ಫ್ರಾನ್ಸ್: ಪ್ಲಾಸ್ಟಿಕ್ ನಲ್ಲಿ ಹಣ್ಣು, ತರಕಾರಿ ಪ್ಯಾಕಿಂಗ್ ಮಾಡುವುದಕ್ಕೆ ನಿಷೇಧ

Update: 2022-01-02 18:37 GMT

ಪ್ಯಾರಿಸ್, ಜ.2: ವಿಶ್ವದಲ್ಲಿ ಏಕಬಳಕೆಯ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ದೇಶದಲ್ಲಿ ಕೆಲ ವಿಧದ ಹಣ್ಣು ಮತ್ತು ತರಕಾರಿಗಳನ್ನು ಪ್ಲಾಸ್ಟಿಕ್ನಲ್ಲಿ ಪ್ಯಾಕಿಂಗ್ ಮಾಡುವುದನ್ನು ನಿಷೇಧಿಸಿರುವುದಾಗಿ ಫ್ರಾನ್ಸ್ ನ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರನ್ ಘೋಷಿಸಿದ್ದಾರೆ. 

ಏಕಬಳಕೆಯ ಪ್ಲಾಸ್ಟಿಕ್ ಅನ್ನು ಹಂತಹಂತವಾಗಿ ಕಡಿಮೆಗೊಳಿಸುವ ಉದ್ದೇಶ ಈ ಕ್ರಮದ ಹಿಂದಿದೆ ಎಂದು ಮಾಕ್ರನ್ ಹೇಳಿದ್ದಾರೆ.

ಈರುಳ್ಳಿ ಮತ್ತು ಕ್ಯಾರಟ್, ಟೊಮ್ಯಾಟೊ ಮತ್ತು ಆಲುಗಡ್ಡೆ, ಸೇಬು, ಮರಸೇಬು ಮತ್ತು ಇತರ 30 ವಸ್ತುಗಳನ್ನು ಪ್ಲಾಸ್ಟಿಕ್ನಲ್ಲಿ ಮಾರಾಟ ಮಾಡಬಾರದು ಎಂದು ಹೊಸ ನಿಯಮ ಸೂಚಿಸಿದೆ. ಅದರ ಬದಲು, ಮರುಬಳಕೆ ಸಾಧ್ಯವಾಗುವ ವಸ್ತುಗಳಲ್ಲಿ ಪ್ಯಾಕ್ ಮಾಡುವಂತೆ ಸೂಚಿಸಿದೆ. ಬೇಗನೆ ಕೊಳೆತುಹೋಗುವ ಬೆರೀ ಹಣ್ಣು, ಪೀಚ್ ಹಣ್ಣುಗಳನ್ನು ಪ್ಲಾಸ್ಟಿಕ್ನಲ್ಲಿ ಪ್ಯಾಕ್ ಮಾಡಲು ಅವಕಾಶವಿದೆ. ಆದರೆ ಮುಂದಿನ ದಿನಗಳಲ್ಲಿ ಹಂತಹಂತವಾಗಿ ಬಳಕೆಗೆ ಅಂತ್ಯಹಾಡಲು ನಿರ್ಧರಿಸಲಾಗಿದೆ. 

ಪತ್ರಿಕೆ ಹಾಗೂ ಇತರ ಪ್ರಕಟಣೆಗಳನ್ನೂ ಪ್ಲಾಸ್ಟಿಕ್ ನಲ್ಲಿ ಪ್ಯಾಕ್ ಮಾಡುವಂತಿಲ್ಲ. ಫಾಸ್ಟ್ ಫುಡ್ ಹೋಟೆಲ್ ಗಳು ಮಕ್ಕಳಿಗೆ ಉಚಿತ ಪ್ಲಾಸ್ಟಿಕ್ ಆಟಿಕೆ ನೀಡುವಂತಿಲ್ಲ ಎಂದು ಸರಕಾರ ಹೇಳಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನೀರಿನ ಪ್ಲಾಸ್ಟಿಕ್ ಬಾಟಲಿಯ ಬಳಕೆ ಕಡಿಮೆಗೊಳಿಸುವ ಕ್ರಮ ಕೈಗೊಳ್ಳಲಾಗುವುದು. ಹೊಸ ನಿರ್ಬಂಧ ಕ್ರಮಗಳಿಂದ 1 ವರ್ಷದಲ್ಲಿ ಸುಮಾರು 1 ಬಿಲಿಯನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿವಾರಿಸುವ ನಿರೀಕ್ಷೆ ಇದೆ ಎಂದು ಸರಕಾರ ಹೇಳಿದೆ.
  
ಹೊಸ ನಿಯಮದ ಬಗ್ಗೆ ದೇಶದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಫ್ರಾನ್ಸ್ನ ಪತ್ರಕರ್ತೆ ಆ್ಯನೆ ಎಲಿಸಬೆತ್ ಹೇಳಿದ್ದಾರೆ. ಇದು ಒಂದು ರೀತಿಯ ದ್ವಂದ್ವ ನಿಲುವು. ಯಾಕೆಂದರೆ ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸುವ ಅಗತ್ಯದ ಬಗ್ಗೆ ಫ್ರಾನ್ಸ್ನ ಜನತೆಗೆ ಹೆಚ್ಚಿನ ಅರಿವು ಇದೆ. ಹೆಚ್ಚು ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂಬ ಧೋರಣೆ ಜನರಲ್ಲಿದೆ. ಅಲ್ಲದೆ ಕೊರೋನ ಸೋಂಕು ಮತ್ತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಜನತೆಯನ್ನು ಈ ನಿಯಮ ಗೊಂದಲಕ್ಕೆ ಒಳಗಾಗಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News