×
Ad

ನೀಟ್ ಪರೀಕ್ಷೆ: ಶೇ.10ರಷ್ಟು ಮೀಸಲಾತಿ ಸಂವಿಧಾನಕ್ಕೆ ವಿರುದ್ಧ; ಡಾ.ಎಚ್.ಸಿ.ಮಹದೇವಪ್ಪ

Update: 2022-01-03 19:43 IST

ಬೆಂಗಳೂರು, ಜ. 3: ‘ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ಆರ್ಥಿಕತೆ ಆಧಾರದ ಮೇಲೆ ಶೇ.10ರಷ್ಟು ಮೀಸಲಾತಿಯನ್ನು ನೀಡಬೇಕೆಂದು ಪ್ರಸ್ತಾಪ ಮಾಡಿರುವ ಕೇಂದ್ರ ಸರಕಾರವು ಇದಕ್ಕೆ ಸಂಬಂಧಿಸಿದಂತೆ ಜ. 6ನೆ ತಾರೀಕಿನಂದು ಇದ್ದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ತ್ವರಿತಗತಿಯಲ್ಲಿ ಮಾಡುವಂತೆ ಕೇಳುತ್ತಿದೆ' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಗಮನ ಸೆಳೆದಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ವೈದ್ಯಕೀಯ ಕೋರ್ಸ್ ಪ್ರವೇಶ ಬಯಸುವ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ನೀಟ್ ಪರೀಕ್ಷೆಯಲ್ಲಿ ಆರ್ಥಿಕತೆ ಆಧಾರಿತವಾಗಿ ಮೀಸಲಾತಿ ನೀಡಲು ಹೊರಟಿರುವುದು ಸಂವಿಧಾನಾತ್ಮಕ ಕ್ರಮವಲ್ಲ. ಆರ್ಥಿಕತೆ ಆಧಾರಿತವಾದ ಮೀಸಲಾತಿಯನ್ನು ನೀಡುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬ ಸಂಗತಿಯನ್ನು ಮತ್ತೊಮ್ಮೆ ಎಲ್ಲರಿಗೂ ನೆನಪಿಸಲು ಇಚ್ಛಿಸುತ್ತೇನೆ' ಎಂದು ತಿಳಿಸಿದ್ದಾರೆ.

‘ಹಾಗೊಂದು ವೇಳೆ ಆರ್ಥಿಕವಾಗಿ ಹಿಂದುಳಿದವರಿಗೆ ಸೀಟುಗಳನ್ನು ನೀಡಬೇಕೆಂಬ ಉದ್ದೇಶವಿದ್ದರೆ ಸರಕಾರವು ಒಟ್ಟು ಇರುವ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಿ ಅದನ್ನೂ ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಹಂಚಿಕೆ ಮಾಡುವುದು ಹೆಚ್ಚು ಸೂಕ್ತ. ಎಲ್ಲದಕ್ಕಿಂತ ಮುಖ್ಯವಾಗಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಮೀಸಲಾತಿಯ ಪ್ರಸ್ತಾಪವನ್ನು ಮುಂದಿಡುತ್ತಿರುವ ಕೇಂದ್ರ ಸರಕಾರಕ್ಕೆ ‘ಮೀಸಲಾತಿಯನ್ನು ಐತಿಹಾಸಿಕವಾಗಿ ಸಾಮಾಜಿಕವಾಗಿ ಶೋಷಣೆಗೆ ಒಳಗಾದ ಸಮುದಾಯದ ಜನರಿಗೆ ನೀಡುತ್ತಾರೆ' ಎಂಬ ಸಂಗತಿ ನೆನಪಿರಲಿ' ಎಂದು ಅವರು ತಿಳಿಸಿದ್ದಾರೆ.

‘ಮೀಸಲಾತಿಯ ಮಾನದಂಡವನ್ನು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಪ್ರಸ್ತಾಪಿಸುವ ಕೇಂದ್ರ ಸರಕಾರವು ಮೀಸಲಾತಿಯ ಕುರಿತು ಸಂವಿಧಾನ ಏನು ಹೇಳುತ್ತದೆ ಎಂಬ ತಿಳಿವಳಿಕೆ ಇರಲಿ' ಎಂದು ಮಹದೇವಪ್ಪ ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News