ಮಗುವಿನ ಪಿತೃತ್ವ ಪರೀಕ್ಷೆ: ಅತ್ಯಾಚಾರ ಆರೋಪಿಯ ರಕ್ತದ ಮಾದರಿ ಸಂಗ್ರಹಕ್ಕೆ ನೀಡಿದ್ದ ಆದೇಶ ಎತ್ತಿ ಹಿಡಿದ ಹೈಕೋರ್ಟ್

Update: 2022-01-03 16:51 GMT

ಬೆಂಗಳೂರು, ಜ.3: ಮಗುವಿನ ಪಿತೃತ್ವವನ್ನು ಪರೀಕ್ಷಿಸಲು ಅತ್ಯಾಚಾರ ಆರೋಪಿಯ ರಕ್ತದ ಮಾದರಿಯನ್ನು ತೆಗೆದುಕೊಳ್ಳುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

2017ರ ಜನವರಿಯಲ್ಲಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಮಗುವಿನ ಪಿತೃತ್ವವನ್ನು ಪರೀಕ್ಷಿಸಲು ಅತ್ಯಾಚಾರ ಆರೋಪಿಯ ರಕ್ತದ ಮಾದರಿಯನ್ನು ತೆಗೆದುಕೊಳ್ಳುವಂತೆ ವಿಚಾರಣಾ ನ್ಯಾಯಾಲಯ ನೀಡಿರುವ ಆದೇಶದಲ್ಲಿ ಯಾವುದೇ ತಪ್ಪು ಕಂಡು ಬರುತ್ತಿಲ್ಲ ಎಂದು ತನ್ನ ಆದೇಶದಲ್ಲಿ ತಿಳಿಸಿದೆ. 

ವಿಚಾರಣಾ ನ್ಯಾಯಾಲಯ ನೀಡಿದ ಆದೇಶವು ಭಾರತದ ಸಂವಿಧಾನದ 20 (3)ನೆ ವಿಧಿಯ ಉಲ್ಲಂಘನೆ ಮತ್ತು ಸಿಆರ್‍ಪಿಸಿಯ ಸೆಕ್ಷನ್ 164ರ ಅಡಿಯಲ್ಲಿ ಕಾರ್ಯವಿಧಾನದ ಉಲ್ಲಂಘನೆಯಾಗಿದೆ ಎಂಬ ಅರ್ಜಿದಾರರ ವಕೀಲರ ವಾದವನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಆರೋಪಿ-ಅರ್ಜಿದಾರ ಮಾಳಪ್ಪ, ರಾಯಚೂರು ಜಿಲ್ಲೆಯ ಸಿಂಧನೂರಿನ ನಿವಾಸಿಯಾಗಿದ್ದು, 28 ವರ್ಷದ ಸಂತ್ರಸ್ತೆಯನ್ನು ಕೂಲಿ ಕೆಲಸಕ್ಕೆ ಆಹ್ವಾನಿಸಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಆಕೆ ಗರ್ಭಿಣಿಯಾದ ನಂತರ ಸಂತ್ರಸ್ತೆಯ ಪೆÇೀಷಕರು ಆರೋಪಿಯನ್ನು ಪ್ರಶ್ನಿಸಿದ್ದಾರೆ. 

ಆಗ ಆರೋಪಿಗಳು ತಮ್ಮ ಆರೋಪಕ್ಕೆ ಪೂರಕವಾದ ಸಾಕ್ಷ್ಯಗಳನ್ನು  ತೋರಿಸುವಂತೆ ಹೇಳಿದ್ದಾರೆ. ಡಿಎನ್‍ಎ ಪರೀಕ್ಷೆಗೆ ಅವಕಾಶ ಕೋರಿ ಪ್ರಾಸಿಕ್ಯೂಷನ್ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯವು ಮೃತ ಮಗುವಿನ ಸಂಬಂಧಿತ ಸಾರವನ್ನು ತೆಗೆದುಕೊಳ್ಳುವಂತೆ ಹಾಗೂ ಆರೋಪಿಯ ಡಿಎನ್‍ಎ ಪರೀಕ್ಷೆಗಾಗಿ ರಕ್ತದ ಮಾದರಿ ತೆಗೆದುಕೊಳ್ಳಲು ಮುಖ್ಯ ವೈದ್ಯಕೀಯ ಅಧಿಕಾರಿಗೆ ಸೂಚನೆ ನೀಡಿತ್ತು. 

ಈ ಆದೇಶವನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರು ನಿರಪರಾಧಿ ಮತ್ತು ಡಿಎನ್‍ಎ ಪರೀಕ್ಷೆ ನಡೆಸುವುದು ಕಾನೂನಿನ ದೃಷ್ಟಿಯಲ್ಲಿ ಸಮರ್ಥನೀಯವಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಸಂತ್ರಸ್ತೆ ಈಗಾಗಲೇ ಸಿದ್ದಪ್ಪ ಎಂಬಾತನನ್ನು ಮದುವೆಯಾಗಿದ್ದು, ಆರೋಪಿಯ ರಕ್ತದ ಮಾದರಿಯನ್ನು ಡಿಎನ್‍ಎ ಪರೀಕ್ಷೆಗೆ ತೆಗೆದುಕೊಳ್ಳಲು ಯಾವುದೇ ಸಮರ್ಥನೆ ಇಲ್ಲ ಎಂದು ಅವರು ವಾದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News