ಚಿಕ್ಕಮಗಳೂರು: ನಗರಸಭೆ ಅಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿ ಸದಸ್ಯರಲ್ಲಿ ನಡೆದಿದೆ ಪೈಪೋಟಿ

Update: 2021-12-31 16:50 GMT

ಚಿಕ್ಕಮಗಳೂರು, ಡಿ.31: ನಗರದ ಜನತೆಯಲ್ಲಿ ಅತ್ಯಂತ ಕುತೂಹಲ ಕೇರಳಿಸಿದ್ದ ಇಲ್ಲಿನ ನಗರಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಸರಳ ಬಹುಮತದೊಂದಿಗೆ ಮೂರನೇ ಬಾರಿ ಅಧಿಕಾರದ ಗದ್ದುಗ ಹಿಡಿದಿದೆ. ಸದ್ಯ ನಗರಸಭೆ ಅಧ್ಯಕ್ಷ ಸ್ಥಾನ ಯಾರ ಪಾಲಾಗಲಿದೆ ಎಂಬ ಕುತೂಹಲ ಸಾರ್ವಜನಿಕರದ್ದಾಗಿದ್ದು, ಬಿಸಿಎಂ(ಎ) ವರ್ಗಕ್ಕೆ ಮೀಸಲಾಗಿರುವ ನಗರಸಭೆ ಅಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿ ಸದಸ್ಯರಲ್ಲಿ ಹಲವರು ರೇಸ್‍ನಲ್ಲಿದ್ದಾರೆ. ಅಂತಿಮವಾಗಿ ಅಧ್ಯಕ್ಷರಗಾದಿಗೆ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ನಗರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ(ಎ) ವರ್ಗಕ್ಕೆ ಮೀಸಲಾಗಿದೆ. 5ನೇ ವಾರ್ಡ್‍ನಿಂದ ಸ್ಫರ್ಧಿಸಿ ಗೆಲುವು ಸಾಧಿಸಿರುವ ಮಧುಕುಮಾರ್ ರಾಜ್ ಅರಸ್, 6ನೇ ವಾರ್ಡ್‍ನಿಂದ ಗೆದ್ದಿರು ವ ಬಿ.ಸಿ.ಸುಜಾತಾ, 31ವಾರ್ಡ್‍ನಿಂದ ಗೆದ್ದಿರುವ ಕೆ.ಎನ್.ದೀಪಾ ರವಿಕುಮಾರ್ ಮತ್ತು 26ನೇ ವಾರ್ಡಿನಿಂದ ಗೆದ್ದಿರುವ ವರಸಿದ್ದಿ ವೇಣುಗೋಪಾಲ್ ಈ ಪ್ರವರ್ಗವನ್ನು ಪ್ರತಿ ನಿಧಿಸುತ್ತಿರುವುದರಿಂದ ನಗರಸಭೆ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅಂತೆಯೇ ಉಪಾಧ್ಯಕ್ಷ ಸ್ಥಾನ ಬಿಸಿಎಂ (ಬಿ) ವರ್ಗಕ್ಕೆ ಮೀಸಲಾಗಿದ್ದು, 11ನೇ ವಾರ್ಡ್‍ನಿಂದ ಗೆಲುವು ಸಾಧಿಸಿರುವ ಉಮಾದೇವಿ ಕೃಷ್ಣಪ್ಪ ಹಾಗೂ 32ನೇ ವಾರ್ಡಿನ ಭವ್ಯಾ ಮಂಜುನಾಥ್ ರೇಸ್‍ನಲ್ಲಿದ್ದಾರೆ. ಅಂತಿಮವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನ ಯಾರಿಗೆ ಒಲಿಯಲಿದೆ ಎಂಬುದು ಕತೂಹಲ ಮೂಡಿಸಿದೆ.

