ಇಲಕಲ್‌ನ ಶಾಲೆಯಲ್ಲಿ ಮತಾಂತರ ಎಂದು ಸಂಘ ಪರಿವಾರದ ಆರೋಪ: ಶಾಲೆ ಬಂದ್ ಮಾಡಿಸಿದ ಬಿಇಒ
ಇಲಕಲ್ (ಬಾಗಲಕೋಟೆ): ಇಲ್ಲಿನ ‘ಸೇಂಟ್ ಪೌಲ್ಸ್ ಕಾನ್ವೆಂಟ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಆಮಿಷ ಒಡ್ಡಿ ಮತಾಂತರ ಮಾಡಲಾಗುತ್ತಿದ್ದು, ಕೂಡಲೇ ಶಾಲೆಯ ಮಾನ್ಯತೆ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಸಂಘಪರಿವಾರ ಬುಧವಾರ ಸಂಜೆ ಪ್ರತಿಭಟನೆ ನಡೆಸಿತು.
ಈ ಶಾಲೆಯಲ್ಲಿ 400 ವಿದ್ಯಾರ್ಥಿಗಳು ಓದುತ್ತಿದ್ದು, ಮುಂದಿನ ಆದೇಶದವರೆಗೆ ಶಾಲೆ ಮುಚ್ಚುವಂತೆ ಬಿಇಒ ಅವರು ಸೂಚನೆ ನೀಡಿದ್ದರಿಂದ ಡಿ.27ರಿಂದ ಶಾಲೆಯನ್ನು ಮುಚ್ಚಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಬಿಇಒ ಹೊರಡಿಸಿರುವ ಜ್ಞಾಪನ ಪತ್ರದಲ್ಲಿ "ಕ್ರಿಸ್ಮಸ್ ಆಚರಿಸಿ ತರಗತಿಯಲ್ಲಿ ಬಾಡೂಟ ನೀಡಿರುವುದು ಸಾರ್ವಜನಿಕರಿಗೆ ಹಾಗು ಶಿಕ್ಷಣ ಇಲಾಖೆಗೆ ಮುಜುಗರ ತಂದಿದೆ" ಎಂದು ಹೇಳಿದ್ದಾರೆ.
‘ಡಿ.25ರಂದು ಇಲ್ಲಿನ ಸೇಂಟ್ ಪೌಲ್ಸ್ ಕಾನ್ವೆಂಟ್ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆ ನೆಪದಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಸೇರಿಸಿ, ಅವರಿಗೆ ಮಾಂಸದ ಊಟ ಬಡಿಸಿ, ಪ್ರಸಾದವೆಂದು ಮದ್ಯ ಹಾಗೂ ‘ಸತ್ಯವೇದ’ ಎನ್ನುವ ಪುಸ್ತಕ ನೀಡಿದ್ದಾರೆ. ಶಾಲೆಯ ನೆರೆಹೊರೆಯವರು ನೀಡಿದ ದೂರಿನ ಮೇರೆಗೆ ಶಿಕ್ಷಣ ಸಂಯೋಜಕರು ಶಾಲೆಗೆ ಭೇಟಿ ನೀಡಿ, ಬಿಇಒ ಅವರಿಗೆ ವರದಿ ನೀಡಿದ್ದಾರೆ. ಆದರೂ ಈವರೆಗೆ ಶಾಲೆಯ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಸಂಘ ಪರಿವಾರದ ಮುಖಂಡರು ಆರೋಪಿಸಿದ್ದಾರೆ.
‘ಶಾಲೆಯ ಮುಖ್ಯ ಶಿಕ್ಷಕಿ ಮತ್ತು ಆಡಳಿತ ಮಂಡಳಿ ಸದಸ್ಯ ಹಾಗು ಹರಪನಹಳ್ಳಿಯ ಪಾದ್ರಿಯೋರ್ವರು, ಶಾಲೆಯಲ್ಲಿ ಪ್ರತಿ ರವಿವಾರ ವಿದ್ಯಾರ್ಥಿಗಳು, ಪಾಲಕರು ಹಾಗೂ ವಿವಿಧ ಸಮುದಾಯಗಳ ಬಡವರನ್ನು ಹಾಗೂ ಮುಗ್ಧರನ್ನು ಕರೆ ತಂದು ಆಮಿಷ ಒಡ್ಡುತ್ತಿದ್ದಾರೆ. ಇಲ್ಲಿ ಕ್ರೈಸ್ತ ಧರ್ಮದ ಬೋಧನೆ ಮಾಡಿ, ಮತಾಂತರಕ್ಕೆ ಪ್ರಚೋದಿಸುತ್ತಿದ್ದಾರೆ’ ಎಂದು ಅವರು ದೂರಿದರು.
ಬಳಿಕ ತಹಶಿಲ್ದಾರ್ ರತ್ನಾ ಕೆ. ಅವರಿಗೆ ಮನವಿ ಸಲ್ಲಿಸಿದರು.
ಶಾಲೆ ಬಂದ್ ಮಾಡಿಸಿರುವ ಬಗ್ಗೆ ಇಲ್ಲಿನ ಬಿಇಒ ಅವರನ್ನು 'ವಾರ್ತಾಭಾರತಿ' ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ ಬಿಇಒ ಅವರು, ಶಾಲೆ ಎಂಬುದು ಪವಿತ್ರವಾದ ಸ್ಥಳವಾಗಿದ್ದು, ತರಗತಿಯಲ್ಲಿ ಊಟ ಮಾಡಿರುವುದು ಸರಿಯಲ್ಲ. ಆದ್ದರಿಂದ ನೋಟೀಸ್ ಜಾರಿ ಮಾಡಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಶಾಲೆಯ ಮುಖ್ಯೋಪಾಯರು ಮತ್ತು ಆಡಳಿತ ಮಂಡಳಿಯ ಜಾಕ್ಸನ್ ಎಂಬವರು ಮಾತನಾಡಿ, ಕಾರ್ಯಕ್ರಮ ನಡೆದಿರುವುದು ಶಾಲಾ ಕಟ್ಟಡದಲ್ಲಿ ಅಲ್ಲ, ಶಾಲೆಯೂ ಬಾಡಿಗೆ ಕಟ್ಟಡದಲ್ಲಿ ಇದೆ. ಶಾಲೆ ಕ್ರಿಶ್ಚಿಯನ್ ಮಿಷನರಿಗೆ ಸಂಬಂಧಪಟ್ಟಿಲ್ಲ. ಶಾಲೆಯ ಆಡಳಿತ ಮಂಡಳಿಯಲ್ಲಿ ಸರ್ವ ಧರ್ಮದ ಸದಸ್ಯರು ಇದ್ದಾರೆ ಮತ್ತು ಎಲ್ಲಾ ಧರ್ಮದ ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.