‘ಸುಳ್ಳು ನಮ್ಮಲ್ಲಿಲ್ಲವಯ್ಯ, ಸುಳ್ಳೇ ನಮ್ಮನೆ ದೇವರು': ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ ಆಕ್ರೋಶ

Update: 2022-01-03 12:58 GMT

ಬೆಂಗಳೂರು, ಜ. 3: ‘ನಿಮ್ಮ ಸರಕಾರವಿದ್ದಾಗ ಚಿದಂಬರಂ ಮತ್ತು ಸೋನಿಯಾಗಾಂಧಿ ಹೆದರಿಕೆಯಿಂದ ಸಿದ್ದರಾಮಯ್ಯನವರು ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಲಿಲ್ಲ ಎಂದೆನಿಸುತ್ತದೆ. ಈಗ ನೀವು ಪಾದಯಾತ್ರೆ ಮಾಡುವ ಮೂಲಕ ಜನರನ್ನು ದಿಕ್ಕುತಪ್ಪಿಸಿ ಕನ್ನಡಿಗರಿಗೂ, ತಮಿಳುನಾಡಿನ ಜನರ ಮನಸ್ಸಿನಲ್ಲಿ ವೈಷಮ್ಯಕ್ಕೆ ಕಾರಣವಾಗುವ ಕಾರ್ಯಕ್ಕೆ ಮುಂದಾಗಿರುವು ನಾಚಿಕೆಗೇಡಿನ ವಿಷಯ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸಕ್ರಿಯ ರಾಜಕೀಯಕ್ಕೆ ಬಂದು ಇನ್ನೂ ಒಂದು ವರ್ಷವಾಗಿಲ್ಲ. ನಾನೂ ಮೇಕೆದಾಟು ಯೋಜನೆ ಸೇರಿದಂತೆ ಯಾವುದೇ ಕುಡಿಯುವ ನೀರಿನ ಯೋಜನೆ ಅನುಷ್ಠಾನದ ವಿಚಾರವಾಗಿ ರಾಜಕೀಯ ಮಾಡಬಾರದು ಎಂದು ಕರ್ನಾಟಕದಲ್ಲಿ ಮತ್ತು ತಮಿಳುನಾಡಿನಲ್ಲೂ ಹೇಳಿದ್ದೇನೆ. ನಾವು ನೀರಿನ ವಿಷಯದಲ್ಲಿ ನಿಮ್ಮ ರೀತಿ ರಾಜಕೀಯ ಮಾಡುತ್ತಿಲ್ಲ' ಎಂದು ಸ್ಪಷ್ಟಣೆ ನೀಡಿದ್ದಾರೆ.

‘ಒಂದು ಯೋಜನೆಗೆ ಇರುವ ಅಡೆತಡೆಗಳನ್ನು ನಿವಾರಿಸಲು ಮತ್ತು ಯೋಜನೆ ಪೂರ್ಣಗೊಳ್ಳಲು 54 ವರ್ಷ ಬೇಕೆ? ಸುಳ್ಳಿಗೂ ಒಂದು ಮಿತಿ ಇರಬೇಕು. ಇದೆಲ್ಲಾ ಚುನಾವಣೆ ಗಿಮಿಕ್ ಎಂದು ಜನರಿಗೂ ಗೊತ್ತು. ನಿಮ್ಮ ಕಪಟ ರಾಜಕೀಯ ನಾಟಕ ಜನರಿಗೆ ಅರ್ಥವಾಗುತ್ತಿದೆ. ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡದೇ ಸತ್ಯ ಹೇಳಿ' ಎಂದು ರವಿ ಆಗ್ರಹಿಸಿದ್ದಾರೆ.

‘ನಿಮ್ಮ ಪಕ್ಷದ ಹಿರಿಯ ನಾಯಕ ಪಿ.ಚಿದಂಬರಂ ಈ ನಿರ್ದಿಷ್ಟ ಯೋಜನೆಗೆ ಏಕೆ ವಿರೋಧ ಮಾಡುತ್ತಿದ್ದಾರೆ? ನಿಮ್ಮ ಪಕ್ಷ ಬೆಂಬಲದ ಡಿಎಂಕೆ ಸರಕಾರ ತಮಿಳುನಾಡಿನಲ್ಲಿ ಆಡಳಿತ ನಡೆಸುತ್ತಿದೆ. ಅವರಿಂದ ಒಂದು ಹೇಳಿಕೆ ಕೊಡಿಸಿ ಸಿದ್ದರಾಮಯ್ಯನವರೇ ಮೇಕೆದಾಟು ಯೋಜನೆಗೆ ಯಾವುದೇ ಅಡ್ಡಿ ಇಲ್ಲ ಎಂದು. ಆಗ ಕಾಂಗ್ರೆಸ್ ಬಂಡವಾಳ ಗೊತ್ತಾಗುತ್ತದೆ' ಎಂದು ಸಿ.ಟಿ.ರವಿ, ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನೀವು ಅಧಿಕಾರಕ್ಕೆ ಬರುವ ದೃಷ್ಟಿಯಿಂದ ಜನರಿಗೆ ಸುಳ್ಳುಗಳ ಸರಮಾಲೆ ಪೋಣಿಸುತ್ತಾ ಜನರನ್ನು ದಿಕ್ಕು ತಪ್ಪಿಸಲು ಪಾದಯಾತ್ರೆ ಮಾಡಲು ಹೊರಟಿದ್ದೀರಿ. ತಮಿಳುನಾಡಿನಲ್ಲಿ, ಕರ್ನಾಟಕದಲ್ಲಿ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ಸೆ ಅಧಿಕಾರದಲ್ಲಿದ್ದಾಗಲೂ ಯೋಜನೆಯ ಬಗ್ಗೆ ತುಟಿಬಿಚ್ಚದವರು, ನಿಮ್ಮ ನಾಯಕರ ಬಗ್ಗೆ ಸ್ವಲ್ಪ ಜನರಿಗೂ ತಿಳಿಸಿ ಸಿದ್ದರಾಮಯ್ಯನವರೇ?' ಎಂದು ರವಿ ಒತ್ತಾಯಿಸಿದ್ದಾರೆ.

