ಮೈಸೂರು: ಹನ್ನೆರಡನೇ ದಿನಕ್ಕೆ ಕಾಲಿಟ್ಟ 'ರಂಗಾಯಣ ಉಳಿಸಿ' ಹೋರಾಟಗಾರರ ಪ್ರತಿಭಟನೆ

Update: 2021-12-31 15:05 GMT

ಮೈಸೂರು,ಡಿ.31: ರಂಗಾಯಣ ಉಳಿಸಿ ಹೋರಾಟಗಾರರ ಪ್ರತಿಭಟನೆಗೆ ಮತ್ತೆ ಪೊಲೀಸರು ತಡೆಯೊಡ್ಡಿದ್ದು, ಹೋರಾಟಗಾರರು ಮತ್ತು ಪೊಲೀಸರ ನಡುವೆ ವಾಗ್ವಾದ ಏರ್ಪಟ್ಟ ಪರಿಣಾಮ ಪ್ರತಿಭಟನಾಕಾರರು ರಸ್ತೆಯಲ್ಲೇ ಕುಳಿತು ಪ್ರತಿಭಟಿಸಿದರು.

ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ನಡೆಸುತ್ತಿರು ಪ್ರತಿಭಟನೆ ಶುಕ್ರವಾರ ಹನ್ನೆರಡನೇ ದಿನಕ್ಕೆ ಕಾಲಿಟ್ಟಿದ್ದು, ಎಂದಿನಂತೆ ರಂಗಾಯಣದ ಮುಂಭಾಗ ಪ್ರತಿಭಟನೆ ನಡೆಸಲು ರಂಗಾಯಣ ಉಳಿಸಿ ಹೋರಾಟಗಾರರು ಕುಕ್ಕರಹಳ್ಳಿ ಕೆರೆಯ ಆಲದಮರದ ಬಳಿ ಸಮಾವೇಶಗೊಂಡರು.

ಬಳಿಕ ಜಿಲ್ಲಾಧಿಕಾರಿಗಳು ಸೂಚಿಸಿದ ಓವೈಲ್ ಮೈದಾನದಲ್ಲೇ ಪ್ರತಿಭಟನೆ ನಡೆಸಲು ನಿರ್ಧರಿಸಿ ರಂಗಾಯಣದ ರಸ್ತೆ ಮುಂಭಾಗದಿಂದ ಮೌನ ಮೆರವಣಿಗೆ ಮೂಲಕ ತೆರಳುವುದಾಗಿ ತೀರ್ಮಾನಿಸಿ ಹೊರಡಲು ಮುಂದಾದರು. ಅದರೆ ಇದಕ್ಕೆ ಪೊಲೀಸರು ಅವಕಾಶ ನೀಡದೆ ಬ್ಯಾರಿಕೇಡ್‍ಗಳನ್ನು ಅಡ್ಡಲಾಗಿ ಹಾಕಿ ತಡೆದರು. 

ಈ ವೇಳೆ ಹಿರಿಯ ಸಮಾಜವಾದಿ ಪ.ಮಲ್ಲೇಶ್, ಬ್ಯಾರಿಕೇಡ್ ದಾಟಿ ಹೋಗಲು ಯತ್ನಿಸಿದ ವೇಳೆ ಪೊಲೀಸ್ ಪೇದೆಯೊಬ್ಬ ಪ.ಮಲ್ಲೇಶ್ ಕುರಿತು ಹುಡುಗಿಯರನ್ನು ತಳ್ಳಿ ಹೋಗಿ ನೋಡೋಣ ಎಂದು ಹೇಳಿದ್ದು ಪ್ರತಿಭಟನಕಾರರ ತಾಳ್ಮೆಯನ್ನು ರೊಚ್ಚಿಗೇಳಿಸಿತು. ಇದರ ಪರಿಣಾಮ ಪೊಲೀಸರನ್ನು ಪ್ರತಿಭಟನಕಾರರ ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಯಿತು.

