ಬಾಂಗ್ಲಾದೇಶ: ದೇವಸ್ಥಾನ ಅಪವಿತ್ರೀಕರಣ ಆರೋಪ; ಪ್ರಕರಣ ದಾಖಲಿಸಿದ ಪೊಲೀಸರು

Update: 2022-01-02 18:39 GMT

ಬಾಂಗ್ಲಾದೇಶ- ಭಾರತದ ಗಡಿ ಜಿಲ್ಲೆಯಾದ ಲಾಲ್‌ಮೊನಿರ್ಹಾತ್‌ ಜಿಲ್ಲೆಯಲ್ಲಿ ಕಿಡಿಗೇಡಿಗಳು ಮೂರು ದೇವಸ್ಥಾನಗಳನ್ನು ಅಪವಿತ್ರಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. 

ದೇವಸ್ಥಾನ ಅಪವಿತ್ರಗೊಳಿಸಿದವರನ್ನು ಬಂಧಿಸುವಂತೆ ಅಲ್ಪಸಂಖ್ಯಾತ ಹಿಂದೂಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಶುಕ್ರವಾರ ಮುಂಜಾನೆ ದೇವಸ್ಥಾನಗಳ ಬಾಗಿಲಿನಲ್ಲಿ ಹಸಿ ಗೋ ಮಾಂಸವನ್ನು ದುಷ್ಕರ್ಮಿಗಳು ಇಟ್ಟಿದ್ದರು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಶನಿವಾರ ರಾತ್ರಿ ಹಿಂದೂಗಳು ಶ್ರೀ ರಾಧಾಗೋವಿಂದ ದೇವಸ್ಥಾನದಲ್ಲಿ, ಕಿಡಿಗೇಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು ಎಂದು ಡೈಲಿ ಸ್ಟಾರ್‌ ಪತ್ರಿಕೆ ವರದಿ ಮಾಡಿದೆ. 

ಡಿಸೆಂಬರ್‌ 26 ರಂದು ನಡೆದ ಸ್ಥಳೀಯ ಚುನಾವಣೆಗೆ ಹಾಗೂ ದೇವಸ್ಥಾನ ಅಪವಿತ್ರೀಕರಣಕ್ಕೆ ಸಂಬಂಧವಿದೆಯೇ ಎಂಬ ಆಯಾಮದ ಮೇಲೆಯೂ ತನಿಖೆ ನಡೆಯುತ್ತಿರುವುದಾಗಿ ಹೇಳಲಾಗಿದೆ. 

ಸ್ಥಳಕ್ಕೆ ಸ್ಥಳೀಯ ಠಾಣಾಧಿಕಾರಿ ಇರ್ಷಾದುಲ್‌ ಆಲಂ ಭೇಟಿ ನೀಡಿದ್ದು, ಶೀಘ್ರವೇ ತಪ್ಪಿತಸ್ಥರನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ. ಘಟನೆಯಲ್ಲಿ ಭಾಗಿಯಾದ ಎಲ್ಲರ ವಿರುದ್ಧವೂ ಕ್ರಮಜರುಗಿಸುವುದಾಗಿ ಅವರು ಮಾಧ್ಯಮಗಳ ಬಳಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News