರೆ. ನಾನು ಕೂಡ ಹುಬ್ಬಳ್ಳಿವರೆಗೆ ಪಾದಯಾತ್ರೆ ಮಾಡಿದ್ದೆ. ಆ ಪಾದಯಾತ್ರೆಗಳಿಗೂ ಇದಕ್ಕೂ ವ್ಯತ್ಯಾಸ ಇದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಚನ್ನಪಟ್ಟಣದ ವಿಠಲೇನಹಳ್ಳಿಯಿಂದ ಬೆಂಗಳೂರಿನವರೆಗೆ ದೇವೇಗೌಡರು ಪಾದಯಾತ್ರೆ ಮಾಡಿದ್ದರು. ಗೋಲಿಬಾರ್‍ನಲ್ಲಿ ಇಬ್ಬರು ರೈತರು ಸಾವನ್ನಪ್ಪಿದ್ದರು. ಅದರ ವಿರುದ್ಧ ಅವರು ಪಾದಯಾತ್ರೆ ಮಾಡಿದ್ದರು. ಕುಣಿಗಲ್‍ನಿಂದ ಬೆಂಗಳೂರುವರೆಗೆ ಗೋಲಿಬಾರ್‍ಗೆ ಬಲಿಯಾಗಿದ್ದ ರೈತನ ವಿಚಾರವಾಗಿ ಪಾದಯಾತ್ರೆ ಮಾಡಿದ್ದರು. ದೊಡ್ಡಳ್ಳಿ ಗೋಲಿಬಾರ್‍ನಲ್ಲಿ ಕಾಂಗ್ರೆಸ್ ಸರಕಾರ ಇಬ್ಬರು ರೈತರ ಸಾವಿಗೆ ಕಾರಣವಾಗಿತ್ತು. ಆಗ 9 ದಿನ ದೇವೇಗೌಡರು ಉಪವಾಸ ಮಾಡಿದ್ದರು ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.

ಈ ಪಾದಯಾತ್ರೆ ಜನತೆಯ ಒಳಿತಿಗೆ ಅನ್ನುತ್ತಿದ್ದಾರೆ ಕಾಂಗ್ರೆಸ್ ನಾಯಕರು. ಆದರೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪಾದಯಾತ್ರೆ ಮಾಡುತ್ತಿದ್ದಾರೆ. ಮೇಕೆದಾಟು ಡಿಪಿಆರ್ ನಾನು ಮಾಡಿ ಕಳುಹಿಸಿದ್ದೆ ಎಂದು ಸಿದ್ದರಾಮಯ್ಯ ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ, ನಾನು ಸಿಎಂ ಆಗಿದ್ದಾಗ ಯೋಜನೆಯ ಡಿಪಿಆರ್ ಮಾಡಿ ಕೇಂದ್ರ ಜಲ ಆಯೋಗಕ್ಕೆ ಕಳಿಸಲಾಯಿತು ಎಂದು ಅವರು ತಿಳಿಸಿದರು.

ಐದು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಆಗಲೇ ಡಿಪಿಆರ್ ಮಾಡಬೇಕಿತ್ತು. ಮಾಡಬೇಡಿ ಎಂದು ಅವರನ್ನು ಹಿಡಿದುಕೊಂಡಿದ್ದವರು ಯಾರು? ಅವರಿಗೆ ಅಡ್ಡಿ ಮಾಡಿದವರು ಯಾರು? ಎಂದು ಪ್ರಶ್ನೆ ಮಾಡಿದ ಅವರು, ಮೇಕೆದಾಟು ವಿಚಾರದಲ್ಲಿ ಪಾದಯಾತ್ರೆ ಅವಶ್ಯಕತೆ ಇಲ್ಲ, ಟೆಕ್ನಿಕಲ್ ಸಮಸ್ಯೆ ಇದೆಯಷ್ಟೇ ಎಂದರು.

ಇನ್ನು ಅಧಿಕಾರದಲ್ಲಿರುವ ಬಿಜೆಪಿ ಸರಕಾರಕ್ಕೆ ಖಜಾನೆಯಲ್ಲಿ ಹಣ ಇಲ್ಲ ಎನ್ನುವ ಸಮಸ್ಯೆ. ಹೀಗಾಗಿ ಅವರು ಯೋಜನೆಯನ್ನು ಕೈಗೆತ್ತಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಯೋಜನೆಗೆ ಅನುಮತಿ ಸಿಕ್ಕಿದರೆ ಕೆಲಸ ಮಾಡಲು ದುಡ್ಡೆಲ್ಲಿ ತರೋದು ಅನ್ನುವ ಆತಂಕದಲ್ಲಿ ಸರಕಾರ ಇದೆ ಎಂದು ಕುಮಾರಸ್ವಾಮಿ ಹೇಳಿದರು.

ಪಾದಯಾತ್ರೆ ಮಾಡುವುದರಿಂದ ಇವರಿಗೆ ಅನುಮತಿ ಸಿಗುತ್ತ್ತಾ? ಎಂದ ಕುಮಾರಸ್ವಾಮಿ, ಇವರ ಪಾದಯಾತ್ರೆಯಿಂದಾಗಿ ಸಮಸ್ಯೆ ಇನ್ನೂ ಜಟಿಲವಾಗಿ ಕೇಂದ್ರ ಸರಕಾರ ಅನುಮತಿ ನೀಡುವುದು ವಿಳಂಬ ಆಗಬಹುದು ಅಥವಾ ಬಿಕ್ಕಟ್ಟು ಇನ್ನೂ ಹೆಚ್ಚಬಹುದು. ಇದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದರು.

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಿನ ಸಭೆಯಲ್ಲಿ ಮೇಕೆದಾಟು ಯೋಜನೆಗೆ ಕ್ಲಿಯರೆನ್ಸ್ ಸಿಗಲಿದೆ ಎಂದಿದ್ದರು. ಈಗ ಇವರ ಪಾದಯಾತ್ರೆಯಿಂದ ಸಿಗುವ ಅನುಮತಿಯೂ ಮತ್ತೆ ಮುಂದೆ ಹೋಗಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News