‘ಈಗಾಗಲೇ ಕೇಂದ್ರದಲ್ಲಿನ ನಮ್ಮ ಬಿಜೆಪಿ ಸರಕಾರ ಮೇಕೆದಾಟು ಯೋಜನೆಗೆ ತಾತ್ವಿಕ ಅನುಮೋದನೆ ಕೊಟ್ಟಿರುವುದನ್ನು ಯಾಕೆ ಜನರ ಎದುರು ಹೇಳದೇ ಮರೆಮಾಚಿದಿರಿ? ಇದೇ ಅಲ್ಲವೇ ನಿಮ್ಮ ಸುಳ್ಳಿನ ರಾಜಕೀಯದ ಮೇಲಾಟ? ‘ಸುಳ್ಳು ನಮ್ಮಲ್ಲಿಲ್ಲವಯ್ಯ, ಸುಳ್ಳೇ ನಮ್ಮನೆ ದೇವರು' ಎನ್ನುವ ರಾಜಕೀಯ ಕುಟಿಲ ನೀತಿ ನಿಮ್ಮದು, ನಿಮ್ಮ ಪಕ್ಷದ್ದು ಎಂಬುದು ಸತ್ಯವಿದಿತ' ಎಂದು ಸಿ.ಟಿ.ರವಿ ಟೀಕಿಸಿದ್ದಾರೆ.

‘ಮೇಕೆದಾಟು ಯೋಜನೆ ಜಾರಿ ವಿಚಾರದಲ್ಲಿ ಕರ್ನಾಟಕದಲ್ಲಿ ರಾಜ್ಯ ಸರಕಾರದ ತೀರ್ಮಾನಕ್ಕೆ ಬದ್ಧ ಎಂದು ನಾನು ಹೇಳಿದ್ದೇನೆ. ನಿಮ್ಮದೇ ಪಕ್ಷದ ಸರಕಾರ ಕೇಂದ್ರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಯಾಕೆ ಅನುಷ್ಠಾನ ಮಾಡಲಿಲ್ಲ? ಇದಕ್ಕೆ ನೀವು ಉತ್ತರ ಕೊಡಬೇಕಲ್ಲವೇ? ಜನರಿಗೆ ತಪ್ಪು ಮಾಹಿತಿ ನೀಡಿ ಅವರ ದಿಕ್ಕು ತಪ್ಪಿಸುವುದೇ ನಿಮ್ಮ ಕಾಯಕವಾಗಿದೆ' ಎಂದು ಸಿ.ಟಿ.ರವಿ ಕಿಡಿಕಾರಿದ್ದಾರೆ.

‘ಸಿದ್ದರಾಮಯ್ಯನವರೇ, ನೀವು ಮಾತನಾಡುವಾಗ 1968ರಲ್ಲೇ ಕಾಂಗ್ರೆಸ್ ಸರಕಾರ ಮೇಕೆದಾಟು ಯೋಜನೆ ಜಾರಿಗೆ ಪ್ರಯತ್ನ ಮಾಡಿತ್ತು ಎಂದು ಹೇಳಿದ್ದೀರಿ. ಹಾಗಾದರೆ ಆಗ ಕೇಂದ್ರ ಮತ್ತು ರಾಜ್ಯದಲ್ಲಿ ಯಾವ ಸರಕಾರ ಆಡಳಿತ ನಡೆಸುತ್ತಿತ್ತು? ಆ ನಂತರವು 40 ವರ್ಷಗಳ ಕಾಲ ರಾಜ್ಯವಾಳಿದ ನಿಮ್ಮ ಕಾಂಗ್ರೆಸ್ ಪಕ್ಷ ಯಾಕೆ ಮೇಕೆದಾಟು ಯೋಜನೆ ಜಾರಿಗೊಳಿಸಲಿಲ್ಲ?' ಎಂದು ರವಿ ಪ್ರಶ್ನೆ ಮಾಡಿದ್ದಾರೆ.

‘ವಿಪಕ್ಷನಾಯಕ ಸಿದ್ದರಾಮಯ್ಯನವರು ಚಾಮರಾಜನಗರದಲ್ಲಿ ರವಿವಾರ ಮಾತನಾಡುವ ವೇಳೆ ಸುಳ್ಳುಗಳ ಸರಮಾಲೆಯನ್ನೇ ಬಿಚ್ಚಿಟ್ಟಿದ್ದಾರೆ. ಮೇಕೆದಾಟು ಯೋಜನೆಗೆ ಸಿ.ಟಿ.ರವಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆಂದು ಸಾರ್ವಜನಿಕ ಸಭೆಯಲ್ಲಿ ಸುಳ್ಳುಗಳ ಸರಮಾಲೆ ಸಿಡಿಸಿದ್ದಾರೆ. ನಾನು ಯಾವಾಗ ವಿರೋಧ ಮಾಡಿದ್ದೇನೆ ಎಂದು ಸಿದ್ದರಾಮಯ್ಯನವರು ಹೇಳಲಿ'

-ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News