ಚಾಮರಾಜನಗರ: ಆಕ್ಸಿಜನ್ ಸಿಗದೆ ಪ್ರಾಣ ಕಳೆದುಕೊಂಡ 36 ಜನರ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ: ಸಿದ್ದರಾಮಯ್ಯ

Update: 2022-01-02 12:12 GMT

ಚಾಮರಾಜನಗರ: 'ಜಿಲ್ಲೆಯಲ್ಲಿ ಆಕ್ಸಿಜನ್ ಸಿಗದೆ ಪ್ರಾಣ ಕಳೆದುಕೊಂಡ 36 ಜನರ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.  

ಚಾಮರಾಜನಗರದಲ್ಲಿ ಇಂದು ಆಯೋಜಿಸಿದ್ದ ಮೇಕೆದಾಟು ಯೋಜನೆ ಜಾರಿ ಕುರಿತಾದ ಜನಜಾಗೃತಿ ಸಭೆ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

''ಈ ಹಿಂದೆ ಕೊರೋನ ರೋಗ ಹೆಚ್ಚಾದಾಗ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದರು. ಆಗ ಮೃತರ ಕುಟುಂಬದವರನ್ನು ಸಂತೈಸಿ, ಅವರಿಗೆ ನ್ಯಾಯ ದೊರಕಿಸಿಕೊಡಲು ಚಾಮರಾಜನಗರಕ್ಕೆ ಕಡೆಯದಾಗಿ ಬಂದಿದ್ದೆ. ರಾಜ್ಯ ಸರ್ಕಾರದ ಆರೋಗ್ಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ ಸತ್ತಿದ್ದು ಕೇವಲ ಮೂರೆ ಮಂದಿ ಎಂದು ಸುಳ್ಳು ಹೇಳಿದ್ದರು, ಜಗತ್ತಿಗೆ ಸತ್ಯವನ್ನು ತೆರೆದಿಡಲು ನಾನು ಚಾಮರಾಜನಗರಕ್ಕೆ ಬಂದು, ವೈದ್ಯರು, ಅಧಿಕಾರಿಗಳೊಂದಿಗೆ ಸಭೆ ಮಾಡಿ ಸತ್ತವರ ನಿಜವಾದ ಲೆಕ್ಕವನ್ನು ಮಾಧ್ಯಮಗಳೆದುರು ಹೇಳಿದ್ದೆ. ಆಕ್ಸಿಜನ್ ಸಿಗದೆ ಪ್ರಾಣ ಕಳೆದುಕೊಂಡ 36 ಜನರ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ'' ಎಂದು ಹೇಳಿದ್ದಾರೆ. 

''ಚಾಮರಾಜನಗರ ಜಿಲ್ಲೆಗೆ ಬಂದರೆ ಮುಖ್ಯಮಂತ್ರಿ ಹುದ್ದೆ ಹೋಗುತ್ತದೆ ಎಂಬ ಮೂಢನಂಬಿಕೆ ಇತ್ತು, ಇದನ್ನು ತೊಲಗಿಸಬೇಕು ಎಂದೇ ನಾನು ಮುಖ್ಯಮಂತ್ರಿ ಆಗಿದ್ದಾಗ 10 ರಿಂದ 12 ಬಾರಿ ಬಂದು ಹೋಗಿದ್ದೆ ಮತ್ತು ಐದು ವರ್ಷ ಪೂರ್ಣಾವಧಿಗೆ ಮುಖ್ಯಮಂತ್ರಿ ಆಗಿ ಉಳಿದಿದ್ದೆ. ರಾಚಯ್ಯ ಮತ್ತು ನಾನು ಚಾಮರಾಜನಗರವನ್ನು ಹೊಸ ಜಿಲ್ಲೆಯಾಗಿ ಘೋಷಣೆ ಮಾಡಿದ್ದೆವು. ಇಂದು ಅವರು ನಮ್ಮೊಂದಿಗಿಲ್ಲ ಅನ್ನೋದು ನೋವಿನ ವಿಚಾರ. ನಾನು ಮುಖ್ಯಮಂತ್ರಿ ಆಗಿದ್ದಾಗ ಸುಮಾರು ಹತ್ತು ಸಾವಿರ ಕೋಟಿಗೂ ಅಧಿಕ ಹಣವನ್ನು ಚಾಮರಾಜನಗರದ ಅಭಿವೃದ್ಧಿಗೆ ಕೊಟ್ಟಿದ್ದೆ. ಕೃಷಿ, ಕಾನೂನು ಕಾಲೇಜು, ಸರ್ಕಾರಿ ಆಸ್ಪತ್ರೆ, ದ್ವಿಪಥ ರಸ್ತೆಗಳು ಇವೆಲ್ಲ ನಮ್ಮ ಸರ್ಕಾರದ ಕೊಡುಗೆಗಳು, ಇಂದು ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಕೂಡ ನಮ್ಮ ಸರ್ಕಾರದ ಕಾಲದಲ್ಲಿ ಅನುಮೋದನೆಗೊಂಡವೇ ಆಗಿವೆ'' ಎಂದು ತಿಳಿಸಿದರು. 

