ಸೇವೆಯಿಂದ ವಜಾಗೊಂಡಿದ್ದ ಸಾರಿಗೆ ನೌಕರರ ಮರು ನೇಮಕ: ಸಚಿವ ಬಿ.ಶ್ರೀರಾಮುಲು

Update: 2022-01-02 11:38 GMT

ಬೆಂಗಳೂರು, ಜ. 2: ‘ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಿ, ವಜಾಗೊಂಡಿರುವ ಸಾರಿಗೆ ನೌಕರರನ್ನು ಮರಳಿ ಸೇರ್ಪಡೆ ಮಾಡಿಕೊಳ್ಳಲು ನಾಲ್ಕುವಾರ ಅವಕಾಶ ನೀಡಲಾಗಿದೆ' ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.

ರವಿವಾರ ಗದಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು ಎಂಬುದು ಸೇರಿದಂತೆ ಮತ್ತಿತರೆ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ಎಪ್ರಿಲ್‍ನಲ್ಲಿ ನಿರಂತರ ಮುಷ್ಕರ ನಡೆಸಿದ್ದರು. 

ಮುಷ್ಕರ ಕೈಬಿಟ್ಟು, ಸೇವೆಗೆ ಹಾಜರಾಗಬೇಕು ಎಂಬ ಸರಕಾರದ ಮನವಿಗೂ ಸ್ಪಂದಿಸದೆ, ಅನಧಿಕೃತ ಗೈರು ಹಾಜರಾಗಿದ್ದರು. ಅವರಲ್ಲಿ ಅನೇಕರನ್ನು ಅಮಾನತುಗೊಳಿಸಲಾಗಿತ್ತು. ಕೆಲವರಿಗೆ ಕಡ್ಡಾಯ ವರ್ಗಾವಣೆ ಶಿಕ್ಷೆ ವಿಧಿಸಲಾಗಿತ್ತು. ನಾನು ಸಾರಿಗೆ ಮಂತ್ರಿಯಾದ ಬಳಿಕ ಸಿಬ್ಬಂದಿಗಳ ಅಮಾನತು, ವರ್ಗಾವಣೆಯನ್ನು ಹಿಂಪಡೆದಿದ್ದೇನೆ ಎಂದರು.

ಆದರೆ, ವಜಾಗೊಂಡಿರುವ ಸಾರಿಗೆ ನೌಕರರು ಹೈಕೋರ್ಟ್ ಮೊರೆ ಹೋಗಿದ್ದರಿಂದ ಕಾನೂನಾತ್ಮಕ ತೊಡಕಿನಿಂದಾಗಿ ಅವರನ್ನು ಮರು ನಿಯುಕ್ತಿಗೊಳಿಸಲು ಸಾಧ್ಯವಾಗಿಲ್ಲ. ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಹಾಗೂ ಮಾನವೀಯ ದೃಷ್ಟಿಯಿಂದ ಸರಕಾರ ಅವರನ್ನು ಮರು ನಿಯುಕ್ತಿಗೆ ಉದ್ದೇಶಿಸಿದೆ.

ಈ ನಿಟ್ಟಿನಲ್ಲಿ ಮುಂದಿನ ನಾಲ್ಕು ವಾರಗಳಲ್ಲಿ ಲೋಕ ಅದಾಲತ್ ಮೂಲಕ ಕಾನೂನಾತ್ಮಕ ಸಮಸ್ಯೆಯನ್ನು ಇತ್ಯರ್ಥ ಪಡಿಸಿ, ಸೇವೆಗೆ ಮರು ಸೇರ್ಪಡೆಗೊಳಿಸಲು ಕ್ರಮವಹಿಸಲು ಸಾರಿಗೆ ಇಲಾಖೆಯ ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ನೌಕರರು ಮುಷ್ಕರ ಕೈಗೊಳ್ಳುವ ಬದಲು ಸರಕಾರದೊಂದಿಗೆ ಮಾತುಕತೆ ನಡೆಸಿ ಸೌಹಾರ್ದಯುತವಾಗಿ ಬೇಡಿಕೆ ಈಡೇರಿಸಿಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News