ಆಪರೇಷನ್ ಕಮಲ: ಸಚಿವ ಅಶ್ವತ್ಥನಾರಾಯಣ, ಶಾಸಕರ ವಿರುದ್ಧದ ಸಮನ್ಸ್ ರದ್ದುಗೊಳಿಸಿದ ಹೈಕೋರ್ಟ್

Update: 2022-01-04 13:55 GMT

ಬೆಂಗಳೂರು, ಜ.4: ಆಪರೇಷನ್ ಕಮಲ ವಿಚಾರವಾಗಿ ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಅವರಿಗೆ 30 ಕೋಟಿ ರೂ. ಲಂಚದ ಆಮಿಷ ನೀಡಲಾಗಿತ್ತು ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಬಿಜೆಪಿ ನಾಯಕರ ವಿರುದ್ಧ ದಾಖಲಿಸಿದ್ದ ದೂರಿನ ಮೇರೆಗೆ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ.

ಬೆಂಗಳೂರಿನ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ ರದ್ದು ಕೋರಿ ಸಚಿವ ಸಿ.ಎನ್ ಅಶ್ವತ್ಥನಾರಾಯಣ, ಶಾಸಕರಾದ ಶ್ರೀನಿವಾಸಗೌಡ, ಎಸ್.ಆರ್. ವಿಶ್ವನಾಥ್, ಸಿ.ಪಿ. ಯೋಗೇಶ್ವರ್ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.

ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಜನಪ್ರತಿನಿಧಿಗಳ ವಿರುದ್ಧ ದೂರು ದಾಖಲಿಸುವ ಮುನ್ನ ದೂರುದಾರರು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕಿತ್ತು. ಆದರೆ ಪಿಸಿಆರ್ ದಾಖಲಿಸುವ ಮುನ್ನ ದೂರುದಾರರು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆದಿಲ್ಲ. ಹೀಗಾಗಿ ವಿಚಾರಣಾ ನ್ಯಾಯಾಲಯ ಹೊರಡಿಸಿರುವ ಸಮನ್ಸ್ ನಿಯಮಾನುಸಾರ ಇಲ್ಲವೆಂದು ಅಭಿಪ್ರಾಯಪಟ್ಟ ಪೀಠ, ಸಮನ್ಸ್ ರದ್ದುಪಡಿಸಿದೆ.

ಅಲ್ಲದೇ, ಆರೋಪಿತ ಜನಪ್ರತಿನಿಧಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಪ್ರಕರಣ ಮುಂದುವರೆಸಲು ಸಕ್ಷಮ ಪ್ರಾಧಿಕಾರವಾದ ವಿಧಾನಸಭೆ ಸಭಾಧ್ಯಕ್ಷರಿಂದ ಪೂರ್ವಾನುಮತಿ ಪಡೆಯಲು ದೂರುದಾರ ಟಿ.ಜೆ. ಅಬ್ರಹಾಂ ಅವರಿಗೆ ನಿರ್ದೇಶಿಸಬೇಕು. ಪೂರ್ವಾನುಮತಿ ಬಳಿಕ ಕಾನೂನು ಪ್ರಕ್ರಿಯೆಗಳನ್ನು ಮುಂದುವರೆಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

ಪ್ರಕರಣವೇನು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಇದ್ದ ವೇಳೆ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ನಾಯಕರು ಶಾಸಕ ಶ್ರೀನಿವಾಸ್‍ಗೌಡ ಅವರನ್ನು ಪಕ್ಷಕ್ಕೆ ಕರೆತರಲು ಹಣದ ಆಮಿಷವೊಡ್ಡಿದ್ದ ಆರೋಪ ಕೇಳಿಬಂದಿತ್ತು. 30 ಕೋಟಿ ರೂ. ಆಮಿಷವೊಡ್ಡಿ 5 ಕೋಟಿ ರೂ. ಮುಂಗಡ ಪಾವತಿಸಿದ್ದರು ಎಂದು ಆರೋಪಿಸಿ ಟಿ.ಜೆ. ಅಬ್ರಹಾಂ ವಿಶೇಷ ಕೋರ್ಟ್‍ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರು ದಾಖಲಾದ ನಂತರ ವಿಶೇಷ ಕೋರ್ಟ್ ಆರೋಪಿತ ಶಾಸಕರು ಹಾಗೂ ಸಚಿವರಿಗೆ ಸಮನ್ಸ್ ಜಾರಿಗೆ ಆದೇಶಿಸಿತ್ತು. ಈ ಸಮನ್ಸ್ ಹಾಗೂ ಪಿಸಿಆರ್ ರದ್ದು ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News