×
Ad

ನಂಜನಗೂಡು: ವಾಮಾಚಾರಕ್ಕೆ ಬಾಲಕ ಬಲಿ, ಸ್ನೇಹಿತರಿಂದಲೇ ಕೃತ್ಯ; ಪೋಷಕರ ಆರೋಪ

Update: 2022-01-03 21:11 IST
ಮೃತ ಬಾಲಕ ಮಹೇಶ್

ಮೈಸೂರು,ಜ.3: ಧನುರ್ ಅಮಾವಾಸ್ಯೆ ದಿನದಂದು ವಾಮಾಚಾರಕ್ಕೆ ಅಪ್ರಾಪ್ತ ಬಾಲಕನೊಬ್ಬನನ್ನು ಬಲಿಕೊಟ್ಟಿದ್ದಾರೆನ್ನಲಾದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಹೆಮ್ಮರಗಾಲದದಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಹೆಮ್ಮರಗಾಲದ ಸಿದ್ದರಾಜು ಎಂಬುವವರ ಪುತ್ರ ಮಹೇಶ್ ಅಲಿಯಾಸ್ ಮನು(16) ಎಸೆಸೆಲ್ಸಿ ಓದುತ್ತಿದ್ದ ಬಾಲಕನನ್ನು ಆತನ ಸ್ನೇಹಿತರೇ ವಾಮಾಚಾರ ನಡೆಸಿ ಸಾಯಿಸಿದ್ದಾರೆ ಎಂದು ಮೃತ ಬಾಲಕನ ಪೋಷಕರು ಆರೋಪಿಸಿದ್ದಾರೆ.

ಧನುರ್ ಮಾಸದ ಅಮಾವಾಸ್ಯೆ ಹಿನ್ನಲೆಯಲ್ಲಿ ರವಿವಾರ ಮಹೇಶ್ ಮತ್ತು ಆತನ ಮೂವರು ಸ್ನೇಹಿತರು ಹೆಮ್ಮರಗಾಲ ಗ್ರಾಮದಿಂದ ನಾಲ್ಕು ಕೀ.ಮೀ. ದೂರದಲ್ಲಿರುವ ಹಳೇಪುರ ಕೆರೆ ಬಳಿಗೆ  ಕರೆದೊಯ್ದಿದ್ದಾರೆ. ಈ ವೇಳೆ ನಾಲ್ವರು ಬಾಲಕನ ಪೈಕಿ ಓರ್ವ ತನ್ನ ತಾತ ವಾಮಾಚಾರ ಮಾಡುವುದನ್ನು ಕಲಿತಿದ್ದು, ಅಮಾವಾಸ್ಯೆ ದಿನ ನರ ಬಲಿಕೊಟ್ಟರೆ ನಾವು ಬಯಸಿದ್ದೆಲ್ಲ ಈಡೇರುತ್ತದೆ ಎಂದು ಈ ಕೆಲಸ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ಕೆರೆಯ ಬಳಿ ವಾಮಾಚಾರ ಮಾಡಿರುವ ಸುಳಿವು ಸಿಕ್ಕಿದ್ದು, ಗೊಂಬೆ ಮಾಡಿ ಮೃತ ಬಾಲಕ ಮಹೇಶ್ ಹೆಸರನ್ನು ಬರೆದು ಆತನನ್ನು ಪಕ್ಕದಲ್ಲಿ ಕೂರಿಸಿ ಪೂಜೆ ಮಾಡಿದ್ದಾರೆ. ನಂತರ ಮಹೇಶ್‍ನನ್ನು ಕೆರೆಗೆ ತಳ್ಳಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕೃತ್ಯ ಎಸಗಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. 

