ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ: ಪೋಷಕರಲ್ಲಿ ಗೊಂದಲ

Update: 2022-01-05 02:54 GMT

ಬೆಂಗಳೂರು: ಹದಿಹರೆಯದವರಿಗೆ ದೇಶಾದ್ಯಂತ ನೀಡುತ್ತಿರುವ ಕೊವ್ಯಾಕ್ಸಿನ್ ಲಸಿಕೆ ಬಗ್ಗೆ ಕೇಂದ್ರ ಸರ್ಕಾರದ ಸ್ಪಷ್ಟನೆಯ ಹೊರತಾಗಿಯೂ ಅನುಮಾನಗಳು ಉಳಿದುಕೊಂಡಿವೆ. ಇದು ಪೋಷಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ಹೇಳಿಕೆ ನೀಡಿ, ಕೊವ್ಯಾಕ್ಸಿನ್ ಲಸಿಕೆಯ ಅವಧಿ ಮೀರುವ ದಿನಾಂಕವನ್ನು ಉತ್ಪಾದನೆ ದಿನಾಂಕದಿಂದ ಒಂಬತ್ತು ತಿಂಗಳ ಬದಲಾಗಿ ಹನ್ನೆರಡು ತಿಂಗಳಿಗೆ ವಿಸ್ತರಿಸಲಾಗಿದೆ ಎಂದು ಹೇಳಿದೆ. ಆದರೆ ಡಿಸೆಂಬರ್ 23ರಂದು ಇದೇ ಸಚಿವಾಲಯ ಲಸಿಕೆ ನೀಡಿಕೆ ಇಲಾಖೆ ಪತ್ರ ಬರೆದು, ಲೇಬಲ್ ಪ್ರಕಾರ ಅವಧಿ ಮೀರಿದ ಲಸಿಕೆಗಳನ್ನು ಬಳಸಬಾರದು ಎಂದು ಸೂಚಿಸಿದೆ. ಇದು ಪೋಷಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಂಗಳ ಸಂಘ (ಪಿಎಚ್‌ಎನ್‌ಎ)ದ ಹೇಳಿದೆ.

ಕೇಂದ್ರ ಸರ್ಕಾರ 18 ವರ್ಷ ವಯಸ್ಸಿನೊಳಗಿನ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆಯನ್ನು ಅನುಮೋದಿಸಿದ್ದು, ಜನವರಿ 3ರಿಂದ ದೇಶಾದ್ಯಂತ ಲಸಿಕೆ ನೀಡಿಕೆ ಆರಂಭವಾಗಿದೆ.

"ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಕೊವ್ಯಾಕ್ಸಿನ್‌ನ ಅವಧಿ ಮೀರುವ ದಿನಾಂಕವನ್ನು ವಿಸ್ತರಿಸಿದೆ ಎಂದಾದ ಮೇಲೆ ಲಸಿಕೆಗಳ ಊರ್ಜಿತಾವಧಿ ಬಗ್ಗೆ ಸಚಿವಾಲಯ ಹೇಳಿಕೆ ನೀಡುವ ಅಗತ್ಯ ಇಲ್ಲ. ಇದೀಗ ಸ್ಪಷ್ಟನೆ ಬಂದಿದ್ದರೂ, ಸಾಕಷ್ಟು ಹಾನಿಯಾಗಿದೆ. ಕೊವ್ಯಾಕ್ಸಿನ್ ಬಗ್ಗೆ ಸಾಕಷ್ಟು ಸಂದೇಹ ಮತ್ತು ಅನುಮಾನಗಳು ಪೋಷಕರಲ್ಲಿ ವೈರಲ್ ಆಗಿವೆ" ಎಂದು ಫನಾ ಅಧ್ಯಕ್ಷ ಡಾ.ಎಚ್.ಎಂ.ಪ್ರಸನ್ನ ಹೇಳುತ್ತಾರೆ.

ಮಕ್ಕಳಿಗೆ ಲಸಿಕೆ ನೀಡುವ ಮುನ್ನ ಲಸಿಕೆ ಸೀಸೆಗಳ ಅವಧಿ ಮೀರುವ ದಿನಾಂಕ ಏನು ಎನ್ನುವುದನ್ನು ಬಹಿರಂಗಪಡಿಸುವಂತೆ ಹಲವು ಮಂದಿ ಪೋಷಕರು ಆಸ್ಪತ್ರೆಗಳಲ್ಲಿ ಒತ್ತಾಯಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅವಧಿ ಮೀರುವ ದಿನಾಂಕವನ್ನು ವಿಸ್ತರಿಸಿದ ಬಗ್ಗೆ ಈಗಾಗಲೇ ಎರಡು ಬಾರಿ ಸ್ಪಷ್ಟನೆ ನೀಡಲಾಗಿದೆ ಎಂದು ಭಾರತ್ ಬಯೋಟೆಕ್ ಪ್ರತಿನಿಧಿಗಳು ಸಮರ್ಥಿಸಿಕೊಂಡಿದ್ದಾರೆ. ವೈಜ್ಞಾನಿಕ ದತ್ತಾಂಶಗಳ ಆಧಾರದಲ್ಲಿ ಅವಧಿ ವಿಸ್ತರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆದರೆ ಪೋಷಕರಿಗೆ ಈ ವಿವರಣೆ ಸಮಾಧಾನ ತಂದಿಲ್ಲ. ವಾಯ್ಸ್ ಆಫ್ ಪೇರೆಂಟ್ಸ್ ಅಧ್ಯಕ್ಷ ಮೊಹ್ಮದ್ ಶಕೀಲ್ ಹೇಳುವಂತೆ, "ಮೊದಲನೆಯದಾಗಿ ಮನುಷ್ಯನ ಮೇಲೆ ನಡೆದ ಪರೀಕ್ಷಾರ್ಥ ಪ್ರಯೋಗದ ಗಾತ್ರ ಮತ್ತು ಎರಡನೇಯದಾಗಿ ಅವಧಿ ಮೀರುವ ದಿನಾಂಕವನ್ನು ಪಾರದರ್ಶಕವಲ್ಲದ ರೀತಿಯಲ್ಲಿ ವಿಸ್ತರಿಸಿರುವುದು ಪೋಷಕರ ನಂಬಿಕೆಯನ್ನು ಅಲುಗಾಡಿಸಿದೆ" 

ಲೇಬಲ್ ಪ್ರಕಾರ ಅವಧಿ ಮೀರಿದ ಆರು ಲಕ್ಷ ಸೀಸೆಗಳ ಪೈಕಿ ಶೇಕಡ 90ರಷ್ಟು ಸೀಸೆಗಳಿಗೆ ಹೊಸದಾಗಿ ಲೇಬಲ್ ಹಾಕಲಾಗಿದೆ ಎಂದು ಭಾರತ್ ಬಯೋಟೆಕ್ ವೈದ್ಯ ಡಾ.ಪ್ರಸನ್ನ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News