ಕೊಪ್ಪ: ಸರಕಾರಿ ಕಾಲೇಜಿನಲ್ಲಿ ಬಗೆಹರಿಯದ ಸ್ಕಾರ್ಫ್-ಕೇಸರಿ ಶಾಲು ವಿವಾದ
ಕೊಪ್ಪ, ಜ.4: ಪಟ್ಟಣದ ಸರಕಾರಿ ಪದವಿ ಕಾಲೇಜಿನಲ್ಲಿ ನಡೆಯುತ್ತಿರುವ ಸ್ಕಾರ್ಫ್ ಮತ್ತು ಕೇಸರಿ ಶಾಲು ವಿವಾದ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಕಾಲೇಜು ಪ್ರಾಂಶುಪಾಲ ಹಾಗೂ ಕ್ಷೇತ್ರದ ಶಾಸಕರ ಸಭೆ ಬಳಿಕವೂ ವಿವಾದ ಅಂತ್ಯ ಕಾಣದಂತಾಗಿದೆ. ಮುಸ್ಲಿಂ ಸಮುದಾದ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸುವುದನ್ನು ವಿರೋಧಿಸಿ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜು ಆವರಣದಲ್ಲಿ ಮಂಗಳವಾರವೂ ಧರಣಿ ನಡೆಸಿ ಗೊಂದಲ ಸೃಷ್ಟಿಸಿದರು.
ಮಂಗಳವಾರ ಪಟ್ಟಣದ ಬಾಳಗಡಿಯಲ್ಲಿರುವ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆಗೆ ಮುಂದಾದರು. ಕಾಲೇಜಿನಲ್ಲಿ ಸಮಾನ ವಸ್ತ್ರಸಂಹಿತೆ ಇರಬೇಕು. ಎಲ್ಲರೂ ಒಂದೇ ರೀತಿಯಲ್ಲಿ ಸಮವಸ್ತ್ರವನ್ನು ಧರಿಸಬೇಕು. ಕಾಲೇಜಿನಲ್ಲಿ ಕೆಲ ವಿದ್ಯಾರ್ಥಿನಿಯರುವಸ್ಕಾರ್ಫ್ ಧರಿಸುತ್ತಿದ್ದು, ನಾವು ಕೇಸರಿ ಶಾಲು ಧರಿಸುತ್ತೇವೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಪಟ್ಟು ಹಿಡಿದಿದರು. ಈ ವೇಳೆ ಮಧ್ಯಪ್ರವೇಶಿಸಿದ ಕಾಲೇಜು ಪ್ರಾಂಶುಪಾಲ ಅನಂತ್, ವಿದ್ಯಾರ್ಥಿಗಳ ಮನವೊಲಿಸಲು ಮುಂದಾದದರೂ ಪ್ರಯೋಜನವಾಗಿಲ್ಲ, ಈ ವೇಳೆ ವಿದ್ಯಾರ್ಥಿಳ ಜೊತೆ ಮಾತಿನ ಚಕಮಕಿ ಕೂಡ ನಡೆಯಿತು.
ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಾಂಶುಪಾಲರು ಜ.10ರಂದು ಕಾಲೇಜು ಸಭಾಂಗಣದಲ್ಲಿ ಪೋಷಕರ ಸಭೆ ಕರೆಯಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಂದು ನಡೆಯುವ ಸಭೆಯಲ್ಲಿ ಪೋಷಕರು ಮತ್ತು ಕಾಲೇಜು ಸಮಿತಿಯ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಅಂದು ಸಮವಸ್ತ್ರ ಧರಿಸುವ ಕುರಿತು ಚರ್ಚಿಸಿ ಮುಂದಿನ ಕ್ರಮ ಕೈ ಗೊಳ್ಳಲಾಗುವುದು. ಅಲ್ಲಿಯವರೆಗೂ ಸಮವಸ್ತ್ರ ಇರುವುದಿಲ್ಲ ಎಂದು ತಿಳಿಸಿದರು.
ಪ್ರಾಂಶುಪಾಲರು ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ಹಿಂಪಡೆದುಕೊಂಡರು. ಕಳೆದ ಮೂರು ವರ್ಷಗಳ ಹಿಂದೆ ಕಾಲೇಜಿನಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಆಗಲೂ ಪೋಷಕರ ಸಭೆ ಕರೆದು ಸಮಸ್ಯೆಯನ್ನು ಇತ್ಯರ್ಥಗೊಳಿಸಲಾಗಿತ್ತು.