ಓ ಮೆಣಸೇ...

Update: 2022-01-02 18:32 GMT

ಮೂರು ಕೃಷಿ ಕಾಯ್ದೆಗಳನ್ನು ಮತ್ತೆ ತರುವ ಉದ್ದೇಶ ಕೇಂದ್ರ ಸರಕಾರಕ್ಕೆ ಇಲ್ಲ -ನರೇಂದ್ರ ಸಿಂಗ್ ತೋಮರ್, ಕೇಂದ್ರ ಸಚಿವ
ಬಹುಶಃ ಮೂರು ಕಾಯ್ದೆಗಳನ್ನು ವಿಲೀನಗೊಳಿಸಿ ಬೇರೆ ಹೆಸರನಲ್ಲಿ ಮತ್ತೆ ತರುವ ಉದ್ದೇಶವಿರಬೇಕು.


ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಿಜವಾದ ಹಿಂದೂ ಹುಲಿ-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಹಿಡಿದು ಬೋನಿಗೆ ಹಾಕುವುದಕ್ಕೆ ಸೂಚನೆಯೆ?

  ಸಿಖ್ ಗುರುಗಳು ತಮ್ಮ ಜೀವನದುದ್ದಕ್ಕೂ ಯಾವ ಅಪಾಯಗಳ ಬಗ್ಗೆ ಜನರನ್ನು ಎಚ್ಚರಿಸಿದ್ದರೋ ಅಂಥ ಅಪಾಯಗಳು ಈಗಲೂ ಅಸ್ತಿತ್ವದಲ್ಲಿವೆ -ನರೇಂದ್ರ ಮೋದಿ, ಪ್ರಧಾನಿ
ಅದಕ್ಕಾಗಿಯೇ ಸಿಖ್ಖರು ಆರೆಸ್ಸೆಸ್ ವಿರುದ್ಧ ಒಂದಾಗುತ್ತಿರುವುದು.

ಬಿಜೆಪಿ ಆಡಳಿತಕ್ಕಿಂತ ಜಮ್ಮು-ಕಾಶ್ಮೀರದ ಕೊನೆಯ ಮಹಾರಾಜ ಹರಿಸಿಂಗ್ ಅವರ ಆಡಳಿತವೇ ಬಹಳ ಚೆನ್ನಾಗಿತ್ತು -ಗುಲಾಂ ನಬಿ ಆಝಾದ್, ಕಾಂಗ್ರೆಸ್ ನಾಯಕ
ಬಿಜೆಪಿ ಸರಕಾರದ ಗುಲಾಂ ಆಗುವುದಕ್ಕಿಂತ, ಹರಿಸಿಂಗ್ ಗುಲಾಮನಾಗುವುದರಲ್ಲೇ ಲಾಭವಿದೆ ಎಂದು ತಡವಾಗಿ ಗೊತ್ತಾಗಿದೆ.

ಯಾವುದೇ ಸಂಘಟನೆಗಳು ದೇಶವಿರೋಧಿ ಕೆಲಸಗಳಲ್ಲಿ ತೊಡಗಿಕೊಂಡಿರುವುದು ಕಂಡು ಬಂದರೆ ಅವುಗಳನ್ನು ಮುಲಾಜಿಲ್ಲದೆ ನಿಷೇಧಿಸಲಾಗುವುದು

-ಆರಗ ಜ್ಞಾನೇಂದ್ರ, ಸಚಿವ
ನೀವು ಇಡೀ ಸರಕಾರವನ್ನೇ ನಿಷೇಧಿಸಬೇಕಾದ ಸಂದರ್ಭ ಬರಬಹುದು.

ಪ್ರಧಾನಿ ಮೋದಿ ತಳಮಟ್ಟದಿಂದಲೂ ಉತ್ತಮ ಆಡಳಿತ ನೀಡುವ ಮೂಲಕ ಪ್ರಜಾಪ್ರಭುತ್ವದ ಮೇಲೆ ಜನರಿಗೆ ವಿಶ್ವಾಸ ಮರಳುವಂತೆ ಮಾಡಿದರು
-ಅಮಿತ್ ಶಾ, ಕೇಂದ್ರ ಸಚಿವ

ಹೌದು, ಕಾಂಗ್ರೆಸ್ ಮೇಲಿನ ವಿಶ್ವಾಸ ಮರಳುವಂತೆ ಮಾಡಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನಕ್ಕೆ ಆಪತ್ತು ಎದುರಾಗಲಿದೆ

-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

ನಿಮ್ಮ ಪ್ರಕಾರ ಇನ್ನೂ ಸಂವಿಧಾನಕ್ಕೆ ಯಾವುದೇ ಆಪತ್ತು ಬಂದಿಲ್ಲವೇ?

