ಕೋವಿಡ್ ನಿಯಮ: ಶಾಲೆ ಮುಚ್ಚದಂತೆ ಸರಕಾರಕ್ಕೆ ರೂಪ್ಸಾ ಮನವಿ

Update: 2022-01-04 15:51 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.4: ಸಂಭವಿತ ಕೋವಿಡ್ ಮೂರನೆ ಅಲೆಯನ್ನು ತಡೆಯಲು ಸರಕಾರವು ಬೇರೆ ಕ್ಷೇತ್ರಗಳ ಮೇಲೆ ನಿರ್ಬಂಧವೇರುವಂತೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿಕ್ಷಣ ಕ್ಷೇತ್ರದ ಮೇಲೆ ನಿರ್ಬಂಧವೇರಬಾರದು. ಹಾಗಾಗಿ ಶಾಲೆಗಳನ್ನು ಮುಚ್ಚದಂತೆ ರೂಪ್ಸಾ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮನವಿ ಮಾಡಿದ್ದಾರೆ. 

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರವು ಕೋವಿಡ್ ನಿಯಂತ್ರಣಕ್ಕಾಗಿ ರಾಜಕೀಯ ಸಮಾರಂಭ, ಮದುವೆ, ಜಾತ್ರೆ, ಉತ್ಸವಗಳಲ್ಲಿ ಜನರು ಹೆಚ್ಚಾಗಿ ಸೇರದಂತೆ ತಡೆಯಬೇಕು. ಶಾಲೆ ಮುಚ್ಚುವ ವಿಷಯಕ್ಕೆ ಬಂದರೆ ಸರಕಾರವು ಗುರುತಿಸಿದ ಮೈಕ್ರೋ ಕಂಟೈನ್‍ಮೆಂಟ್ ಜೋನ್‍ಗಳಲ್ಲಿ ಮಾತ್ರ ಶಾಲೆಗಳಿಗೆ ರಜೆ ನೀಡಬೇಕು. ಒಮೈಕ್ರಾನ್ ಕಾಟವೇ ಇಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ನಿರಂತರ ಕಲಿಕೆಗೆ ಸರಕಾರ ಅವಕಾಶ ಮಾಡಿಕೊಡಬೇಕು. ಏಕೆಂದರೆ ಈ ವರ್ಷದ ಶೈಕ್ಷಣಿಕ ಅವಧಿ ಮುಕ್ತಾಯವಾಗಲು ಇನ್ನೂ ಮೂರು ತಿಂಗಳು ಮಾತ್ರ ಬಾಕಿ ಇದ್ದು, ಪಠ್ಯಕ್ರಮ ಪೂರ್ಣಗೊಳಿಸಲು ಸರಕಾರದ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು. 

ಲಾಕ್‍ಡೌನ್ ಕಾರಣದಿಂದಾಗಿ ಮಕ್ಕಳು 20 ತಿಂಗಳು ಕಲಿಕೆಯಿಂದ ವಂಚಿತರಾಗಿದ್ದಾರೆ. ಶಾಲೆಗಳನ್ನು ಮುಚ್ಚಿ ತರಗತಿಗಳನ್ನು ಆನ್‍ಲೈನ್‍ನಲ್ಲಿ ಮಾಡಿದರೆ ಗ್ರಾಮೀಣ ಭಾಗದ ತೋದರೆಯಾಗಲಿದೆ ಎಂದು ಲಾಕ್‍ಡೌನ್ ಸಮಯದಲ್ಲಿ ಅರ್ಥವಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಅವೈಜ್ಞಾನಿಕ ಹಾಗೂ ಅನಧಿಕೃತ ಕೋಚಿಂಗ್ ತರಗತಿಗಳಿಗೆ ಸೇರಿಸುತ್ತಾರೆ. ಹಾಗಾಗಿ ನಾವು ಕಳೆದ ಲಾಕ್‍ಡೌನ್‍ನಿಂದ ಪಾಠ ಕಲಿಯಬೇಕಿದೆ ಎಂದ ಅವರು, ಅವಸರದ ತೀರ್ಮಾನದಿಂದಾಗಿ ಶಾಲೆಗಳನ್ನು ಮುಚ್ಚಿದರೂ ಮಕ್ಕಳು ತಮ್ಮ ಪೋಷಕರೊಂದಿಗೆ ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News