ಚಿಕ್ಕಮಗಳೂರು: ನಗರಸಭೆ ಚುನಾವಣೆ ವೇಳೆ ಸಿ.ಟಿ.ರವಿ ಬಿಜೆಪಿ ಅಭ್ಯರ್ಥಿಗಳಿಗೆ 15 ಲಕ್ಷ ರೂ. ಹಂಚಿದ್ದಾರೆ; ಆಪ್ ಆರೋಪ

Update: 2022-01-04 12:27 GMT
ಆಮ್ ಆದ್ಮಿ ಪಕ್ಷದ ಮುಖಂಡರಿಂದ ಸುದ್ದಿಗೋಷ್ಠಿ

ಚಿಕ್ಕಮಗಳೂರು, ಜ.3: ನಗರಸಭೆ ಚುನಾವಣೆ ಸಂದರ್ಭದಲ್ಲಿ ಆಡಳಿತ ಪಕ್ಷದ ಶಾಸಕ ಸಿ.ಟಿ.ರವಿ ತಮ್ಮ ಪಕ್ಷದ ಪ್ರತೀ ಅಭ್ಯರ್ಥಿಗಳಿಗೆ ಚುನಾವಣಾ ಖರ್ಚಿಗಾಗಿ ತಲಾ 15 ಲಕ್ಷ ರೂ. ಹಣ ಹಂಚಿಕೆ ಮಾಡಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ಸದಸ್ಯತ್ವ ರದ್ದುಗೊಳಿಸಿ ಮರು ಚುನಾವಣೆ ನಡೆಸಬೇಕೆಂದು ಆಮ್ ಆದ್ಮಿ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ರಾಜ್ಯದ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ನಗರಸಭೆ ಚುನಾವಣೆಯ ಮತ ಎಣಿಕೆ ಬಳಿಕ ಬಿಜೆಪಿ ಪಕ್ಷ 18 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ನಗರಸಭೆ ಅಧಿಕಾರ ಹಿಡಿದಿದೆ. ಆದರೆ ನಗರದಲ್ಲಿ ಬಿಜೆಪಿ ವಿರೋಧಿ ಅಲೆ ಇದ್ದಾಗ್ಯೂ ಬಿಜೆಪಿ 18 ಸ್ಥಾನಗಳಲಿ ಗೆಲ್ಲಲು ಕಾರಣವಾಗಿರುವುದು ಹಣದ ಹೊಳೆ ಹರಿಸಿರುವುದೇ ಆಗಿದೆ. ಬಿಜೆಪಿ ಪಕ್ಷದಿಂದ ನಗರಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಪ್ರತೀ ಅಭ್ಯರ್ಥಿಗಳಿಗೆ ಶಾಸಕ ಸಿ.ಟಿ.ರವಿ ಅವರು ತಲಾ 15 ಲಕ್ಷ ರೂ. ಚುನಾವಣಾ ಖರ್ಚಿಗೆಂದು ಹಂಚಿಕೆ ಮಾಡಿದ್ದು, ಸಿ.ಟಿ.ರವಿ 15 ಲಕ್ಷ ರೂ. ನೀಡಿರುವುದನ್ನು ಆ ಪಕ್ಷದಿಂದ ಸ್ಪರ್ಧಿಸಿದ್ದ ನರಸಿಂಹ ಎಂಬ ಅಭ್ಯರ್ಥಿಯೇ ಹೇಳಿದ್ದಾರೆ. ಈ ಸಂಬಂಧ ತಮ್ಮ ಬಳಿ ನರಸಿಂಹ ಅವರು ಮಾತನಾಡಿರುವ ಆಡಿಯೋ ಸಾಕ್ಷಾಧಾರ ಇದ್ದು,  ಈ ಸಂಬಂಧ ಮುಖ್ಯ ಚುನಾವಣಾಧಿಕಾರಿ, ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು'' ಎಂದರು.

''ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷದಿಂದಲೂ ವ್ಯಾಪಕ ಹಣ ಹಂಚಿಕೆಯಾಗಿದೆ. ಈ ಪೈಕಿ ಆಡಳಿತ ಪಕ್ಷದವರು ತಮ್ಮ ಅಭ್ಯರ್ಥಿಗಳ ಮೂಲಕ ಭಾರೀ ಪ್ರಮಾಣದಲ್ಲಿ ಹಣ ಹಂಚಿಕೆ ಮಾಡಿದ್ದಾರೆ. ಈ ಮೂಲಕ ಮತದಾರರನ್ನು ಖರೀದಿಸಿ ಬಿಜೆಪಿ ನಗರಸಭೆ ಅಧಿಕಾರ ಹಿಡಿದಿದೆ ಎಂದ ಅವರು, ಚುನಾವಣೆ ಸಂದರ್ಭ ಆಡಳಿತ ಪಕ್ಷದವರು ವ್ಯಾಪಕ ಅಕ್ರಮ ನಡೆಸಿದ್ದಾರೆ. ಮಾದರಿ ನೀತಿ ಸಂಹಿತೆಗಳನ್ನು ಉಲ್ಲಂಘಿಸಿದ್ದಾರೆ. ಈ ಸಂಬಂಧ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮವಹಿಸಲ್ಲ'' ಎಂದರು

''ಯಾವುದೇ ಚುನಾವಣೆಗಳಲ್ಲಿ ಮತದಾರರಿಗೆ ಆಮಿಷವೊಡ್ಡುವುದು ಅಕ್ರಮವಾಗಿದೆ. ಚುನಾವಣೆ ಆಯೋಗ ಪ್ರತೀ ಅಭ್ಯರ್ಥಿಗೆ 2 ಲಕ್ಷ ರೂ.ವರೆಗೆ ಚುನಾವಣಾ ಖರ್ಚು ನಿಗದಿ ಮಾಡಿದ್ದು, ಚಿಕ್ಕಮಗಳೂರು ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು 15ರಿಂದ 20 ಲಕ್ಷ ರೂ. ಖರ್ಚು ಮಾಡಿದ್ದಾರೆ. ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘಟನೆಯಾಗಿದ್ದು, ನಗರಸಭೆ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ಅಭ್ಯರ್ಥಿಗಳ ಸದಸ್ಯತ್ವವನ್ನು ರದ್ದುಗೊಳಿಸಿ ಮರು ಚುನಾವಣೆ ನಡೆಸಬೇಕೆಂದು'' ಆಪ್ ರಾಜ್ಯ ಜಂಟಿ ಕಾರ್ಯದರ್ಶಿ ಆಗ್ರಹಿಸಿದರು.

ಆಪ್ ಜಿಲ್ಲಾಧ್ಯಕ್ಷ ಸುಂದರ್ ಗೌಡ ಮುಖಂಡರಾದ ಅಫ್ಜಲ್‍ಪಾಶ, ಇಬ್ರಾಹೀಂ, ಅಂತೋಣಿ, ಫಿಲೋಮಿನಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News