ಜಡ್ಜ್‌ಗಳನ್ನು ನ್ಯಾಯಾಲಯದ ಕೊಲಿಜಿಯಂ ವ್ಯವಸ್ಥೆಯೇ ನೇಮಕ ಮಾಡುತ್ತದೆ ಎಂಬುದು ಸುಳ್ಳು

-ಎನ್.ವಿ.ರಮಣ, ಮುಖ್ಯ ನ್ಯಾಯಮೂರ್ತಿ

ಅದು ಸುಳ್ಳು ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.

ನಾನು 24 ಕ್ಯಾರೆಟ್ ಕಾಂಗ್ರೆಸ್ ಮ್ಯಾನ್

-ಗುಲಾಂ ನಬಿ ಆಝಾದ್, ಕಾಂಗ್ರೆಸ್ ನಾಯಕ

ನಿಮ್ಮ ಹೆಸರಿನ ಜೊತೆಗಿರುವ ‘ಗುಲಾಂ’ ನಿಮ್ಮ ಕ್ಯಾರೆಟನ್ನು ಈಗಾಗಲೇ ಸಾಬೀತುಪಡಿಸಿದೆ.

ಬಿಜೆಪಿಯೇತರ ಮತಗಳನ್ನು ಟಿಎಂಸಿ ಮತ್ತು ಆಪ್ ಪಕ್ಷಗಳು ಒಡೆಯುತ್ತಿವೆ

-ಪಿ.ಚಿದಂಬರಂ, ಕಾಂಗ್ರೆಸ್ ಮುಖಂಡ

ನಡು ಬೀದಿಯಲ್ಲಿ ಶ್ರೀಸಾಮಾನ್ಯನ ತಲೆ ಒಡೆಯುತ್ತಿರುವವರ ಬಗ್ಗೆಯೂ ಸ್ವಲ್ಪ ಮಾತನಾಡಿ.

ಭಾರತದ ವೈವಿಧ್ಯತೆಯ ರಕ್ಷಣೆಗೆ ಕಾಂಗ್ರೆಸ್‌ನ ಬದ್ಧತೆ ಪ್ರಶ್ನಾತೀತ

-ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ
  ಕಾಂಗ್ರೆಸ್‌ನೊಳಗಿನ ವೈವಿಧ್ಯತೆಗಳ ಬಗ್ಗೆಯೂ ಬದ್ಧತೆಯನ್ನು ಘೋಷಿಸಿ.

  ವರ್ಷದ 365 ದಿನ ದಣಿವರಿಯದೆ ಕೆಲಸ ಮಾಡುವ ಶಕ್ತಿ, ಸ್ಫೂರ್ತಿ ನನ್ನಲ್ಲಿದೆ
-ಬಸವರಾಜ ಬೊಮ್ಮಾಯಿ, ಸಿಎಂ
  ಆದರೆ ಅದನ್ನು ಸಹಿಸುವ ಶಕ್ತಿ, ಸ್ಫೂರ್ತಿ ಪಕ್ಷದೊಳಗಿರುವ ಇತರರಿಗೂ ಇರಬೇಕಲ್ಲವೆ?

  ಓಬವ್ವ ಜಯಂತಿ ಮಾಡುವ ಬೊಮ್ಮಾಯಿ ಬೇಕೋ, ಟಿಪ್ಪು ಜಯಂತಿ ಮಾಡುವ ಸಿದ್ದರಾಮಯ್ಯ ಬೇಕೋ ಎನ್ನುವುದನ್ನು ಜನ ತೀರ್ಮಾನಿಸಲಿದ್ದಾರೆ
-ಸುನೀಲ್ ಕುಮಾರ್, ಸಚಿವ
  ಸರಕಾರದ ಬಗ್ಗೆ ನಿರಾಶರಾಗಿರುವ ಜನರು, ನಮಗೆ ಓಬವ್ವನ ಕೈಯಲ್ಲಿರುವ ಒನಕೆ ಬೇಕು ಎನ್ನುತ್ತಿದ್ದಾರೆ.

