×
Ad

ರಾಮನಗರ: ಸಿಎಂ ಎದುರಲ್ಲೇ ಜಗಳಕ್ಕೆ ನಿಂತ ಸಚಿವ ಅಶ್ವತ್ಥನಾರಾಯಣ- ಸಂಸದ ಡಿಕೆ ಸುರೇಶ್!

Update: 2022-01-03 13:30 IST

ರಾಮನಗರ, ಜ. 3: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲೇ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಪರಸ್ಪರ ಏಕವಚನದಲ್ಲೇ ವಾಗ್ವಾದ ನಡೆಸಿ, ಆರೋಪ-ಪ್ರತ್ಯಾರೋಪ ಮಾಡಿಕೊಂಡು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ಘಟನೆ ನಡೆದಿದೆ.

ಸೋಮವಾರ ರಾಮನಗರ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ಮುಂಭಾಗ ಸಂವಿಧಾನ ಶಿಲ್ಪಿ ಡಾ.ಬಿ. ಆರ್.ಅಂಬೇಡ್ಕರ್, ನಾಡಪ್ರಭು ಕೆಂಪೇಗೌಡ ಪ್ರತಿಮೆಗಳ ಅನಾವರಣ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮದ ವೇದಿಕೆಯಲ್ಲಿ ಉಭಯ ಮುಖಂಡರು ಪರಸ್ಪರ ತೋಳೇರಿಸಿ, ಎದೆಯುಬ್ಬಿಸಿ ಹೊಡೆದಾಟಕ್ಕೆ ಮುಂದಾದ ಪ್ರಸಂಗವು ಜರುಗಿದೆ.

ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ಸಂಸದರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಸಂಸದ ಡಿ.ಕೆ.ಸುರೇಶ್, ಪರಿಷತ್ ಸದಸ್ಯ ಎಸ್.ರವಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಿಲ್ಲಾಧಿಕಾರಿಯನ್ನು ಪ್ರಶ್ನಿಸಿದ್ದಾರೆ. ಅಲ್ಲದೆ, ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಅಶ್ವತ್ಥನಾರಾಯಣ ಮಾತನಾಡುತ್ತಿದ್ದ ವೇಳೆ ಆರೆಸೆಸ್ಸ್, ಬಿಜೆಪಿ ಎಂದು ಪ್ರಸ್ತಾಪಿಸಿದ್ದು, ಇದಕ್ಕೆ ಆಕ್ಷೇಪಿಸಿದ ಸುರೇಶ್, ಅಶ್ವತ್ಥನಾರಾಯಣ ಅವರತ್ತ ಧಾವಿಸಿದರು.

ಇದರಿಂದ ಕೆರಳಿದ ಅಶ್ವತ್ಥ ನಾರಾಯಣ ‘ಏನು' ಎಂದು ಪ್ರಶ್ನಿಸಿದರು. ಇಬ್ಬರು ಪರಸ್ಪರ ಏರಿದ ಧ್ವನಿಯಲ್ಲಿ ಸಿಎಂ ಸಮ್ಮುಖದಲ್ಲೇ ಕೈ ಕೈ ಮಿಲಾಯಿಸಲು ಮುಂದಾದರು. ಈ ವೇಳೆ ವೇದಿಕೆಯಲ್ಲಿದ್ದ ಪರಿಷತ್ ಸದಸ್ಯ ಎಸ್.ರವಿ, ಅಶ್ವತ್ಥನಾರಾಯಣ ಬಳಿ ಇದ್ದ ಮೈಕ್ ಕಸಿದುಕೊಂಡು ಮಾತನಾಡಲು ಮುಂದಾಗಿದ್ದರಿಂದ ವೇದಿಕೆಯಲ್ಲಿ ಗೊಂದಲ ಸೃಷ್ಟಿಯಾಯಿತು.

ವೇದಿಕೆಯ ಕೆಳಗಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪರಸ್ಪರ ಪರ-ವಿರೋಧ ಧಿಕ್ಕಾರದ ಘೋಷಣೆ ಕೂಗಿದ್ದರಿಂದ ಇಡೀ ಕಾರ್ಯಕ್ರಮ ಗೊಂದಲದ ಗೂಡಾಯಿತು. ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ಕೂಡಲೇ ಮಧ್ಯಪ್ರವೇಶಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿ ತಿಳಿಗೊಳಿಸಲು ಮುಂದಾದರು. ಆ ಬಳಿಕ ಮುಖ್ಯಮಂತ್ರಿ ಬೊಮ್ಮಾಯಿ ಮಧ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದರು.