ಇದೇ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ನಿಮ್ಮ ಪೊಲೀಸರೇ ಮಫ್ತಿಯಲ್ಲಿ ಬಂದು ಪ್ರತಿಭಟನಾಕರರನ್ನು ಪ್ರಚೋದನೆ ರೀತಿ ಮಾತನಾಡುತ್ತಾರೆ ಎಂದರೆ ನೀವು ಉದ್ದೇಶ ಪೂರ್ವಕವಾಗಿಯೇ ಮಾಡುತ್ತಿದ್ದೀರಿ ಎಂದರ್ಥ, ನಾವುಗಳು ಯಾರೂ ಟೆರರಿಸ್ಟ್‍ಗಳಲ್ಲಿ, ಆದರೂ ಯಾಕೆ ಧಮಕಿ ಹಾಕುತ್ತಿದ್ದೀರಿ? ಈ ಕುರಿತು ಈಗಲೇ ಗೃಹ ಸಚಿವರ ಬಳಿ ಮಾತನಾಡಿ ನಿಮ್ಮ ನಡವಳಿಕೆ ವಿರುದ್ಧ ದೂರು ಸಲ್ಲಿಸುವುದಾಗಿ ತಿಳಿಸಿದರು. ಪ್ರಶ್ನಿಸಿದರು.

ಪತ್ರಕರ್ತ ಟಿ.ಗುರುರಾಜ್ ಮಾತನಾಡಿ, ಕಳೆದ ಹನ್ನೆರಡು ದಿನಗಳಿಂದ ನೀವು ಹೇಳಿದ ರೀತಿ ಕೇಳಿದ್ದೇವೆ. ಆದರೆ ಹಿರಿಯ ವ್ಯಕ್ತಿಗೆ ಕೇವಲವಾಗಿ ನಿಮ್ಮ ಪೊಲೀಸ್ ಪೇದೆ ಮಾತನಾಡುತ್ತಾರೆ ಎಂದರೆ ಏನರ್ಥ, ಕೂಡಲೇ ಆತನ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ನಾವು ಕಳೆದ ಹನ್ನೆರಡು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಿದ್ದೇವೆ. ಆದರೆ ಏನು ಕ್ರಮ ಕೈಗೊಂಡಿದ್ದೀರಿ ಎಂಬ ಬಗ್ಗೆ ಮಾಹಿತಿ ಇಲ್ಲ, ಹಾಗಾಗಿ ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿಗಳನ್ನು ಇಲ್ಲಿಗೆ ಕರೆಸಿ ಇಲ್ಲವೇ ನಮ್ಮನ್ನೇ ಅವರಲ್ಲಿಗೆ ಬಿಡಿ ಎಂದು ಪಟ್ಟು ಹಿಡಿದರು. 

ಇದಕ್ಕೆ ಮಣಿದ ಪೊಲೀಸರು ಅಧಿಕಾರಿಗಳನ್ನೇ ಇಲ್ಲಿಗೆ ಕರೆಸುವ ಭರವಸೆ ನೀಡಿದರು. ಈ ವೇಳೆ ಪ್ರತಿಭಟನಾಕಾರರು ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಾಂತ್ರ್ಯ, ಕಟ್ಟುತ್ತೇವ ನಾವು ಕಟ್ಟುತ್ತೇವ ನಾವು ನಾಡು ಕಟ್ಟುತ್ತೇವ ಎಂಬ ಕ್ರಾಂತಿಗೀತೆಗಳನ್ನು ಹಾಡಿದರು.
ಪ್ರತಿಭಟನಾಕರರ ಒತ್ತಡಕ್ಕೆ ಮಣಿದು ಸ್ಥಳಕ್ಕೆ ಆಗಮಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ ಮತ್ತು ಉಪನಿರ್ದೇಶಕಿ ನಿರ್ಮಲಾ ಮಠಪತಿ ಮಾತನಾಡಿ ನಾವು ನಿರ್ದೇಶಕರ ಬದಲಾವಣೆ ಕುರಿತು ಏನು ಹೇಳಲು ಸಾಧ್ಯವಿಲ್ಲ, ಈಗಾಗಲೇ ನೀವು ಮುಖ್ಯಮಂತ್ರಿಗೆಳಿಗೆ ಮನವಿ ಸಲ್ಲಿಸಿದ್ದೀರಿ, ಇದರ ಕ್ರಮದ ಬಗ್ಗೆ ನಮಗೆ ಮಾಹಿತಿ ಇಲ್ಲ, ನೀವು ಪ್ರತಿಭಟನೆ ನಡೆಸುತ್ತಿರುವುದನ್ನು ಸರ್ಕಾರಕ್ಕೆ ವರದಿ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.