ಮಹೇಶ್ ಕೆರೆಗೆ ಬಿದ್ದಿರುವ ಬಗ್ಗೆ ಸ್ನೇಹಿತನೊಬ್ಬ ಗ್ರಾಮದ ಹಿರಿಯರಿಗೆ ಮಾಹಿತಿ ನೀಡಿದ್ದಾನೆ. ನಂತರ ಗ್ರಾಮದ ಜನ ಕೆರೆಯಲ್ಲಿ ಶೋಧನೆ ಮಾಡಿದಾಗ ಮಹೇಶ್ ಮೃತದೇಹ ಪತ್ತೆಯಾಗಿದೆ. ಅಲ್ಲದೆ ಕೆರೆ ಬಳಿ ವಾಮಾಚಾರ ಪೂಜೆ ಮಾಡಿರುವುದ ಕಂಡು ಬಂದಿದೆ. ಗೊಂಬೆ, ಕೋಳಿ, ಮಡಿಕೆ, ನಿಂಬೆಹಣ್ಣು ಸೇರಿದಂತೆ ಇನ್ನಿತರ ಪದಾರ್ಥಗಳು ದೊರಕಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. 

ಮೃತ ಬಾಲಕ ಮಹೇಶ್ ನನ್ನು ಓದಿಸುವ ಸಲುವಾಗಿ ಅವನ  ತಂದೆ ಮತ್ತು ತಾಯಿ ಕೊಡಗಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. 

ಮತ್ತೊಂದು ಮೂಲದ ಪ್ರಕಾರ ಮೃತ ಬಾಲಕ ಮಹೇಶ್ ಸೇರಿದಂತೆ ಮೂವರು ಬಾಲಕರು ರವಿವಾರ ಮಧ್ಯಾಹ್ನ ಕಾರನ್ನು ತೊಳೆಯಲು ಕೆರೆಗೆ ಹೋಗಿದ್ದರು. ಈ ವೇಳೆ ಮಹೇಶ್ ಕೆರೆಗೆ ಆಯ ತಪ್ಪಿ ಬಿದ್ದಿದ್ದಾನೆ. ಬಾಲಕರ ಪೈಕಿ ಓರ್ವ ಬಾಲಕನ ತಂದೆ ವಾಮಾಚಾರ ಮಾಡುತ್ತಿದ್ದು, ಅವರಿಗೆ ವಿಷಯ ತಿಳಿದು ಯಾರಿಗೂ ಗೊತ್ತಾಗದಂತೆ ರಾತ್ರಿ ಹೋಗಿ ಕೆರೆಯ ಮುಂದೆ ವಾಮಾಚಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. 

ಕಳೆದ ಐದು ವರ್ಷಗಳ ಹಿಂದೆ ಹೆಮ್ಮರಗಾಲದ ಪಕ್ಕದ ಗ್ರಾಮ ಬಸವಟ್ಟಿಗೆ ಗ್ರಾಮದ ಜಮೀನೊಂದರಲ್ಲಿ  ವಾಮಾಚಾರಕ್ಕೆ ಬಾಲಕಿಯೋರ್ವಳನ್ನು ಬಲಿ ಕೊಡಲು ಮುಂದಾಗಿದ್ದಾಗ ಆಕೆ ಕೂಗಿಕೊಂಡ ಪರಿಣಾಮ ಅಕ್ಕ ಪಕ್ಕದ ಗ್ರಾಮದ ಜಮೀನಿನವರು ಬಂದಿದ್ದರಿಂದ ಬಾಲಕಿಯೋರ್ವಳನ್ನು ಬಿಟ್ಟು ಹೋಗಿದ್ದರು. ಈಗ ಮತ್ತೆ ಈ ಘಟನೆ ನಡೆದಿರುವುದು ತಾಲ್ಲೂಕಿನ ಜನತೆಯನ್ನು ದಿಗ್ಬ್ರಮೆಗೊಳಿಸಿದೆ.
ಈ ಸಂಬಂಧ ಕೌಲಂದೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ. 

ಕೌಲಂದೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರುಶೀಲನೆ ನಡೆಸಿದ್ದಾರೆ.ಸಧ್ಯ ಮೂವರು ಆರೋಪಿಗಳು ಅಪ್ರಾಪ್ತರೆಂದು ಹೇಳಲಾಗಿದ್ದು ದೊಡ್ಡಕವಲಂದೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News