ಕೊಪ್ಪ: ಬಜರಂಗದಳದ ಮುಖಂಡನಿಂದ ಕ್ರೈಸ್ತ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್; ದೂರು

Update: 2021-12-31 15:07 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ಡಿ.31: ಸಾಮಾಜಿಕ ಜಾಲತಾಣಗಳಲ್ಲಿ ಕ್ರೈಸ್ತ ಸಮುದಾಯದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವಂತಹ ಪೋಸ್ಟ್ ಗಳನ್ನು ಹರಿಯಬಿಟ್ಟಿರುವ ತಾಲೂಕು ಬಜರಂಗದಳದ ಅಧ್ಯಕ್ಷ ಹಿರೇಕುಡಿಗೆ ರಾಕೇಶ್ ಎಂಬಾತನ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಕಾರ್ನಾಟಕ ಕ್ರೈಸ್ತ ಸಂಘಟನೆಗಳ ಒಕ್ಕೂಟದ ಕೊಪ್ಪ ತಾಲೂಕು ಶಾಖೆ ಮುಖಂಡರು ಸಹಾಯಕ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ.

ಜಿಲ್ಲೆಯ ಕೊಪ್ಪ ತಾಲೂಕು ಬಜರಂಗದಳದ ಅಧ್ಯಕ್ಷ ರಾಕೇಶ್ ಎಂಬಾತ ಡಿ.25ರಂದು ಕ್ರೈಸ್ತ ಸಮುದಾಯದವರ ಧಾರ್ಮಿಕ ಭಾವನೆಗಳಿಗೆ ನೋವಾಗುವಂತಹ ಕೆಲ ಚಿತ್ರ, ಬರಹಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಮೂಲಕ ಸಮುದಾಯದವರ ಧಾರ್ಮಿಕ ಭಾವನೆಗಳಿಗೆ ಅಪಮಾನ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿರುವ ಮುಖಂಡರು, ರಾಕೇಶ್ ಹಿರಿಕುಡಿಗೆ ಕ್ರೈಸ್ತ ಧರ್ಮವನ್ನು ನಿಂದಿಸಿ, ಅಸಭ್ಯವಾದ ಚಿತ್ರ ಬರಹಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಜಿಲ್ಲೆಯಲ್ಲಿ ವಿವಿಧ ಧರ್ಮಗಳ ನಡುವೆ ಇರುವ ಸೌಹಾರ್ದವನ್ನು ಹಾಳು ಮಾಡಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬಜರಂಗದಳದ ರಾಕೇಶ್ ಹಾಕಿರುವ ಪೋಸ್ಟ್ ಗಳಲ್ಲಿ ಶ್ರಿರಾಮಚಂದ್ರ ಸಂತ ಕ್ಲಾಸ್‍ನತ್ತ ಬಾಣ ಹಿಡಿದು ನಿಂತಿರುವುದು, ಸಂತ ಕ್ಲಾಸ್ ದೇಶ ಬಿಟ್ಟು ಓಡುತ್ತಿರುವ ಚಿತ್ರವೊಂದನ್ನು ಹಾಕಿದ್ದು, ಅದರೊಂದಿಗೆ ಕ್ರೈಸ್ತರು ತಮ್ಮ ಬಗಲಲ್ಲಿ ಸುಳ್ಳಿನ ಕಂತೆ ಇರುವ ಪುಸ್ತಕ ಇಟ್ಟುಕೊಂಡು ಹಿಂದುಗಳ ಮನೆಗೆ ನುಗ್ಗಿ ಮತಾಂತರ ಮಾಡುತ್ತಾ ಲೂಟಿ ಮಾಡುವ ಕ್ರೈಸ್ತರಿಗೆ ಮತಾಂತರ ನಿಷೇಧ ಕಾಯ್ದೆಯ ಶುಭಾಶಯಗಳು ಎಂದು ಬರೆದಿದ್ದಾನೆ. ಮತ್ತೊಂದು ಚಿತ್ರದಲ್ಲಿ ಸಂತ ಕ್ಲಾಸ್ ವಾಹನದಿಂದ ಇಳಿಯುತ್ತಿರುವ ಹಾಗೂ ಆತನನ್ನು ನೋಡಿ ನಾಯಿಗಳು ಬೊಗಳುತ್ತಿರುವ ಚಿತ್ರದೊಂದಿಗೆ ಕೇಸರಿ ಖಾವಿ ತೊಟ್ಟ ಸಂತನ ನೋಡಿ ನಾಯಿಗಳು ತಲೆ ಬಗ್ಗಿಸಿ ನಡೆಯುವ ಚಿತ್ರ ಹಾಕಿ, ಈ ದೇಶದ ಮೂಲ ನಿವಾಸಿಗಳು ಯಾರೆಂದು ನಾಯಿಗಳಿಗೂ ಗೊತ್ತು ಎಂದು ಬರೆದಿರುವ ಪೋಸ್ಟ್ ಹಾಕಿದ್ದಾನೆ. ಇದು ಕ್ರೈಸ್ತರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದು, ಎರಡು ಧರ್ಮಗಳ ನಡುವೆ ಧ್ವೇಷ ಹುಟ್ಟು ಹಾಕಲು ಮಾಡಿದ ಕೃತ್ಯವಾಗಿದೆ. ಆದ್ದರಿಂದ ಕೂಡಲೇ ಕ್ರೈಸ್ತರ ಭಾವನೆಗಳನ್ನು ಕೆರಳಿಸಿ ಎರಡು ಧರ್ಮಗಳ ನಡುವೆ ಧ್ವೇಷ ಹುಟ್ಟು ಹಾಕಿ ಸಮಾಜದ ಶಾಂತಿ ಕೆಡಿಸುತ್ತಿರುವ ಬಜರಂಗದಳದ ಕೊಪ್ಪ ತಾಲೂಕು ಅಧ್ಯಕ್ಷ ರಾಕೇಶ್ ಹಿರೇಕುಡಿಗೆ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಒಕ್ಕೂಟದ ಮುಖಂಡರಾದ ಅನಿಲ್ ಕುಲಾಸೋ, ಪ್ರಾನ್ಸಿಸ್ ಕಾರ್ಡೋಜಾ, ಜೀವನ್, ಜೋಯಲ್ ಡಯಾಸ್, ಜಾರ್ಜ್, ಲೋಬೋ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News