ಕೊಪ್ಪ: ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬಂದ ವಿದ್ಯಾರ್ಥಿಗಳು
ಚಿಕ್ಕಮಗಳೂರು, ಜ.3: ಮುಸ್ಲಿಮ್ ವಿದ್ಯಾರ್ಥಿನಿಯರು ಕಾಲೇಜಿಗೆ ಸ್ಕಾರ್ಫ್ ಧರಿಸಿ ಬರುವುದನ್ನು ಆಕ್ಷೇಪಿಸಿ ಕೆಲವು ವಿದ್ಯಾರ್ಥಿಗಳು
ಕೇಸರಿ ಶಾಲು ಹಾಕಿಕೊಂಡು ಕಾಲೇಜಿಗೆ ಬಂದ ಘಟನೆ ಕೊಪ್ಪ ತಾಲೂಕಿನ ಬಾಳಗಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದಿದೆ.
ಈ ಕಾಲೇಜಿನಲ್ಲಿ ಮೂರು ವರ್ಷಗಳ ಹಿಂದೆಯೂ ಇದೇರೀತಿ ಕೆಲವು ವಿದ್ಯಾರ್ಥಿಗಳು ವಿನಾ ಕಾರಣ ವಿವಾದ ಸೃಷ್ಟಿಸಿದ್ದರು. ಬಳಿಕ ವಿದ್ಯಾರ್ಥಿಗಳ ಪೋಷಕರು, ಪ್ರಾಂಶುಪಾಲರ ವಿವಾದವನ್ನು ತಿಳಿಗೊಳಿಸಿದ್ದರು.
ಇದೀಗ ಮತ್ತೆ ಕಾಲೇಜಿನಲ್ಲಿ ಸ್ಕಾರ್ಫ್ ಹೆಸರಿನಲ್ಲಿ ವಿವಾದ ಸೃಷ್ಟಿಸಲು ಕೆಲವು ವಿದ್ಯಾರ್ಥಿಗಳು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಮಾಹಿತಿ ತಿಳಿದ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಶಾಲೆಗೆ ಭೇಟಿ ನೀಡಿ, ರಾಜ್ಯ ಸರಕಾರ ಕಾಲೇಜು ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಯಾವ ಆದೇಶ ಹೊರಡಿಸಿದೆಯೋ ಅದರಂತೆ ವಿದ್ಯಾರ್ಥಿಗಳು ನಿಯಮಗಳನ್ನು ಪಾಲಿಸಬೇಕು. ಒಂದು ಧರ್ಮದವರನ್ನು ಗುರಿಯಾಗಿಸಿಕೊಂಡು ಕಾಲೇಜಿನ ಶೈಕ್ಷಣಿಕ ವಾತಾವರಣದಲ್ಲಿ ಗೊಂದಲ ಮೂಡಿಸಬಾರದು. ಕಾಲೇಜು ಮುಖ್ಯಸ್ಥರು ಸರಕಾರದ ಆದೇಶದಂತೆ ಕಾಲೇಜಿನಲ್ಲಿ ನಿಯಮಗಳನ್ನು ಪಾಲಿಸಬೇಕು. ಗೊಂದಲ ಸೃಷ್ಟಿಸುವ ವಿದ್ಯಾರ್ಥಿಗಳ ಪೋಷಕರನ್ನು ಕರೆಸಿ ಸಭೆ ನಡೆಸುವಂತೆ ಸೂಚಿಸಿದರು.
ಈ ಹಿನ್ನೆಲೆಯಲ್ಲಿ ಕಾಲೇಜು ಪ್ರಾಂಶುಪಾಲ ಅನಂತ್ ಅವರು, ಸರಕಾರಿ ನಿಯಮದಂತೆಯೇ ಎಲ್ಲ ಕಾಲೇಜು ವಿದ್ಯಾರ್ಥಿಗಳು ಸಮವಸ್ತ್ರದೊಂದಿಗೆ ಕಾಲೇಜಿಗೆ ಬರಬೇಕು. ಸರಕಾರದ ಆದೇಶವನ್ನು ತಪ್ಪದೇ ಪಾಲಿಸಬೇಕು. ಸರಕಾರದ ಆದೇಶವನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ. ಎಲ್ಲ ವಿದ್ಯಾರ್ಥಿಗಳು ನಿಯಮಗಳಂತೆಯೇ ನಡೆದುಕೊಳ್ಳಬೇಕೆಂದು ಸೂಚನೆ ನೀಡಿದರೆಂದು ತಿಳಿದು ಬಂದಿದ್ದು, ಆ ಬಳಿಕ ಸ್ಕಾರ್ಫ್-ಕೇಸರಿ ಶಾಲು ವಿವಾದ ತಹಬದಿಗೆ ಬಂದಿದೆ ಎಂದು ತಿಳಿದು ಬಂದಿದೆ.