ಅಧ್ಯಕ್ಷ ಸ್ಥಾನ ಮತ್ತು ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವವರು ತೆರೆಮರೆಯಲ್ಲಿ ಭಾರೀ ಕಸರತ್ತು ನಡೆಸುತ್ತಿದ್ದಾರೆ. ಅನೇಕ ವರ್ಷಗಳಿಂದ ಪಕ್ಷದ ಏಳಿಗೆಗಾಗಿ ದುಡಿದವರಿಗೆ ಅಧ್ಯಕ್ಷ ಸ್ಥಾನ ಸಿಗಲಿದೆ. ಈ ನಿಟ್ಟಿನಲ್ಲಿ ಸಿ.ಟಿ.ರವಿ ಅವರ ಆಪ್ತ ವರಸಿದ್ದಿ ವೇಣುಗೋಪಾಲ್ ಅವರಿಗೆ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೇರಲಿದ್ದಾರೆಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಆದರೆ ಈ ವಿಚಾರದಲ್ಲಿ ಕ್ಷೇತ್ರದ ಶಾಸಕ ಸಿ.ಟಿ.ರವಿ ನಿರ್ಧಾರ ಅಂತಿಮವಾಗಿದ್ದು, ಅವರು ತಮ್ಮ ಆಪ್ತರಿಗೆ ಅಧ್ಯಕ್ಷ ಸ್ಥಾನ ನೀಡುತ್ತಾರಾ? ಅಥವಾ ಹೊಸ ಮುಖಗಳಿಗೆ ಮಣೆ ಹಾಕುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

ಅಭಿವೃದ್ಧಿಗೆ ಒತ್ತು ನೀಡದಿದ್ದಲ್ಲಿ ಮತ್ತೆ ಅಧಿಕಾರ ಮರಿಚೀಕೆ: ಕಳೆದ 10 ವರ್ಷಗಳಿಂದ ಬಿಜೆಪಿ ನಗರಸಭೆಯ ಅಧಿಕಾರ ಹಿಡಿದಿದ್ದರೂ ನಗರದ ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯವಹಿಸಿತ್ತು. ಪರಿಣಾಮ ನಗರಸಭೆ ಚುನಾವಣೆಯಲ್ಲಿ ಬಿಜೆಪಿ 18 ಸ್ಥಾನಗಳನ್ನು ಅತ್ಯಂತ ಪ್ರಯಾಸದಿಂದ ಗೆದ್ದಿದೆ. ಎದುರಾಳಿ ಪಕ್ಷಗಳು ಈ ಲೋಪವನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಸಫಲವಾದವು. ಸ್ವಲ್ಪ ಯಾಮಾರಿದ್ದರೂ ಬಿಜೆಪಿ ವಿರೋಧ ಪಕ್ಷದ ಖುರ್ಚಿಯಲ್ಲಿ ಕೂರಬೇಕಿತ್ತು. ಈ ನಿಟ್ಟಿನಲ್ಲಿ ಅಭಿವೃದ್ಧಿ ಪರ ಆಡಳಿತ ನೀಡದಿದ್ದಲ್ಲಿ ಜನರಿಂದ ತೀರಸ್ಕಾರಕ್ಕೊಳಗಾಗಬೇಕಾಗುತ್ತದೆ ಎಂಬ ಎಚ್ಚರಿಕೆ ಗಂಟೆಯನ್ನು ಮತದಾರರು ಬಿಜೆಪಿಗೆ ನೀಡಿದ್ದು, ನಗರಸಭೆ ಆಡಳಿತ ಮಂಡಳಿ ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡದಿದ್ದಲ್ಲಿ ಮುಂದಿನ ಚುನಾವಣೆ ಬಿಜೆಪಿ ಪಾಲಿಗೆ ಕನ್ನಡಿಯೋಲಗಿನ ಗಂಟಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕ್ಷೇತ್ರದ ಶಾಸಕರಾಗಿದ್ದಾರೆ. ಕೇಂದ್ರ ಕೃಷಿ ಹಾಗೂ ರಾಜ್ಯ ರೈತಕಲ್ಯಾಣ ರಾಜ್ಯ ಸಚಿವೆ ಶೋಭಾಕರಂದ್ಲಾಜೆ ಇಲ್ಲಿನ ಸಂಸದೆಯಾಗಿದ್ದಾರೆ. ವಿಪ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಜಿಲ್ಲೆಯವರೇ ಆಗಿದ್ದು, ಈ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವುದರಿಂದ ನಗರದ ಜನರ ನಿರೀಕ್ಷೆಗಳು ಹೆಚ್ಚಿದ್ದು, ನಗರಸಭೆ ಆಡಳಿತ ಇನ್ನಾದರೂ ಚುರುಕು ಪಡೆದುಕೊಳ್ಳಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News