ಇದರಿಂದ ತೃಪ್ತಿಗೊಳ್ಳದ ಪ್ರತಿಭಟನಾಕಾರರು, ಇನ್ನೂ ಮೂರು ದಿನ ನಿಮಗೆ ಕಾಲಾವಕಾಶ ನೀಡುತ್ತೇವೆ, ಅಷ್ಟರೊಳಗೆ ನಮಗೆ ಸರ್ಕಾರದ ಉತ್ತರ ನೀಡದಿದ್ದರೆ ಕಲಾಮಂದಿರ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಹಿರಿಯ ಸಮಾಜವಾದಿ ಪ.ಮಲ್ಲೇಶ್, ರಂಗಕರ್ಮಿಗಳಾದ ಜನಾರ್ಧನ್ (ಜನ್ನಿ) ಕೃಷ್ಣಪ್ರಸಾದ್,  ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಹೊಸಕೋಟೆ ಬಸವರಾಜು, ಜಿ.ಪಿ.ಬಸವರಾಜು,  ಉಗ್ರನರಸಿಂಹೇಗೌಡ, ಪತ್ರಕರ್ತರ ಟಿ.ಗುರುರಾಜ್, ಚಂದ್ರಶೇಖರ ಮೇಟಿ, ಕಾಂಗ್ರೆಸ್ ಮುಖಂಡ ಹರೀಶ್ ಗೌಡ, ನಗರ ಪಾಲಿಕೆ ಸದಸ್ಯ ಗೋಪಿ, ಮಾಜಿ ಮೇಯರ ಪುರುಷೋತ್ತಮ್, ಕನ್ನಡ ಕಾವಲು ಪಡೆ ಅಧ್ಯಕ್ಷ ಮೋಹನ್ ಕುಮಾರ್ ಗೌಡ, ಬಲ್ಲಾಳೆ ಬೆಟ್ಟೇಗೌಡ, ಮಿನಿ ಬಂಗಾರಪ್ಪ.  ದಸಂಸ ಮುಖಂಡ ಬನ್ನಳ್ಳಿ ಸೋಮಣ್ಣ, ಬಿಎಸ್ಪಿ ಮುಖಂಡ ಚನ್ನಕೇಶವಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.   

ಬಾವುಕರಾಗಿ ಕಣ್ಣೀರಿಟ್ಟ ಮಾಜಿ ನಿರ್ದೇಶಕ 

ರಸ್ತೆಯಲ್ಲೇ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳ  ಜೊತೆ ಮಾತನಾಡಿದ ಅವರು, ಬಹಳ ಹಿರಿಯ ಅಧಿಕಾರಿಗಳು ಬಂದಿದ್ದೀರಿ, ಇಲ್ಲಿ ಪ್ರತಿಭಟನೆ ಮಾಡುತ್ತಿರುವವರ ಪ್ರತಿಯೊಬ್ಬರ ಮುಖಗಳು ನಿಮಗೆ ಚೆನ್ನಾಗಿ ಗೊತ್ತು. ರಂಗಾಯಣದ ಸ್ಥಿತಿಗತಿ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತು. ರಂಗಾಯಣ ಈ ಸ್ಥಿತಿಗೆ ಬಂದಿದೆ ಎಂದರೆ ಮರುಕ ಬರುತ್ತಿದಿಯೋ ಇಲ್ಲವೊ? ರಂಗಾಯಣ ಉಳಿಸಿ ಅತ್ಯಂತ ಕಾಳಜಿ ಮತ್ತು ಸಾಂಸ್ಕೃತಿಕ  ಜವಾಬ್ದಾರಿಯಿಂದ ಶಾಂತ ರೀತಿಯಿಂದ ಕಳೆದ ಹನ್ನೆರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಈ ಪ್ರತಿಭಟನೆ  ನೋಡಿದರೆ ನಮಗೆ ನಾಚಿಕೆಯಾಗುತ್ತಿದೆ. ನಾವು ಎತ್ತಿ ಹುಟ್ಟಿ ಬೆಳೆಸಿದಂತ ಸಂಸ್ಥೆ ನೋಡಿದರೆ ನೋವಾಗುತ್ತದೆ ಎಂದು ಕಣ್ಣೀರಿಟ್ಟರು.

ರಂಗಾಯಣದಲ್ಲಿ ಎಲ್ಲಿ ತಪ್ಪಾಗಿದೆ ಎಂದು ನೋಡಿ ಸರ್ಕಾರಕ್ಕೆ ವರದಿ ನೀಡುವ ಅಧಿಕಾರ ಅಧಿಕಾರಿಗಳಿಗೆ ಇದೆ. ಆದರೆ ಯಾಕೆ ನೀವು ನೀಡುತ್ತಿಲ್ಲ? ರಂಗ ಸಮಾಜದ ಸಭೆಯನ್ನು ಯಾಕೆ ಕರೆಯುತ್ತಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಯಾವುದೇ ಉತ್ತರ ನೀಡದ ಅಧಿಕಾರಿಗಳು ಮೌನಕ್ಕೆ ಶರಣಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News