ಸಕಲೇಶಪುರ | ದಲಿತರ ಮೇಲೆ ಹಲ್ಲೆ ನಡೆಸಿದ ಆರೋಪ; ಬಜರಂಗದಳದ 4 ಕಾರ್ಯಕರ್ತರ ವಿರುದ್ಧ FIR

Update: 2023-06-05 07:16 GMT

ಸಕಲೇಶಪುರ: ದನವನ್ನು ಕಡಿದಿದ್ದಾರೆ ಎಂದು  ಆರೋಪಿಸಿ ದಲಿತರ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳದ 4 ಮಂದಿ ಕಾರ್ಯಕರ್ತರ ವಿರುದ್ಧ ಸಕಲೇಶ ಪುರ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಿಲಾಗಿರುವ ಬಗ್ಗೆ ವರದಿಯಾಗಿದೆ. 

ತಾಲೂಕಿನ ಮಳಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳಾದ ಶಿವು, ರವಿ, ಶ್ರೀಜಿತ್ ಗೌಡ ಹಾಗೂ ರವಿ ಮಳಲಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಮಳಲಿ ಗ್ರಾಮದ ಲೋಕೇಶ್( 35 ) ಹಲ್ಲೆಗೆ ಒಳಗಾದ ವ್ಯಕ್ತಿಯಾಗಿದ್ದು, ಇವರ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ಘಟನೆಯಲ್ಲಿ ಚಂದ್ರು (40) ಕೂಡ ಹಲ್ಲೆಗೆ ಒಳಗಾಗಿದ್ದಾರೆ ಎಂದು ದೂರಲಾಗಿದೆ.

ಇನ್ನು ದನ ಕಡಿದ ಅರೋಪದ ಮೇಲೆ ಲೋಕೇಶ್ ಮತ್ತು ಚಂದ್ರು ಇವರ ವಿರುದ್ಧವೂ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆ ವಿವರ:  ಮಳಲಿ ಗ್ರಾಮ ಪಂಚಾಯತ್ ನ ಹಾಲೆ ಬೇಲೂರು ಬಳಿ ದನ ಕಡಿದ ವಿಚಾರ ತಿಳಿದ ಬಜರಂಗದಳದ ಕಾರ್ಯಕರ್ತರು ಸ್ಥಳಕ್ಕೆ ತೆರಳಿ ದಲಿತರ ಮೇಲೆ ಹಲ್ಲೆ ಮಾಡಿ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಬಂದ ಪೋಲಿಸರು ಇಬ್ಬರನ್ನು ವಶಪಡಿಸಿಕೊಂಡಿದ್ದಾರೆ.

ಬಂಧನ:  ಗಾಯಗೊಂಡಿದ್ದ ವ್ಯಕ್ತಿಗಳಿಗೆ ಸ್ಥಳಿಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ , ಗಾಯಾಳುಗಳ ಹೇಳಿಕೆ ಮೇರೆಗೆ ಹಲ್ಲೆ ಮಾಡಿದ ವ್ಯಕ್ತಿಗಳ ವಿರುದ್ದ ಕೇಸು ದಾಖಲಿಸಿಕೊಂಡಿರುವ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 6 ಮಂದಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. 

ದಲಿತ ಸಂಘಟನೆಯಿಂದ ದೂರು: ಪ್ರಕರಣಕ್ಕೆ ಸಂಬಂಧಿಸಿದಂತೆ ದಲಿತ ಮುಖಂಡರಾದ ಶಾಂತರಾಜ್ ಹೆನ್ನಲಿ ಮತ್ತು  ಮಳಲಿ ಗೋಪಾಲ್ , ಪೋಲಿಸರಿಗೆ ದೂರು ನೀಡಿದ್ದು, 'ದಲಿತರ ಮೇಲೆ ಸಂಘಪರಿವಾರ ಪದೇ ಪದೇ ಹಲ್ಲೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಇನ್ನೂ 7 ಜನರು ಭಾಗಿಯಾಗಿದ್ದಾರೆ ಇವರ  ಮೇಲೆ ಪ್ರಕರಣ ದಾಖಲಿಸಬೇಕು' ಎಂದು ಒತ್ತಾಯಿಸಿದ್ದಾರೆ.

ಪತ್ರಿಕೆಯೊಂದಿಗೆ ಮಾತನಾಡಿದ ದಸಂಸ ಮುಖಂಡ ಶಾಂತರಾಜ್ ಹೆನ್ನಲಿ, 'ದನ ಕಡಿದ ಪ್ರಕಣಕ್ಕೆ ಸಂಬಂಧಿಸಿದಂತೆ ಪೋಲಿಸರು ಕಾನೂನು ಕ್ರಮ ಕೈಗೊಳ್ಳಲಿ, ಆದರೆ ಅನೈತಿಕ ಪೋಲಿಸ್ ಗಿರಿಗೆ ನಮ್ಮ ವಿರೋಧವಿದೆ' ಎಂದರು.

'ಇತ್ತೀಚೆಗೆ ಸಕಲೇಶಪುರ ಮತ್ತು ಹಾಸನದಲ್ಲಿ ಪ್ರತಿಭಟನೆ ನಡೆಸಿ ಭಜರಂಗದಳದ ವರ್ತನೆಯ ವಿರುದ್ಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠದಿಕಾರಿಗಳಿಗೆ ದೂರು ನೀಡಿದ್ದೆವು. ಇಲ್ಲಿಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಮನವರಿಕೆ ಮಾಡಿದ್ದೆವು ಅದರೆ ಮತ್ತೆ ದಲಿತರ ಮೇಲಿನ ಹಲ್ಲೆ ಮರುಕಳಿಸಿದೆ. ಇವರಿಗೆ ಕಾನೂನಿನ ಭಯವಿಲ್ಲ' ಎಂದರು.

ಇದನ್ನೂ ಓದಿ: ಸಕಲೇಶಪುರ | ಕರು ಸಾಗಿಸುತ್ತಿದ್ದ ದಲಿತ ಯುವಕನ ಮೇಲೆ ಹಲ್ಲೆ ಆರೋಪ: ಬಜರಂಗದಳದ 9 ಮಂದಿ ಕಾರ್ಯಕರ್ತರ ವಿರುದ್ಧ FIR

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News