  ನನ್ನ ಇಲಾಖೆಯಲ್ಲಿ ನಯಾ ಪೈಸೆ ಅವ್ಯವಹಾರ ನಡೆದಿಲ್ಲ
-ಕೋಟ ಶ್ರೀನಿವಾಸ ಪೂಜಾರಿ, ಸಚಿವ

ಜನರು ನಯಾ ಪೈಸೆಯ ಬಗ್ಗೆ ಹೇಳುತ್ತಿಲ್ಲ, ಕೋಟ್ಯಂತರ ರೂ. ಅವ್ಯವಹಾರದ ಬಗ್ಗೆ ಆರೋಪಿಸುತ್ತಿದ್ದಾರೆ.

ಈ ಹಿಂದೆ 2-3 ಬಾರಿ ಸಚಿವರಾಗಿ, ಈಗಲೂ ಸಚಿವರಾಗಿರುವವರು ತಮ್ಮ ಸ್ಥಾನವನ್ನು ಹೊಸಬರಿಗೆ ಬಿಟ್ಟು ಕೊಡಬೇಕುa
-ಎಂ.ಪಿ.ರೇಣುಕಾಚಾರ್ಯ, ಶಾಸಕ

  ಈ ಹಿಂದೆ ಶಾಸಕರಾಗಿದ್ದವರು ಮುಂದಿನ ದಿನಗಳಲ್ಲಿ ಹೊಸಬರಿಗೆ ಅಭ್ಯರ್ಥಿ ಸ್ಥಾನ ಬಿಟ್ಟುಕೊಡಲು ಸಿದ್ಧರಿದ್ದಾರೆಯೆ?

  ಗ್ರಾ.ಪಂ. ಸದಸ್ಯನೊಬ್ಬ 15 ಲಕ್ಷ ರೂ.ವರೆಗೆ ಲಂಚ ಪಡೆದರೆ ಅದು ಭ್ರಷ್ಟಾಚಾರವಲ್ಲ
-ಜನಾರ್ದನ ಮಿಶ್ರಾ, ಮ.ಪ್ರ. ಬಿಜೆಪಿ ಸಂಸದ

ಬಿಜೆಪಿ ಸಂಸದನೊಬ್ಬ ಎಲ್ಲಿಯವರೆಗೆ ಲಂಚ ಪಡೆಯಬಹುದು ಎನ್ನುವುದನ್ನು ವಿವರಿಸಿ.

ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದ ಮಾದರಿಯಲ್ಲೇ ಮತಾಂತರ ನಿಷೇಧ ಕಾಯ್ದೆಯ ವಿರುದ್ಧವೂ ಹೋರಾಟ ನಡೆಸುತ್ತೇವೆ

-ತನ್ವೀರ್ ಸೇಠ್, ಶಾಸಕ
ಕನಿಷ್ಠ ನಿಮ್ಮ ಹೋರಾಟ ಕಾಯ್ದೆ ಜಾರಿಗೊಳ್ಳುವ ಮೊದಲೇ ಆರಂಭವಾಗಲಿ.

ಪಂಚೆ ಉಟ್ಟವರೆಲ್ಲ ರೈತರಲ್ಲ
-ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
  ಹಾಗೆಂದು, ದೇವೇಗೌಡರ ಪಂಚೆ ಎಳೆಯುವುದೇ?

  ಮಾತೃ ಧರ್ಮಕ್ಕೆ ಮರಳುವ ಹಿಂದೂ ಬಾಂಧವರನ್ನು ಯಾವುದೇ ತಾರತಮ್ಯವಿಲ್ಲದೆ ಪ್ರೀತಿಯಿಂದ ಸ್ವೀಕರಿಸಬೇಕು
-ಮೋಹನ್ ಭಾಗವತ್, ಆರೆಸ್ಸೆಸ್ ಮುಖಂಡ
ಈಗಾಗಲೇ ಮಾತೃಧರ್ಮದಲ್ಲಿ ಅನ್ಯಾಯ ಎದುರಿಸುತ್ತಿರುವ ದಲಿತರಿಗೆ ನಿಮ್ಮ ಪ್ರೀತಿ ದೊರಕುವುದಕ್ಕೆ ಏನು ಮಾಡಬೇಕು?ಮತಾಂತರವಾಗಿ ಬಳಿಕ ಮಾತೃ ಧರ್ಮಕ್ಕೆ ಮರಳಬೇಕೆ?