‘ನಮ್ಮ ನಮ್ಮ ರಾಜಕೀಯ ಇದ್ದದ್ದೆ. ಆದರೆ, ನಾವು ಜನಪರವಾಗಿ ಕೆಲಸ ಮಾಡಬೇಕೆ ಹೊರತು ಭಿನ್ನಾಭಿಪ್ರಾಯವನ್ನೇ ದೊಡ್ಡದು ಮಾಡಬಾರದು. ಇಲ್ಲಿ ಆದ ಘಟನೆಯನ್ನು ಮರೆತು ಎಲ್ಲರೂ ಒಂದೇ ಮನಸ್ಸಿನಿಂದ ರಾಮನಗರ ಜಿಲ್ಲೆಯ ಅಭಿವೃದ್ದಿ ದೃಷ್ಟಿಯಿಂದ ಮುಂದೆ ಸಾಗೋಣ' ಎಂದು ಬಸವರಾಜ ಬೊಮ್ಮಾಯಿ, ಇಬ್ಬರಿಗೂ ಸಲಹೆ ನೀಡಿದರು.

ಗಂಡಸ್ತನ ತೋರಿಸಿ: ಕಾಂಗ್ರೆಸ್‍ನವರು ಅಡ್ಡಿಪಡಿಸಿದ್ದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಸಚಿವ ಅಶ್ವತ್ಥನಾರಾಯಣ, ‘ಇವತ್ತಿನ ಕಾರ್ಯಕ್ರಮದಲ್ಲಿ ಏನು ತಪ್ಪಾಗಿದೆ ಎಂದು ನಾಲ್ಕು ಜನರನ್ನು ಸೇರಿಸಿ ಘೋಷಣೆ ಕೂಗುತ್ತೀರಿ. ನಾನೇನು ಯಾರ ಜಮೀನಿಗೂ ಕೈ ಹಾಕಿಲ್ಲ. ಯಾವನೋ ಅವನು ಗಂಡಸು ಅನ್ನೋನು. ಅಭಿವೃದ್ಧಿ ವಿಚಾರದಲ್ಲಿ ಗಂಡಸ್ತನ ತೋರಿಸಬೇಕು' ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಮನಗರ ಜಿಲ್ಲೆ ಅಭಿವೃದ್ಧಿಯನ್ನು ಯಾರೂ ಮಾಡಿಲ್ಲ. ಯಾಕೆ ಕೂಗಾಡ್ತೀರಾ? ಯಾವಾನೋ ಅವನು ಗಂಡಸು? ನಮಗೆ ಅಧಿಕಾರ ಬೇಕಿಲ್ಲ. ಜಿಲ್ಲೆಗೆ ವಂಚನೆ ಮಾಡುವವರು ನಾವಲ್ಲ. ನಾವು ಬೇರೆಯವರ ಆಸ್ತಿಗೆ ಕೈ ಹಾಕಿಲ್ಲ' ಎನ್ನುತ್ತಿದ್ದಂತೆಯೇ ಗರಂ ಆದ ಸಂಸದ ಡಿ.ಕೆ.ಸುರೇಶ್, ‘ಏನ್ ಅಭಿವೃದ್ಧಿ ಮಾಡಿದ್ದೀಯಾ?' ಎಂದು ಪ್ರಶ್ನಿಸಿದರು. ಅಲ್ಲದೆ ವೇದಿಕೆಯಲ್ಲೇ ಧರಣಿಗೆ ಕುಳಿತ ಸಂಸದ ಸುರೇಶ್ ಮತ್ತು ಪರಿಷತ್ ಸದಸ್ಯ ರವಿ, ‘ಏ ಗಂಡಸ್ತನ ತೋರಿಸಲಿ ಅವನು' ಎಂದು ಕೂಗಾಡಿದರು.

ಈ ಮಧ್ಯೆ ಭಾಷಣ ಆರಂಭಿಸಿದ ಸಿಎಂ ಬಸವರಾಜ ಬೊಮ್ಮಾಯಿ, ‘ನಾನೇನು ಮಾಡ್ದೆ ಹೇಳಿ? ನಾನು ಅಭಿವೃದ್ಧಿ ಮಾಡಲು ರಾಮನಗರಕ್ಕೆ ಆಗಮಿಸಿದ್ದೇನೆ. ದಯವಿಟ್ಟು ಯಾರೂ ಗಲಾಟೆ ಮಾಡಬೇಡಿ. ಎಲ್ಲರನ್ನು ಗೌರವದಿಂದ ಕಾಣಬೇಕು. ನಮ್ಮ ರಾಜಕೀಯ ಏನೇ ಇದ್ದರೂ ಜನರ ಅಭಿವೃದ್ಧಿ ನಿಟ್ಟಿನಲ್ಲಿ ನಾವೆಲ್ಲರೂ ಆಲೋಚನೆ ಮಾಡಬೇಕು' ಎಂದು ಸಲಹೆ ನೀಡಿದರು.

