ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡಿನವರನ್ನು ಎತ್ತಿ ಕಟ್ಟುತ್ತಿರುವುದು ಬಿಜೆಪಿ: ಸಿದ್ದರಾಮಯ್ಯ
ಮೈಸೂರು, ಜ.1: ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡಿನವರನ್ನು ಎತ್ತಿ ಕಟ್ಟುತ್ತಿರುವುದು ಬಿಜೆಪಿಯವರೇ, ಅಣ್ಣಾಮಲೈ ತಮಿಳುನಾಡಿನಲ್ಲಿ ಪ್ರತಿಭಟನೆ ಮಾಡಲು ಯಾರು ಕಾರಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಬಿಜೆಪಿ ಅಸ್ತಿತ್ವ ಕಂಡುಕೊಳ್ಳಲು ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿದೆ. ಅಲ್ಲಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಮೂಲಕ ಈ ಯೋಜನೆಗೆ ವಿರೋಧ ಮಾಡಿಸುತ್ತಿರುವವರೆ ಬಿಜೆಪಿಯವರು, ಇನ್ನು ಸಿ.ಟಿ.ರವಿ ಹಂಚಿಕೊಂಡು ಬಾಳಬೇಕು ಎಂದು ಹೇಳುತ್ತಾರೆ. ಇದರರ್ಥ ಮೇಕೆದಾಟು ಯೋಜನೆ ಜಾರಿಯಾಗುವುದು ಇಷ್ಟ ಇಲ್ಲ ಎಂದರ್ಥ ಎಂದು ಕಿಡಿಕಾರಿದರು.
ಮೇಕೆದಾಟು ಯೋಜನೆ 1968 ರಲ್ಲಿ ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದಾಗಲೇ ಚರ್ಚೆಗೆ ಬಂದಿತ್ತು, ನಂತರ ವಿರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದಾಗಲೂ ಮುಂಚೂಣಿಗೆ ಬಂದಿತ್ತು, ಕಾವೇರಿ ನೀರು ಹಂಚಿಕೆ ವಿಚಾರದ ವಿವಾದ ಕಾರಣ ಇದು ಸ್ಥಗಿತಗೊಂಡಿತ್ತು, ಅದು ಬಗೆಹರಿದ ಮೇಲೆ ಈ ವಿಚಾರವನ್ನು 2013 ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಕೇಂದ್ರ ಸರಕಾರಕ್ಕೆ ಕಳುಹಿಸಿ ಪರಿಸರ ಇಲಾಖೆ ಅನುಮತಿ ಕೋರಲಾಗಿತ್ತು. ನಂತರ 2017 ರಲ್ಲಿ 5600 ಕೋಟಿ ರೂ.ಗೆ ಡಿಪಿಆರ್ ಮಾಡಲಾಗಿತ್ತು ಎಂದು ತಿಳಿಸಿದರು.
ಗೋವಿಂದ ಕಾರಜೋಳ ವಿರುದ್ಧ ವಾಗ್ದಾಳಿ: ಮೇಕೆದಾಟು ಯೋಜನೆಗೆ ಸಂಬಂಧಿಸದಂತೆ ಕಾಂಗ್ರೆಸ್ ನವರ ಸ್ಪೋಟಕ ಮಾಹಿತಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಇವರಿಗೆ ನಿಜವಾಗಲೂ ನೈತಿಕತೆ ಇದ್ದರೆ ಯಾಕೆ ಕಾಯಬೇಕು, ಯಾವ ಸ್ಪೋಟಕ ಮಾಹಿತಿ ಎಂಬುದನ್ನು ಅಂದೆ ಬಿಡುಗಡೆ ಮಾಡಬಹುದಿತ್ತಲ್ಲವೇ ಎಂದು ನೀರಾವರಿ ಸಚಿವ ಗೋವಿಂದ ಕಾರಜೋಳ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿಯವರು ಮತ್ತು ಅವರ ಸಂಪುಟದ ಸಚಿವರುಗಳು ಬರಿ ಸುಳ್ಳುಗಳನ್ನೇ ಹೇಳುತ್ತಾರೆ ಎಂದು ಹರಿಹಾಯ್ದರು.
ನನ್ನ ಡಿ.ಕೆ.ಶಿವಕುಮಾರ್ ನಡುವೆ ಯಾವುದೇ ಕಚ್ಚಾಟ ಇಲ್ಲ:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ನನ್ನ ನಡುವೆ ಯಾವುದೇ ಕಚ್ಚಾಟ ಇಲ್ಲ, ಆದರೆ ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ರೀತಿ ನಮ್ಮ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿಯವರಿಗೆ ಟಾಂಗ್ ನೀಡಿದರು.
ನಾನು ಡಿ.ಕೆ.ಶಿವಕುಮಾರ್ ಒಟ್ಟಿಗೆ ಇದ್ದೇವೆ ಎಲ್ಲಾ ಕಾರ್ಯಕ್ರಮಗಳನ್ನು ಜೊತೆಯಲ್ಲೇ ಮಾಡುತ್ತಿದ್ದೇವೆ. ಹಾಗಿದ್ದ ಮೇಲೆ ಹೇಗೆ ನಮ್ಮಿಬ್ಬರ ನಡುವೆ ಬಿನ್ನಾಭಿಪ್ರಾಯದೆ? ಸುಮ್ಮನೆ ಬಿಜೆಪಿಯವರು ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇವರ ಮಾತುಗಳಿಗೆ ಹೆಚ್ಚು ಮಾನ್ಯತೆ ಕೊಡುವ ಅಗತ್ಯವಿಲ್ಲ ಎಂದು ಹೇಳುದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಉಪಸ್ಥಿತರಿದ್ದರು.