  ಮಠಾಧೀಶರು ಹಾಗೂ ಧರ್ಮಾಧಿಕಾರಿಗಳು ಮತಾಂತರ ನಿಷೇಧ ಕಾಯ್ದೆಯನ್ನು ಖಂಡಿಸಬೇಕು
-ಎಚ್. ವಿಶ್ವನಾಥ್, ವಿ.ಪ. ಸದಸ್ಯ
  ಪಕ್ಷಾಂತರ ಕಾಯ್ದೆಯೆಂದು ನೀವು ಮತಾಂತರ ಕಾಯ್ದೆಯನ್ನು ತಪ್ಪು ತಿಳಿದುಕೊಂಡಿಲ್ಲ ತಾನೆ?

  ಎರಡು ಮಂಡಿ ನೋವಿದ್ದ ವಾಜಪೇಯಿಯವರನ್ನು ಪ್ರಧಾನಿ ಹುದ್ದೆಯಿಂದ ಬದಲಿಸಲಿಲ್ಲ, ಒಂದು ಮಂಡಿ ನೋವಿರುವ ಸಿಎಂ ಬೊಮ್ಮಾಯಿಯನ್ನೇಕೆ ಬದಲಾಯಿಸಬೇಕು
-ಪ್ರತಾಪ ಸಿಂಹ, ಸಂಸದ

ನೋವು ಮಂಡಿಯ ಭಾಗದಲ್ಲಲ್ಲ, ಇನ್ನಾವುದೋ ಸೂಕ್ಷ್ಮ ಭಾಗದಲ್ಲಿ ಎದ್ದಿರಬೇಕು.

ಕೊರಗರು ಎಲ್ಲ ಮರೆತು ನೆಮ್ಮದಿಯಿಂದಿರಬೇಕು, ಸರಕಾರ ನಿಮ್ಮ ಜೊತೆಗಿದೆ

ಕೋಟ ಶ್ರೀನಿವಾಸ ಪೂಜಾರಿ, ಸಚಿವ
  ಅವರ ಮೇಲೆ ಹಾಕಿದ ಎಫ್‌ಐಆರ್‌ನ್ನು ಮರೆಯಲು ಪೊಲೀಸರು ಸಿದ್ಧರಿದ್ದಾರೆಯೆ?

ಕೆಲವರು ಬಂದ್‌ಗೆ ‘ನೈತಿಕ’ ಬೆಂಬಲ ನೀಡುತ್ತೇವೆ ಎನ್ನುತ್ತಾರೆ ಅದರ ಅರ್ಥವೇನು -ವಾಟಾಳ್ ನಾಗರಾಜ್, ಹೋರಾಟಗಾರ

ಬಂದ್‌ನ್ನು ಅನೈತಿಕ ದಾರಿಯಲ್ಲಿ ವಿರೋಧಿಸುತ್ತೇವೆ ಎಂದು ಅರ್ಥ.

ಕಾಶ್ಮೀರ ಕಣಿವೆಯಲ್ಲಿ ಸಕ್ರಿಯ ಉಗ್ರರ ಸಂಖ್ಯೆ ಕ್ಷೀಣಿಸುತ್ತಿದೆ

-ವಿಜಯ್ ಕುಮಾರ್, ಕಾಶ್ಮೀರ ವಲಯ ಐಜಿಪಿ
  ಉಗ್ರರ ಪಾತ್ರವನ್ನು ಸರಕಾರವೇ ನಿರ್ವಹಿಸುತ್ತಿರುವಾಗ ಸಂಖ್ಯೆ ಕಡಿಮೆಯಾದರೂ ಏನಾದರೂ ವ್ಯತ್ಯಾಸವಿದೆಯೆ?

  ಸಂಕ್ರಾಂತಿ ಬಳಿಕ ಪಕ್ಷ ನನಗೆ ಸಿಹಿ ಸುದ್ದಿ ಕೊಡಲಿದೆ
-ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
  ಸಂಕ್ರಾತಿಯ ಬಳಿಕ ಇನ್ನೊಂದು ಸಿಡಿ ಬಿಡುಗಡೆಯಾಗುವ ಸಾಧ್ಯತೆಗಳಿವೆಯೆ?

  ಹಿಡಿದ ಕೆಲಸವನ್ನು ಪಟ್ಟು ಬಿಡದೆ ಮಾಡಿ ಮುಗಿಸುವ ಎದೆಗಾರಿಕೆ ಪ್ರಧಾನಿ ಮೋದಿಗೆ ಇದೆ
ಶರದ್ ಪವಾರ್, ಎನ್‌ಸಿಪಿ ನಾಯಕ
  ದೇಶವನ್ನು ಮಾರುವ ವಿಷಯದಲ್ಲಿ ಅವರ ಎದೆಗಾರಿಕೆಯನ್ನು ಮೆಚ್ಚಲೇಬೇಕು

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...