ಗೂಂಡಾಗಳಂತೆ ವರ್ತಿಸಿದ್ದು ಅಕ್ಷಮ್ಯ

‘ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ಕೊಟ್ಟ ರಾಮನಗರ ಅಭಿವೃದ್ಧಿ ವಿಚಾರವಾಗಿ ಹೆಸರು ಗಳಿಸಬೇಕೇ ಹೊರತು ಗೂಂಡಾಗಿರಿಯಿಂದಾಗಿ ಅಲ್ಲ. ಇಂತಹ ಅನಾಗರಿಕ ವರ್ತನೆ ತೋರುವುದು ರಾಜ್ಯದಲ್ಲಿ ಕೇವಲ ಒಂದು ಪಕ್ಷದಿಂದ ಮಾತ್ರ ಸಾಧ್ಯ. ನಿಮ್ಮ ಹೋರಾಟ ಅಭಿವೃದ್ಧಿ ವಿಚಾರವಾಗಿರಲಿ, ಅಧಿಕಾರದ ವಿಚಾರವಾಗಿ ಅಲ್ಲ. ರಾಮನಗರದಲ್ಲಿ ನಮ್ಮ ಸರಕಾರದ ಅಭಿವೃದ್ಧಿ ಕಾರ್ಯ ನೋಡಿ ಸಹಿಸಲಾಗದ ಕಾಂಗ್ರೆಸ್ ನಾಯಕರು, ಬೆಂಬಲಿಗರು ಮುಖ್ಯಮಂತ್ರಿ ಆಗಮಿಸಿದ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಮರೆತು ಗೂಂಡಾಗಳಂತೆ ವರ್ತಿಸಿದ್ದು ಅಕ್ಷಮ್ಯ. ನಾಡಗೀತೆ ಹಾಡುವಾಗ ಗಲಾಟೆ ಮಾಡುವುದು ಮತ್ತು ನಾಡ ಪ್ರಭುಗಳ ಪ್ರತಿಮೆ ಅನಾವರಣ ಮಾಡುವಾಗ ದುರ್ವರ್ತನೆ ತೋರುವುದು ಸರಿಯೇ?'

-ಡಾ.ಅಶ್ವತ್ಥ ನಾರಾಯಣ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ

ಇದು ಬಿಜೆಪಿಯದ್ದಲ್ಲ, ಸರಕಾರದ ಕಾರ್ಯಕ್ರಮ

‘ರಾಮನಗರ ಜಿಲ್ಲೆಯ ಜನತೆಗೆ ಅವಮಾನ ಆಗುವುದನ್ನು ಸಹಿಸಲು ಸಾಧ್ಯವಿಲ್ಲ. ಸಚಿವ ಅಶ್ವತ್ಥ ನಾರಾಯಣ ಸವಾಲು ಹಾಕಿದರೆ ನಾವು ಸುಮ್ಮನೆ ಕೂರಲು ಆಗುವುದಿಲ್ಲ. ಸಿಎಂ ಸಮ್ಮುಖದಲ್ಲೇ ವೇದಿಕೆಯಲ್ಲಿ ಉತ್ತರ ನೀಡಿದ್ದೇನೆ. ಇದು ಬಿಜೆಪಿ ಕಾರ್ಯಕ್ರಮವಲ್ಲ, ಸರಕಾರದ ಕಾರ್ಯಕ್ರಮ. ಬಸವರಾಜ ಬೊಮ್ಮಾಯಿಯವರು ರಾಜ್ಯಕ್ಕೆ ಮುಖ್ಯಮಂತ್ರಿ. ಅಂಬೇಡ್ಕರ್ ಪುತ್ಥಳಿ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಹಾಗೂ ಜಿ.ಪಂ.ಅನುದಾನ ನೀಡಿದೆ. ಅದನ್ನು ಬಿಜೆಪಿ ತಮ್ಮ ಸಾಧನೆ ಎಂದು ಹೇಳುವುದು ನಿಜಕ್ಕೂ ಅರ್ಥಹೀನ. ಹೀಗಾಗಿ ನಾವು ಪ್ರಶ್ನಿಸಿದ್ದೇವೆ, ಗೂಂಡಾಗಿರಿ ವರ್ತನೆ ಮಾಡುವಂತಹ ಅಗತ್ಯ ನಮಗಿಲ್ಲ'

-ಡಿ.ಕೆ.ಸುರೇಶ್ ಸಂಸದ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News