458 ಪಶುವೈದ್ಯರ ನೇಮಕಾತಿಗೆ ಸಿಎಂ ಅನುಮೋದನೆ: ಸಚಿವ ಪ್ರಭು ಚವ್ಹಾಣ್

Update: 2021-12-31 14:37 GMT

ಬೆಂಗಳೂರು, ಡಿ.31: ಪಶುಸಂಗೋಪನೆ ಇಲಾಖೆಗೆ 900 ಹುದ್ದೆಗಳ ನೇಮಕಾತಿಗೆ ಮನವಿ ಮಾಡಲಾಗಿತ್ತು. ಇದೀಗ 458 ಪಶುವೈದ್ಯರ ನೇಮಕಾತಿಗೆ ಮುಖ್ಯಮಂತ್ರಿ ಅನುಮೋದನೆ ನೀಡಿದ್ದಾರೆ. ಅದರಲ್ಲಿ 58 ಬ್ಯಾಕ್‍ಲಾಗ್ ಹುದ್ದೆಗಳಿವೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದರು.

ಶುಕ್ರವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗುಜರಾತ್, ಮಹಾರಾಷ್ಟ್ರ ಹಾಗೂ ಉತ್ತರಪ್ರದೇಶ ರಾಜ್ಯಗಳ ಪ್ರವಾಸದ ಕುರಿತು ಮಾಹಿತಿಯನ್ನು ನೀಡಿದರು.

ಗುಜರಾತ್, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದಲ್ಲಿ ಗೋವುಗಳ ಸಂರಕ್ಷಣೆಗೆ ಅತಿ ಹೆಚ್ಚು ಒತ್ತು ನೀಡಲಾಗಿದ್ದು, ಗೋಶಾಲೆಗಳನ್ನು ಸ್ವಾವಲಂಬಿಯಾಗಿಸಲಾಗಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಗೋಸಂರಕ್ಷಣೆ, ಗೋ ಹತ್ಯೆ ನಿಷೇಧ ಕಾಯ್ದೆ ಅನುಷ್ಠಾನಕ್ಕೆ ತಂದು ಗೋ ಸಂರಕ್ಷಣೆಯನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ರಾಜ್ಯದ ಕೆಲವು  ಗೋಶಾಲೆಗಳನ್ನು ಪ್ರಾಯೋಗಿಕವಾಗಿ ಆಯ್ಕೆಮಾಡಿ ಗೋ ಆಧಾರಿತ ಕೃಷಿ, ಗೊಬ್ಬರ ತಯಾರಿಕೆ ಮತ್ತು ಬಯೋಗ್ಯಾಸ್ ತಯಾರಿಕೆ ಕುರಿತು ಮಾದರಿಗಳನ್ನು ಸೃಷ್ಟಿಸಿ ಪ್ರಾಯೋಗಿಕವಾಗಿ ಕಾರ್ಯ ಸಾಧ್ಯತೆಗಳ ಬಗ್ಗೆ ಪರೀಕ್ಷೆ ನಡೆಸಲಾಗುವುದು ಎಂದು ಪ್ರಭು ಚವ್ಹಾಣ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News