‘ಮತಾಂತರ ನಿಷೇಧ' ಕಾಯ್ದೆ ವಾಪಸಾತಿಗಾಗಿ ಸಿಪಿಐಎಂ ನಿರ್ಣಯ

Update: 2022-01-03 16:07 GMT

ಗಂಗಾವತಿ:  ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ಅಂಗೀಕರಿಸಿರುವ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ, 2021’ ಕಾಯ್ದೆಯು ಭಾರತೀಯರಿಗೆ ಸಂವಿಧಾನವು ಕೊಡ ಮಾಡುವ  ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಕಸಿಯುವ ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು  ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ಯ 23ನೇ ರಾಜ್ಯ ಸಮ್ಮೇಳನವು ತೀವ್ರವಾಗಿ ಖಂಡಿಸಿ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ನಿರ್ಣಯ ತೆಗೆದುಕೊಂಡಿದೆ.

ಕರ್ನಾಟಕ ವಿಧಾನ ಸಭೆಯಲ್ಲಿ ತರಾತುರಿಯಲ್ಲಿ ಅಂಗೀಕರಿಸಲ್ಪಟ್ಟ ಈ ಮಸೂದೆಯನ್ನು ವಿಧಾನ ಪರಿಷತ್ತಿನಲ್ಲಿ ತಿರಸ್ಕಾರಕ್ಕೆ ಒಳಗಾಗಬಹುದೆಂಬ ಆತಂಕದಿಂದ ಸುಗ್ರೀವಾಜ್ಞೆ ಹೊರಡಿಸಿ ಜಾರಿಗೆ ತರಲು ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸಚಿವ ಸಂಪುಟವು  ಕ್ರಮ ವಹಿಸುವುದನ್ನು ಸಮ್ಮೇಳನವು ತೀವ್ರವಾಗಿ ವಿರೋಧಿಸುತ್ತದೆ. ಕರ್ನಾಟಕದ ರಾಜ್ಯಪಾಲರು ಇದಕ್ಕೆ ಅನುಮತಿಯನ್ನು ಕೊಡುವುದಾಗಲಿ ಅಂಗೀಕರಿಸಬಾರದೆಂದು ಸಿಪಿಐ(ಎಂ) ಆಗ್ರಹಿಸಿದೆ.

ಸ್ವತಂತ್ರ ಭಾರತದ ಸಂವಿಧಾನದ 25ನೇ ಅನುಚ್ಛೇದವು ದೇಶದ ಪ್ರತಿಯೊಬ್ಬ  ಪ್ರಜೆಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತ್ರಿ ಪಡಿಸುತ್ತದೆ. ಧಾರ್ಮಿಕ ಸ್ವಾತಂತ್ರ್ಯ ಎಂದರೆ ದೇಶದ ಯಾವುದೇ ಪ್ರಜೆಯು ತನಗೆ ಇಷ್ಟ ಬಂದ ಮತ ಧರ್ಮವನ್ನು ಅನುಸರಿಸಬಹುದು, ಯಾವುದೇ ಧರ್ಮದ ವಿಚಾರಗಳನ್ನು ಪ್ರಚಾರ ಮಾಡಬಹುದು.  ಹಾಗೆಯೇ ಯಾವುದೇ ವ್ಯಕ್ತಿಗೆ ಯಾವುದೇ ಮತಧರ್ಮವನ್ನು ಅನುಸರಿಸುವ, ಇಲ್ಲವೆ  ಅನುಸರಿಸದೇ ಇರುವ ಸ್ವಾತಂತ್ರ್ಯ ಸಹ ಇರುತ್ತದೆ. ಇದು ಧಾರ್ಮಿಕ ಸ್ವಾತಂತ್ರ್ಯವಾಗಿದ್ದು ಈ ಧಾರ್ಮಿಕ ಹಕ್ಕು ದೇಶದ ಪ್ರತಿಪ್ರಜೆಯ ಮೂಲಭೂತ ಹಕ್ಕಾಗಿದೆ ಎನ್ನುವುದನ್ನು ಸಮ್ಮೇಳನದ ನಿರ್ಣಯ ವಿಶ್ಲೇಷಣೆ ಮಾಡಿದೆ‌.

