×
Ad

ಕಾಂಗ್ರೆಸ್‍ನ ಮೇಕೆದಾಟು ಚಳವಳಿಯಿಂದ ಬಿಜೆಪಿ ಮುಖಂಡರಿಗೆ ನಡುಕು ಶುರುವಾಗಿದೆ: ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್

Update: 2022-01-03 23:29 IST

ಚಿಕ್ಕಮಗಳೂರು, ಜ.3: ಬೆಂಗಳೂರಿಗೆ ಕುಡಿಯುವ ನೀರೊದಗಿಸಲು ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆ ಜನಪರ ಹೋರಾಟವಾಗಿದ್ದು, ಈ ಪಾದಯಾತ್ರೆಯಿಂದ ಆಡಳಿತ ಪಕ್ಷ ಬಿಜೆಪಿಗೆ ನಡುಕ ಶುರುವಾಗಿದೆ. ಇಂತಹ ಹೋರಾಟದ ಬಗ್ಗೆ ಕಂದಾಯ ಸಚಿವ ತುಚ್ಛವಾಗಿ ಮಾತನಾಡಿರುವುದು ಖಂಡನೀಯ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಟೀಕಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾವುದೇ ರಾಜಕೀಯ ಪಕ್ಷದ ಮುಖಂಡರು ಮೊದಲು ಚಳವಳಿಗೆ ಗೌರವಕೊಡಬೇಕು. ಮೇಕೆದಾಟು ಯೋಜನೆ ಸಂಬಂಧ ಕಾಂಗ್ರೆಸ್ ಹಮ್ಮಿಕೊಂಡಿರುವ ಚಳವಳಿ ರಾಜಕೀಯ ಪ್ರೇರಿತವಾದ ಹೋರಾಟವಲ್ಲ, ಇದು ಜನಪರ ಹೋರಾಟವಾಗಿದೆ. ಆ ಭಾಗದ ಜನರಿಗೆ ನ್ಯಾಯಕೊಡಿಸುವ ಉದ್ದೇಶದಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ. ಈ ಪಾದಯಾತ್ರೆಯಿಂದ ಬಿಜೆಪಿಯಲ್ಲಿ ನಡುಕ ಆರಂಭವಾಗಿದ್ದು, ಕಂದಾಯ ಸಚಿವ ಆರ್.ಅಶೋಕ್ ಹತಾಶೆಯಿಂದ ತಮ್ಮ ಘನತೆ, ಗೌರವ ಲೆಕ್ಕಸದೇ ಅಸಡ್ಡೆಯಿಂದ ಮಾತನಾಡಿರುವುದು ಸರಿಯಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಆರಂಭಗೊಂಡಿರುವ ಪಾದಯಾತ್ರೆ ಬಗ್ಗೆ ಸಚಿವ ಆರ್.ಅಶೋಕ್ ಅವಹೇಳನಕಾರಿಯಾಗಿ ಮಾತನಾಡಿ, ಈ ಹೋರಾಟದಿಂದ ಕಾಂಗ್ರೆಸ್ ಪಕ್ಷದವರಿಗೆ ಮೇಕೆಯೂ ಸಿಗಲ್ಲ, ಮಾಂಸವೂ ಸಿಗಲ್ಲ ಎಂದು ಚಳವಳಿಯೊಂದರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಚಳವಳಿಗಳ ಬಗ್ಗೆ ಗೌರವ ಇಲ್ಲದವರು ಮಾತ್ರ ಹೀಗೆ ಮಾತನಾಡಲು ಸಾಧ್ಯ, ಚಳವಳಿಗೆ ತನ್ನದೇಯಾದ ಗೌರವ, ಘನತೆ ಇದ್ದು, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದೂ ಚಳವಳಿಯಿಂದಲೇ ಎಂಬುದನ್ನು ಸಚಿವ ಆರ್.ಅಶೋಕ್ ಮನಗಾಣಬೇಕು ಎಂದ ಅವರು, ರಾಜ್ಯ ಸರಕಾರಕ್ಕೆ ಮಾನ ಮರ್ಯಾದೆ ಇದ್ದಲ್ಲಿ ಕಾಂಗ್ರೆಸ್ ಹೋರಾಟದ ಬಗ್ಗೆ ತುಚ್ಛವಾಗಿ ಮಾತನಾಡಿರುವ ಆರ್.ಅಶೋಕ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷ ಮೇಕೆ ಮತ್ತು ಮಾಂಸಕ್ಕಾಗಿ ಹೋರಾಡುತ್ತಿಲ್ಲ, ಜನರಿಗಾಗಿ ಹೋರಾಡುತ್ತಿದೆ. ಆಡಳಿತ ಪಕ್ಷದ ಸಚಿವರು ಹುಂಬತನವನ್ನು ಕೈಬಿಟ್ಟು ರಾಜ್ಯದ ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ. ಅಧಿಕಾರಕ್ಕೆ ಬಂದಾಗಿನಿಂದ ಒಂದೇ ಒಂದು ಜನಪರ ಯೋಜನೆ ನೀಡದ ಬಿಜೆಪಿ ಸರಕಾರ ಚುನಾವಣೆ ಸಂದರ್ಭಗಳಲ್ಲಿ ಪಟಾಕಿ ಹೊಡೆದು ಚಟಾಕಿ ಹಾರಿಸುವುದನ್ನೇ ಸಾಧನೆ ಎಂದು ತಿಳಿದಿದ್ದಾರೆ. ಇದನ್ನು ಇನ್ನಾದರೂ ಅವರು ನಿಲ್ಲಿಸಬೇಕು ಎಂದರು.

