ಕುಣಿಗಲ್: ಕ್ರಿಸ್ಮಸ್ ಆಚರಣೆಗೆ ಅಡ್ಡಿಪಡಿಸಿದ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ತಿರುಗಿ ಬಿದ್ದ ಮಹಿಳೆಯರು

Update: 2021-12-31 06:43 GMT

ಕುಣಿಗಲ್: ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ದೇವಾಲಯ ಗ್ರಾಮದಲ್ಲಿ ಕ್ರೈಸ್ತ ಮಿಷನರಿಯೊಂದು ಮನೆಯೊಂದರಲ್ಲಿ ಮತಾಂತರ ನಡೆಸುತ್ತಿದೆ ಎಂದು ಆರೋಪಿಸಿ ಕೆಲವು ಸಂಘಪರಿವಾರದ ಕಾರ್ಯಕರ್ತರು ಕ್ರಿಸ್ಮಸ್ ಆಚರಣೆ ವೇಳೆ ದಾಳಿ ನಡೆಸಿದ್ದು, ದಾಳಿ ವೇಳೆ ಮಹಿಳೆಯರು ಸಂಘಪರಿವಾರದ ಕಾರ್ಯಕರ್ತರ ವಿರುದ್ಧವೇ ತಿರುಗಿ ಬಿದ್ದಿರುವ ಘಟನೆ ನಡೆದಿದೆ. 

ಈ ಕುರಿತ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದಾಳಿ ವೇಳೆ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಮಹಿಳೆಯರು ಪ್ರತಿಭಟಿಸುವುದು ವೀಡಿಯೋದಲ್ಲಿ ದಾಖಲಾಗಿದೆ.  

ದೇವಾಲಯ ಗ್ರಾಮದ ಮನೆಯೊಂದರಲ್ಲಿ 20ಕ್ಕೂ ಹೆಚ್ಚು ಜನರು ಕ್ರಿಸ್ಮಸ್ ಆಚರಣೆಯ ಭಾಗವಾಗಿ ಪ್ರಾರ್ಥನೆಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಸಂಘಪರಿವಾರದ ಕಾರ್ಯಕರ್ತರು, ಅಲ್ಲಿದ್ದವರನ್ನು ಪ್ರಶ್ನಿಸಿದಾಗ, ಕೆಲವು ಮಹಿಳೆಯರು, ವಿರೋಧ ವ್ಯಕ್ತಪಡಿಸಿದ್ದಾರೆ. 

ನಾವು ಹಿಂದೂಗಳೇ ಕತ್ತಿನಲ್ಲಿ ತಾಳಿ, ಕಾಲಲ್ಲಿ ಕಾಲುಂಗರ ಇದೆ. ನಮ್ಮ ಮನಸ್ಸಿನ ನೆಮ್ಮದಿ ಗಾಗಿ ಪ್ರಾರ್ಥನೆ ಮಾಡುತಿದ್ದೇವೆ.ನೀವು ಇದೇ ರೀತಿ ನಡೆದುಕೊಂಡರೆ ಅವುಗಳನ್ನು ಬಿಚ್ಚಿಟ್ಟು ಪ್ರಾರ್ಥನೆ ಮಾಡುತ್ತೇವೆ ಎಂದು ಪ್ರತಿಕ್ರಿಯೆ ನೀಡಿರುವುದು ವೀಡಿಯೋದಲ್ಲಿ ದಾಖಲಾಗಿದೆ. 

ಸ್ಥಳಿಯ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ನೀಡಿದ ದೂರಿನ ಮೇರೆಗೆ ಈ ದಾಳಿ ನಡೆಸಿರುವುದಾಗಿ ಸಂಘಪರಿವಾರದ ಸ್ಥಳಿಯ ಮುಖಂಡ ರಾಮು ಹೇಳಿದ್ದಾರೆ.

ಘಟನೆಯ ಬಳಿಕ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಬಿಳಿ ದೇವಾಲಯದ ಗ್ರಾಮ ಪಂಚಾಯತ್ ಸದಸ್ಯ ನಾಗರಾಜು ಎಂಬುವವರು ದೂರು ನೀಡಿದ್ದು, ಪ್ರಾರ್ಥನೆಯಲ್ಲಿ ತೊಡಗಿದ್ದ ಮಹಿಳೆಯರು ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಪ್ರತಿದೂರು ನೀಡಿದ್ದಾರೆ.  

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News