ಆದರೆ ಕರ್ನಾಟಕ ಸರಕಾರ ತಂದಿರುವ ಕಾಯ್ದೆಯು ಜನರ ಸಂವಿಧಾನ ಬದ್ಧ ಹಕ್ಕನ್ನು ಕಿತ್ತುಕೊಳ್ಳುವ ಒಂದು ದೌರ್ಜನ್ಯಕಾರಿ, ಸರ್ವಾಧಿಕಾರದ ಕ್ರಮವಾಗಿದೆ.  ಬಲವಂತ, ಅನುಚಿತ ಪ್ರಭಾವ, ಒತ್ತಾಯ, ಆಮಿಷಗಳ ಮೂಲಕ ಅಥವಾ ಯಾವುದೇ ವಂಚನೆಯ ವಿಧಾನಗಳ ಮೂಲಕ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ ಆಗುವುದನ್ನು ತಡೆಯುವ ಉದ್ದೇಶದಿಂದ ಈ ಕಾಯ್ದೆಯನ್ನು ತರಲಾಗಿದೆ ಎಂದು ಸರಕಾರ ಹೇಳಿಕೊಂಡಿದೆ. ಆದರೆ ಈಗಾಗಲೇ ಸಂವಿಧಾನದಲ್ಲಿ ಬಲವಂತದ ಮತಾಂತರವನ್ನು ತಡೆಯುವ ಮತ್ತು ಶಿಕ್ಷಿಸುವ ಅವಕಾಶ ಇರುವಾಗ ಮತ್ತೊಂದು ಕಾಯ್ದೆಯನ್ನು ತರುವುದರ ಔಚಿತ್ಯವಾದರೂ ಏನಿದೆ ಎನ್ನುವುದನ್ನು ಸಮ್ಮೇಳನವು ಪ್ರಶ್ನಿಸಿದೆ.

ಯಾವುದೇ ವ್ಯಕ್ತಿಯು ಮದುವೆಯ ನಂತರ ಮತ್ತು  ಮದುವೆಯ ಮುಂಚೆ ಸಹ ಮದುವೆಯ ಕಾರಣಕ್ಕಾಗಿ ಮತಾಂತರ ಆಗುವುದನ್ನು ಸಹ ಈ ಕಾಯ್ದೆಯು ನಿರ್ಬಂಧಿಸುತ್ತದೆ. ಮದುವೆ ಮತ್ತು ಮತಧರ್ಮ ಪಾಲನೆಯು ಯಾವುದೇ ವ್ಯಕ್ತಿಯ ವೈಯುಕ್ತಿಕ ಹಕ್ಕಾಗಿದ್ದು, ಆಳುವ ಸರಕಾರಗಳಿಗೆ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ಕೊಡುವುದು ಎಂದರೆ ಸಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೂಲತತ್ವಗಳನ್ನು ಮಣ್ಣುಪಾಲು ಮಾಡುವುದು ಎಂದೇ ಆಗುತ್ತದೆ.  ವಯಸ್ಕ ಯುವಕ-ಯುವತಿಯರು ತಮ್ಮ ಆಯ್ಕೆಯಂತೆ ಮದುವೆ ಆಗುವುದನ್ನು ಮತ್ತು ಅಂತರ್ ಧರ್ಮೀಯ ಪ್ರೇಮ ವಿವಾಹಗಳಾಗುವುದನ್ನು ತಡೆಯುವ ದುರುದ್ದೇಶ ಈ ಕಾಯ್ದೆಯಲ್ಲಿ ಅಡಗಿದೆ.  ಇದಲ್ಲದೇ ಮತಾಂತರದ ನೆಪದಲ್ಲಿ ಈ ವಿಷಯಕ್ಕೆ ಸಂಬಂಧವಿಲ್ಲದ ವ್ಯಕ್ತಿಗಳು ಸಹ ಮತ್ತೊಬ್ಬರ ಖಾಸಗಿ ವಿಷಯಗಳಲ್ಲಿ ತಲೆಹಾಕಲು ಮತ್ತು ದೂರುಕೊಡಲು ಈ ಕಾಯ್ದೆಯು ಅವಕಾಶ ಮಾಡಿಕೊಡುತ್ತದೆ. ಮತಾಂತರದ ಆರೋಪ ಹೊರಿಸಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ, ಯಾವುದೇ ಅಲ್ಪಸಂಖ್ಯಾತ  ಸಂಘ-ಸಂಸ್ಥೆಗಳಿಗೆ ಕಿರುಕುಳ ನೀಡಲು ಮತ್ತು ಸರಕಾರದ ಅನುದಾನವನ್ನು ತಡೆಹಿಡಿಯಲು ಬೇಕಾದಂತೆ ಕಾಯ್ದೆಯಲ್ಲಿ ಅವಕಾಶವನ್ನು ಸೃಷ್ಟಿಸಿಕೊಳ್ಳಲಾಗಿದೆ ಎಂದು ಟೀಕಿಸಲಾಗಿದೆ.

ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ಗೌತಮ ಬುದ್ಧ ಮತ್ತು ಮಹಾವೀರರು ತಾವಿದ್ದ ಮತಧರ್ಮವನ್ನು ತಿರಸ್ಕರಿಸಿ ಹೊಸ ಮೌಲ್ಯಗಳ ಆಧಾರದ ಹೊಸ ಮತಧರ್ಮಗಳನ್ನು ಬೋಧಿಸಿದರು.  ಗುರುನಾನಕರು ಸ್ಥಾಪಿಸಿದ ಸಿಖ್ ಧರ್ಮ ಸಹ ಜನರು ತಾವು ಇದ್ದ ಧರ್ಮವನ್ನು ತೊರೆದು ಹೊಸ ಧರ್ಮವನ್ನು ಸೇರಿದ್ದರಿಂದಲೇ ವ್ಯಾಪಕವಾಗಿ ಬೆಳೆದದ್ದು. ಹನ್ನೆರಡನೇ ಶತಮಾನದ ಶರಣರು ನೇರವಾಗಿ ಮತ್ತು ಸ್ಪಷ್ಟವಾಗಿ ಸಂಘಟಿತವಾಗಿ ಮತ್ತು ಸಾಮೂಹಿಕವಾಗಿ ಅಸಮಾನತೆಯ ವೈದಿಕ ಮತಧರ್ಮವನ್ನು ಖಂಡಿಸಿ ಹೊಸ ಧರ್ಮದ ಪ್ರತಿಪಾದಕರಾದರು. ಈಗ ಬಿಜೆಪಿ ತರುತ್ತಿರುವ ಕಾನೂನಿನ ಕಣ್ಣಲ್ಲಿ ಬುದ್ಧ-ಮಹಾವೀರ-ಗುರುನಾನಕರು-ಬಸವಣ್ಣನವರನ್ನು ಮತಾಂತರಿಗಳು ಎಂದು ದೂರುವುದು ಗಂಭೀರವಾದ ಪ್ರಮಾದವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹುಟ್ಟಿನಿಂದ ಬರುವ ಮತಧರ್ಮವು ಯಾವುದೇ ವ್ಯಕ್ತಿಯ ಸ್ವಂತ ಆಯ್ಕೆಯಲ್ಲ. ವ್ಯಕ್ತಿಗಳು ಬೆಳೆದು ವಯಸ್ಕರರಾದಾಗ  ತಮಗೆ ಸರಿಕಂಡ  ಮತಧರ್ಮವನ್ನು ಆರಿಸಿಕೊಳ್ಳುವ ಹಕ್ಕು ಅಥವಾ ಯಾವುದೇ ಮತಧರ್ಮವನ್ನು ಅನುಸರಿಸದಿರುವ ಹಕ್ಕು ಯಾವುದೇ ವ್ಯಕ್ತಿಗೆ ಇದ್ದೇ ಇದೆ. ಎಲ್ಲ ಆಧುನಿಕ ಪ್ರಜಾಪ್ರಭುತ್ವ ರಾಷ್ಟ್ರಗಳೂ ಮೂಲಭೂತ ಈ ಮಾನವ ಹಕ್ಕನ್ನು ಮಾನ್ಯ ಮಾಡಿವೆ ಮತ್ತು ಮಾನ್ಯ ಮಾಡಬೇಕಾಗುತ್ತದೆ.

ಅಲ್ಲದೇ ಯಾವುದೇ ಒಂದು ಧರ್ಮದಿಂದ ಜನರು ಮತ್ತೊಂದು ಧರ್ಮಕ್ಕೆ ಬದಲಾಗುತ್ತಾರೆ ಎಂದಾದರೆ ಆ ಧರ್ಮದ ಧಾರ್ಮಿಕ ಮುಖಂಡರು ಮತ್ತು ಧಾರ್ಮಿಕ ಪ್ರತಿಪಾದಕರು ತಮ್ಮ ಮತ ಧರ್ಮದಲ್ಲಿರುವ ದೋಷ, ಸಮಸ್ಯೆಗಳ ಕಡೆಗೆ ಗಮನ ನೀಡಿ ಅವುಗಳನ್ನು ನಿವಾರಿಸಬೇಕು. ಧಾರ್ಮಿಕ ಸುಧಾರಣೆಗಳನ್ನು ತಂದು ಜನರ ವಿಶ್ವಾಸವನ್ನು ಗಳಿಸಿಕೊಳ್ಳಬೇಕೆ ಹೊರತು ಸರ್ವಾಧಿಕಾರಿ ಕಾನೂನುಗಳ ಮೂಲಕ ಅದನ್ನು ತರುವುದು ನ್ಯಾಯವಲ್ಲ . ಈ ಒಟ್ಟು ಹಿನ್ನೆಲೆಯಲ್ಲಿ  ಈ ಬಲವಂತದ ಮತಾಂತರ ನಿಷೇಧದ ಹೆಸರಿನ ಈ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ, 2021’ ಕಾಯ್ದೆಯನ್ನು ವಾಪಸ್ ಪಡೆಯಬೇಕು.  ರಾಜ್ಯಪಾಲರು ಇದಕ್ಕೆ ಅವಕಾಶವನ್ನು ನೀಡಕೂಡದು ಎಂದು  ಸಮ್ಮೇಳನವು ಆಗ್ರಹಿಸಿದೆ.

ಬಿಜೆಪಿ-ಸಂಘಪರಿವಾರದ ಹುನ್ಮಾರಗಳನ್ನು ವಿರೋಧಿಸಿ ಜನವರಿ 17ರಂದ ರಾಜ್ಯದಾದ್ಯಂತ ಜಿಲ್ಲಾ ಹಾಗು ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಸಿಪಿಐಎಂ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News