ಅತಿವೃಷ್ಟಿಯಿಂದ ಬೆಳೆಕಳೆದುಕೊಂಡಿರುವ ರೈತರಿಗೆ ಹೆಕ್ಟೇರ್‍ಗೆ 15ಸಾವಿರ ರೂ. ನೀಡುವುದಾಗಿ ಕಂದಾಯ ಸಚಿವರು ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದರು. ಇದನ್ನು ನಂಬಿ ಸಾವಿರಾರು ರೈತರು ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ಸಲ್ಲಿಸಿದ ರೈತರಿಗೆ ನಯಾಪೈಸೆ ಪರಿಹಾರವನ್ನೂ ನೀಡಿಲ್ಲ. ಅತಿವೃಷ್ಟಿಗೆ ಮನೆ ಕಳೆದುಕೊಂಡವರಿಗೆ ಒಂದೇ ಒಂದು ಮನೆ ನೀಡಲು ಸಾಧ್ಯವಾಗಿಲ್ಲ ಸಚಿವರ ಮಾತುಗಳು ಕೇವಲ ಭಾಷಣಕ್ಕೆ ಸೀಮಿತಗೊಂಡಿವೆ ಆರೋಪಿಸಿದರು.

ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ಅವರು ಜಿಲ್ಲೆಗೆ ನೀಡಿರುವ ಕೊಡುಗೆ ಶೂನ್ಯವಾಗಿದೆ. ಕೃಷಿ ಸಚಿವರಾಗಿರುವ ಅವರು ಜಿಲ್ಲೆಗೆ ಶೈತ್ಯಾಗಾರದ ಭರವಸೆ ನೀಡಿದ್ದು, ಇನ್ನೂ ಸಾಕಾರಗೊಂಡಿಲ್ಲ ಎಂದ ಅವರು, ಚಿಕ್ಕಮಗಳೂರು ನಗರಸಭೆ ಚುನಾವಣೆಯಲ್ಲಿ ಬಿಜೆಪಿಯವರು ಹಣ ಹೆಂಡದ ಹೊಳೆ ಹರಿಸಿ, ಚುನಾವಣೆಯಲ್ಲಿ ವ್ಯಾಪಕ ಅಕ್ರಮ ನಡೆಸಿ ಅಧಿಕಾರ ಹಿಡಿದಿದ್ದಾರೆ. ನಗರದ ಜನತೆ ಕಾಂಗ್ರೆಸ್‍ಗೆ 12 ಸ್ಥಾನ ನೀಡಿದ್ದು, ನಗರಸಭೆಯಲ್ಲಿ ಕಾಂಗ್ರೆಸ್ ಸಮರ್ಥ ವಿರೋಧ ಪಕ್ಷವಾಗಿ ಜನಪರ ಕೆಲಸಗಳಿಗೆ ಒತ್ತು ನೀಡಲಿದೆ ಎಂದರು.
ಮುಖಂಡರಾದ ಎಂ.ಡಿ.ರಮೇಶ್, ಜಮೀಲ್ ಅಹ್ಮದ್, ಕುಶ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News