ಶಾಸಕರ ವೈಯಕ್ತಿಕ ಹೇಳಿಕೆಯನ್ನು ಪಕ್ಷ ವಿರೋಧಿ ಎಂದು ಹೇಳಲು ಆಗದು: ಜಗದೀಶ್ ಶೆಟ್ಟರ್

Update: 2021-12-30 17:23 GMT

ಹುಬ್ಬಳ್ಳಿ, ಡಿ. 30: ‘ಬಿಜೆಪಿಯ ಕೆಲ ಶಾಸಕರು ಹಾಗೂ ಸಚಿವರು ವೈಯಕ್ತಿಕ ನೆಲೆಯಲ್ಲಿ ನೀಡುವ ಹೇಳಿಕೆಗಳನ್ನು ಪಕ್ಷ ವಿರೋಧಿ ಚಟುವಟಿಕೆಗಳೆಂದು ಪರಿಗಣಿಸಲು ಸಾಧ್ಯವಿಲ್ಲ' ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಸಕರು ಹಾಗೂ ಸಚಿವರು ವೈಯಕ್ತಿಕ ಹೇಳಿಕೆಗಳನ್ನು ನೀಡಲು ಮುಕ್ತ ಅವಕಾಶವಿದೆ. ಆದರೆ, ಯಾರೂ ಪಕ್ಷಕ್ಕೆ ಹಾನಿಯಾಗುವ ರೀತಿಯಲ್ಲಿ ಹೇಳಿಕೆ ನೀಡಬಾರದು. ಪಕ್ಷದ ಆಂತರಿಕ ವಿಚಾರಗಳನ್ನು ನಾಲ್ಕು ಗೋಡೆ ಮಧ್ಯೆ ಚರ್ಚೆ ಮಾಡಬೇಕು ಎಂದು ಸಲಹೆ ನೀಡಿದರು.

ಯಡಿಯೂರಪ್ಪನವರು ವಿದೇಶಿ ಪ್ರವಾಸಕ್ಕೆ ತೆರಳಿರುವ ಹಿನ್ನೆಲೆಯಲ್ಲಿ ಉಸ್ತುವಾರಿ ಅರುಣ್ ಸಿಂಗ್ ದಿಲ್ಲಿಗೆ ಹೊರಟು ಹೋದರು. ಹೀಗಾಗಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ಮುಂದೂಡಲಾಯಿತು. ಮುಂದಿನ ಸಭೆಯಲ್ಲಿ ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲು ಸೇರಿ ವಿವಿಧ ವಿಚಾರಗಳನ್ನು ಚರ್ಚಿಸಲಾಗುವುದು ಎಂದು ತಿಳಿಸಿದರು.

ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಚುನಾವಣೆ ಸ್ಥಳೀಯ ವಿಷಯಗಳನ್ನು ಆಧರಿಸಿ ಹಾಗೂ ವ್ಯಕ್ತಿಗತವಾಗಿ ನಡೆಯುತ್ತವೆ. ಹೀಗಾಗಿ, ಪಕ್ಷದ ಶಾಸಕರೇ ಹೆಚ್ಚಿದ್ದರೂ ಫಲಿತಾಂಶದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆಗಳಿವೆ. ಎಲ್ಲ ಪಕ್ಷಗಳಲ್ಲಿಯೂ ಹೀಗೆ ಆಗುವುದು ಸಾಮಾನ್ಯ ಎಂದು ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News