ಮಂಡ್ಯ: ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿಪಡಿಸಿದ ಪ್ರಕರಣ; ಆರೋಪಿಗಳ ಮೇಲೆ ಎಫ್‍ಐಆರ್ ದಾಖಲಿಸಲು ಒತ್ತಾಯ
ಮಂಡ್ಯ, ಡಿ.30: ಕಳೆದ ಡಿ.23ರಂದು ಪಾಂಡವಪುರ ಪಟ್ಟಣದ ನಿರ್ಮಲ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಗೆ ನುಗ್ಗಿ ಕ್ರಿಸ್ಮಸ್ ಆಚರಣೆಗೆ ಅಡ್ಡಿಪಡಿಸಿ, ಶಿಕ್ಷಕರಿಯರಿಗೆ ಬೆದರಿಕೆ ಹಾಕಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ವಿರುದ್ಧ ಎಫ್‍ಐಆರ್ ದಾಖಲಿಸಬೇಕು ಬಹುತ್ವ ಕರ್ನಾಟಕ ಸತ್ಯಶೋಧನಾ ಸಮಿತಿ ಸದಸ್ಯರು ಒತ್ತಾಯಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸದಸ್ಯೆ, ವಕೀಲೆ ಮೈತ್ರೇಯಿ ಕೃಷ್ಣನ್, ಕಾನೂನುಬಾಹಿರವಾಗಿ ಶಾಲೆ ಪ್ರವೇಶಿಸಿ ಬೆದರಿಕೆ ಹಾಕಿದ್ದರೂ ಕೇವಲ ಎನ್‍ಸಿಆರ್ ಮಾಡಿ ಎಫ್‍ಐಆರ್ ದಾಖಲಿಸಿಲ್ಲವೇಕೆ ಎಂದು ಪ್ರಶ್ನಿಸಿದರು. ಕೂಡಲೇ ಎಫ್‍ಐಆರ್ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಪಾಂಡವಪುರ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಈ ವರ್ಷ ಕ್ರೈಸ್ತ ಸಂಸ್ಥೆಗಳ ಮೇಲೆ 39 ದಾಳಿ ಪ್ರಕರಣ ನಡೆದಿದೆ ಎಂಬುದನ್ನು ಪಿಯುಸಿಎಲ್ ಸಂಘಟನೆ ದಾಖಲಿಸಿದೆ. ಅಲ್ಪಸಂಖ್ಯಾತರು ಪ್ರಾರ್ಥನೆ ಸಲ್ಲಿಸುವ ಸಂದರ್ಭದಲ್ಲಿ ಅವರ ಮೇಲೆ ದಾಳಿ ಮಾಡುವ ಮೂಲಕ ಅವರನ್ನು ಭಯ, ಆತಂಕದಲ್ಲಿ ಇರುವಂತೆ ಮಾಡುವ ಇಂತಹ ಕೋಮುವಾದಿಗಳ ವಿರುದ್ಧ ಸರಕಾರ ಕೇಸು ದಾಖಲಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಸಮಿತಿಯ ರಾಬಿನ್ ಕ್ರಿಸ್ಟೋಫರ್ ಮಾತನಾಡಿ, ಕೋಮುವಾದಿ ಅಜೆಂಡಾ ಇಟ್ಟುಕೊಂಡು ಸಮಾಜದ ಸ್ವಾಸ್ಥ್ಯ ಕದಡುವ ಕೋಮು ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಸವೋಚ್ಛ ನಾಯ್ಯಾಲವು ತೆಹಸಿನ್ ಪುನಾವಾಲಾ ತೀರ್ಪಿನಲ್ಲಿ ಕೊಟ್ಟಿರುವ ಮಾರ್ಗಸೂಚಿಯನ್ನು ಈ ಕೂಡಲೇ ಜಾರಿ ಮಾಡಿ ಇಂತಹ ಅಹಿತಕರ ಘಟನೆಗಳು ಮತ್ತು ಅಲ್ಪಸಂಖ್ಯಾತರ ವಿರುದ್ದ ಸುಳ್ಳು ಆರೋಪ ಮತ್ತು ನಿಂದನೆ ಮಾಡುವುದನ್ನು ತಡೆಗಟ್ಟಲು ಪೊಲೀಸರು ಮತ್ತು ಸರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ತಾಕೀತು ಮಾಡಿದರು.
ಪ್ರತಿಯೊಂದು ಸಂಸ್ಥೆಗೂ ಕೆಲವೊಂದು ನೀತಿಗಳಿರುತ್ತವೆ. ಶಾಲೆಯಲ್ಲಿ ಏನೇ ನಡೆದರೂ ಅದನ್ನು ಪ್ರಶ್ನೆ ಮಾಡಲು ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಪೊಲಿಸ್ ಇಲಾಖೆ ಇದೆ. ಆದರೆ, ಕೆಲವು ಕೋಮುವಾದಿ ವ್ಯಕ್ತಿಗಳು ಕಾನೂನು ಬಾಹಿರವಾಗಿ ಶಾಲೆ ಪ್ರವೇಶಿಸಿ ಗಲಾಟೆ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಅವರು ಕಿಡಿಕಾರಿದರು.
ಸಮಿತಿಯ ಸದಸ್ಯರಾದ ಸುಧಾ, ಫಾ.ಅರುಣ್ ಲೂಯಿಸ್, ಶಾಹೀನ್ ಹಾಗೂ ಪೂರ್ಣಿಮಾ ಉಪಸ್ಥಿತರಿದ್ದರು.