''ಬಿಜೆಪಿ ಸರ್ಕಾರ ಬಂದಮೇಲೆ ರಾಜ್ಯದಲ್ಲಿ ಒಂದೇ ಒಂದು ಹೊಸದಾಗಿ ಮನೆ ನಿರ್ಮಿಸಿಕೊಟ್ಟಿಲ್ಲ. ನಮ್ಮ ಕಾಲದಲ್ಲಿ ಕೊಟ್ಟ ಮನೆಗಳಿಗೂ ಹಣ ಬಿಡುಗಡೆ ಮಾಡ್ತಿಲ್ಲ. ವಸತಿ ಸಚಿವ ಸೋಮಣ್ಣನಿಗೆ ಬಡವರಿಗೆ ಮನೆ ಕೊಡೋಕಾಗಲ್ಲ ಅಂದ್ರೆ ಅಧಿಕಾರದಲ್ಲಿ ಯಾಕಿದೀರಪ್ಪ, ರಾಜೀನಾಮೆ ಕೊಡಿ ಎಂದರೆ ಸರ್ಕಾರ ದುಡ್ ಕೊಡ್ತಿಲ್ಲ ಸಾರ್ ಅಂತಾರೆ, ವಿಜಯೇಂದ್ರನಿಗೂ ಸೋಮಣ್ಣನಿಗೂ ವೈಯಕ್ತಿಕವಾಗಿ ಸರಿ ಇರಲಿಲ್ಲ ಹಾಗಾಗಿ ಇವರ ಇಲಾಖೆಗೆ ಬೇಕಂತಲೇ ದುಡ್ಡು ಬಿಡುಗಡೆ ಮಾಡುತ್ತಾ ಇರಲಿಲ್ಲ. ಅಭಿವೃದ್ಧಿ ಕೆಲಸ ಮಾಡದ ಬಿಜೆಪಿ ಸರ್ಕಾರವನ್ನು ಕಿತ್ತು ಬಿಸಾಕು ಮುಂದಿನ ಚುನಾವಣೆಯಲ್ಲಿ ಚಾಮರಾಜನಗರದ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು. ಅದು ಇಂದಿನಿಂದಲೇ ಆರಂಭ ಆಗಬೇಕು'' ಎಂದು ತಿಳಿಸಿದರು.

''1968 ರಲ್ಲೇ ಕಾಂಗ್ರೆಸ್ ಸರ್ಕಾರ ಮೇಕೆದಾಟು ಯೋಜನೆ ಜಾರಿಗೆ ಪ್ರಯತ್ನ ಮಾಡಿತ್ತು, ಆದರೆ ಆಗ ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ಜಲ ವಿವಾದ ನ್ಯಾಯಾಲಯದಲ್ಲಿ ಇದ್ದಿದ್ದರಿಂದ ಅನುಷ್ಠಾನ ಸಾಧ್ಯವಾಗಲಿಲ್ಲ. ನಂತರ 2017 ರಲ್ಲಿ ನಮ್ಮ ಸರ್ಕಾರ ಈ ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿತ್ತು. ಆಗ ಯೋಜನಾ ವೆಚ್ಚ  5,912 ಕೋಟಿ ರೂ. ನಂತರ ಸಮ್ಮಿಶ್ರ ಸರ್ಕಾರ ಬಂದಮೇಲೆ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ಅವರು ಮತ್ತೆ ರೂ. 9000 ಕೋಟಿಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದರು. ಆಗಲೂ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿಲ್ಲ'' ಎಂದು ಕಿಡಿಗಾರಿದರು.

ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಯೋಜನೆ ಜಾರಿಗೆ ಪ್ರಯತ್ನ ಮಾಡದೆ ಈಗ ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಮಾಡಲು ಹೊರಟಿದ್ದಾರೆ ಎಂದು ಗೋವಿಂದ ಕಾರಜೋಳ ಸುಳ್ಳು ಆರೋಪ ಮಾಡಿದ್ದಾರೆ. ಅವರ ಆರೋಪಕ್ಕೆ ಸೂಕ್ತ ಸಾಕ್ಷಿ ಇದ್ದರೆ ಕೂಡಲೇ ಬಿಡುಗಡೆ ಮಾಡಲಿ ಎಂದು ಸವಾಲು ಹಾಕುತ್ತೇನೆ. ಇದೊಂದು ಕುಡಿಯುವ ನೀರಿನ ಯೋಜನೆ ಹಾಗಾಗಿ ಯಾರೂ ಕೂಡ ತಕರಾರು ಮಾಡುವಂತಿಲ್ಲ, ಕೇಂದ್ರದ ಅರಣ್ಯ ಇಲಾಖೆಯ ಅನುಮತಿ ಒಂದು ಸಿಕ್ಕರೆ ಅಣೆಕಟ್ಟು ನಿರ್ಮಾಣ ಮಾಡಲು ಬೇರಾವ ಅನುಮತಿಯೂ ಬೇಡ. ಎರಡೂ ಕಡೆ ಬಿಜೆಪಿಯವರ ಸರ್ಕಾರ ಇದೆ, ಆದರೂ ಯೋಜನೆ ಜಾರಿ ಮಾಡದೆ ಯಾಕೆ ಸುಮ್ಮನಿದ್ದಾರೆ? ಇದೇನಾ ಡಬ್ಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ? ಎಂದು ಪ್ರಶ್ನಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News