ಅಕ್ರಮ ಸಂಬಂಧ ಬಯಲಿಗೆ ವೈದ್ಯಕೀಯ ದಾಖಲೆಗಳನ್ನು ಬಳಸುವಂತಿಲ್ಲ: ಹೈಕೋರ್ಟ್
ಬೆಂಗಳೂರು, ಜ.3: ಸಂಗಾತಿಯ ಅಕ್ರಮ ಸಂಬಂಧವನ್ನು ಆತನ ಅಥವಾ ಅವಳ ಖಾಸಗಿ ವೈದ್ಯಕೀಯ ದಾಖಲೆಗಳ ಮೂಲಕ ಸಾಬೀತುಪಡಿಸಲಾಗುವುದಿಲ್ಲ ಎಂದು ಧಾರವಾಡ ಹೈಕೋರ್ಟ್ ಆದೇಶ ನೀಡಿದೆ.
ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸಂಗಾತಿಯ ಅಕ್ರಮ ಸಂಬಂಧವನ್ನು ಖಾಸಗಿ ವೈದ್ಯಕೀಯ ದಾಖಲೆಗಳ ಮೂಲಕ ಸಾಬೀತು ಪಡಿಸಲಾಗುವುದಿಲ್ಲ. ಒಂದು ವೇಳೆ ವೈದ್ಯಕೀಯ ದಾಖಲೆಗಳನ್ನು ನೀಡಿದರೆ ವೈದ್ಯ ಹಾಗೂ ರೋಗಿಯಾಗಿ ಗೌಪ್ಯತೆಯ ಸಂಪೂರ್ಣ ಪರಿಕಲ್ಪನೆಯನ್ನು ನಾಶ ಮಾಡಿದಂತೆ ಆಗುತ್ತದೆ. ಅಲ್ಲದೆ, ವೈವಾಹಿಕ ವಿವಾದಕ್ಕೆ ವೈದ್ಯರನ್ನು ಎಳೆದು ತಂದಂತೆ ಆಗುತ್ತದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣವೇನು: ಪತ್ನಿಯ ಗರ್ಭಪಾತಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಾಜರು ಪಡಿಸುವಂತೆ ಮತ್ತು ವೈದ್ಯರಿಂದ ಕೊಡಿಸುವಂತೆ ಕೋರಿ ಪತಿಯೊಬ್ಬ ಕೋರ್ಟ್ ಮೆಟ್ಟಿಲೇರಿದ್ದ. ಇದಕ್ಕೆ ಪ್ರತಿಯಾಗಿ ಪತ್ನಿ ಒಬ್ಬ ವ್ಯಕ್ತಿಗೆ ಸೇರಿದ ವೈದ್ಯಕೀಯ ದಾಖಲೆಗಳು ಸಂಪೂರ್ಣ ಖಾಸಗಿಯಾಗಿ ಇರುತ್ತವೆ. ಅಲ್ಲದೆ, ಯಾವುದೇ ವ್ಯಕ್ತಿಯಿಂದ ಅದನ್ನು ಪಡೆಯಲು ಸಾಧ್ಯವಿಲ್ಲ ಎಂದು ಮರು ಅರ್ಜಿ ಸಲ್ಲಿಸಿದ್ದರು.
ಅಲ್ಲದೇ, ಪತಿ ತನ್ನ ಪತ್ನಿ ಅಕ್ರಮವಾಗಿ ಸಂಬಂಧವಿಟ್ಟುಕೊಂಡು ಜೀವನ ನಡೆಸಿ ಗರ್ಭಪಾತ ಮಾಡಿಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದ. ವಕೀಲರ ವಾದ ಆಲಿಸಿದ ನ್ಯಾಯಪೀಠ, ಒಬ್ಬ ವ್ಯಕ್ತಿಗೆ ಸೇರಿದ ವೈದ್ಯಕೀಯ ದಾಖಲೆಗಳು ಸಂಪೂರ್ಣ ಖಾಸಗಿಯಾಗಿ ಇರುತ್ತವೆ. ಅಲ್ಲದೆ, ಯಾವುದೇ ವ್ಯಕ್ತಿಯಿಂದ ಅದನ್ನು ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಪೀಠವು ಹೇಳಿದೆ.
ಕಾರ್ಯನಿರ್ವಹಣೆ ಮಾಡುವ ವೈದ್ಯರಿಗೆ ದಾಖಲೆಗಳನ್ನು ನೀಡುವಂತೆ ನಿರ್ದೇಶಿಸುವ ಅಧಿಕಾರವನ್ನು ಕೇವಲ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಸೂಚನೆ ನೀಡಬೇಕು. ಬಲವಾದ ಕಾರಣಗಳು ಮತ್ತು ಸಾರ್ವಜನಿಕ ಹಿತಾಸಕ್ತಿ ಇದ್ದಾಗ ಮಾತ್ರ ವೈದ್ಯಕೀಯ ದಾಖಲೆಗಳನ್ನು ಬಹಿರಂಗಪಡಿಸುವ ಅಧಿಕಾರವಿರುತ್ತದೆ. ಹೊರತುಪಡಿಸಿ ಬೇರೆ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯ ವೈದ್ಯಕೀಯ ದಾಖಲೆಗಳ ಖಾಸಗಿಯಾಗಿಯೇ ಇರುತ್ತವೆ. ಅದು ಸಾರ್ವಜನಿಕ ಬಳಕೆಗೆ ಬರುವುದಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಇನ್ನು ಇದೇ ಪ್ರಕರಣದಲ್ಲಿ ಕಳೆದ ಎರಡು ವರ್ಷಗಳಿಂದ ಹೆಂಡತಿ ನನ್ನ ಜೊತೆ ಸಂಸಾರ ನಡೆಸಿಲ್ಲ. ಆದರೂ ಆಕೆ ಗರ್ಭಿಣಿಯಾಗಿ ಗರ್ಭಪಾತ ಮಾಡಿಸಿಕೊಂಡಿದ್ದಾಳೆ. ಅಣ್ಣ ಹಾಗೂ ನನ್ನ ಕುಟುಂಬದ ಜೊತೆ ಕ್ರೌರ್ಯದಿಂದ ನಡೆದುಕೊಂಡು ಈಗ ವಿಚ್ಛೇದನದ ಪ್ರಕರಣ ದಾಖಲಿಸುವ ಮೂಲಕ ಜೀವನಾಂಶ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದ. ನ್ಯಾಯಪೀಠ, ಪತ್ನಿ ಅಕ್ರಮ ಸಂಬಂಧವಿಟ್ಟುಕೊಂಡು, ಕ್ರೌರ್ಯ ಮೆರೆದಿರುವುದು ನಿಜವಾಗಿದ್ದರೆ ಈ ಆರೋಪವನ್ನು ಕಾನೂನಿಗೆ ಗೊತ್ತಿರುವ ರೀತಿಯಲ್ಲಿ ಸಾಕ್ಷಾಧಾರಗಳ ಜೊತೆಗೆ ಸಾಬೀತುಪಡಿಸಬೇಕು. ಈ ಆರೋಪವನ್ನು ಸಮನ್ಸ್ ಮೂಲಕ ಸಾಬೀತುಪಡಿಸಲು ಸಾಧ್ಯವಿಲ್ಲ. ಖಾಸಗಿ ವೈದ್ಯಕೀಯ ದಾಖಲೆಗಳನ್ನ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ.