ಮತ್ತೆ ‘ಲಾಕ್‍ಡೌನ್': ಕಂದಾಯ ಸಚಿವ ಆರ್. ಅಶೋಕ್ ಸುಳಿವು

Update: 2022-01-02 11:33 GMT

ಬೆಂಗಳೂರು, ಜ. 2: ‘ಕೋವಿಡ್ ಸೋಂಕಿನ ಮಾರ್ಗಸೂಚಿಗಳ ಕುರಿತು ಸಾರ್ವಜನಿಕರು ನಿರ್ಲಕ್ಷ್ಯವಹಿಸಿದರೆ ಮುಂಬೈ, ಹೊಸದಿಲ್ಲಿ, ಪಶ್ಚಿಮ ಬಂಗಾಳದ ರೀತಿ ಲಾಕ್‍ಡೌನ್ ಮಾಡಬೇಕಾಗುತ್ತದೆ' ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ಪರೋಕ್ಷವಾಗಿ ಲಾಕ್‍ಡೌನ್ ಘೋಷಣೆಯ ಬಗ್ಗೆ ಸುಳಿವು ನೀಡಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆಮಾತನಾಡಿದ ಅವರು, ‘ರಾಜಧಾನಿ ಬೆಂಗಳೂರು ಅನ್ನು ರೆಡ್‍ಝೋನ್ ಎಂದು ಕೇಂದ್ರ ಸರಕಾರ ಹೇಳಿದೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ತಜ್ಞರು ಹಾಗೂ ಸಚಿವರನ್ನು ಒಳಗೊಂಡಂತೆ ಮತ್ತೊಮ್ಮೆ ಸಭೆ ಕರೆದು ಕಠಿಣ ನಿಯಮಗಳ ಬಗ್ಗೆ ನಿರ್ಧಾರ ಮಾಡಬಹುದು ಎಂದು ತಿಳಿಸಿದರು.

ಕೋವಿಡ್ ಮೂರನೇ ಅಲೆ ಬರುತ್ತದೆ ಎಂಬ ವಾತಾವರಣ ನಿರ್ಮಾಣವಾಗಿದೆ. ಮತ್ತೊಂದೆಡೆ ತಜ್ಞರ ಸಮಿತಿ ನೀಡುವ ಸಲಹೆಗಳನ್ನು ಯಥಾವತ್ತಾಗಿ ಜಾರಿಮಾಡಲಾಗುತ್ತದೆ ಎಂದ ಅವರು, ಸಾರ್ವಜನಿಕರು ಕೋವಿಡ್ ಸೋಂಕು ತಡೆಗಟ್ಟಲು ಸರಕಾರ ಹೇರಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್ ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಟಾನಕ್ಕೆ ಆಗ್ರಹಿಸಲು ನಡೆಸಲು ಮುಂದಾಗಿರುವ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅಶೋಕ್, ನಮಗೆ ಯಾವುದೇ ರ್ಯಾಲಿ, ಸಭೆ ಬಗ್ಗೆ ತಲೆಯಲ್ಲಿ ಇಲ್ಲ. ಹೀಗಾಗಿ ಜ.4 ಅಥವಾ 5ರಂದು ಸಭೆ ಮಾಡಿ ಕೊವೀಡ್ ಸೋಂಕು ತಡೆಗಟ್ಟಲು ಬಿಗಿ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಸಚಿವ ಆರ್.ಅಶೋಕ್ ಇದೇ ಸಂದರ್ಭದಲ್ಲಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News