'ಲಾಕ್‌ಡೌನ್' ಹೆಸರಿನಲ್ಲಿ ಮನುಷ್ಯತ್ವವನ್ನೂ ಕಳೆದುಕೊಂಡ ಸರಕಾರ: ಡಾ.ಎಚ್.ಸಿ. ಮಹದೇವಪ್ಪ ಆಕ್ರೋಶ

Update: 2022-01-05 12:00 GMT
ಡಾ.ಎಚ್.ಸಿ. ಮಹದೇವಪ್ಪ

ಬೆಂಗಳೂರು, ಜ. 5: ‘ರಾಜ್ಯ ಬಿಜೆಪಿ ಸರಕಾರವು ಕೊರೋನ ಲಸಿಕೆಯನ್ನು ಎಲ್ಲರಿಗೂ ನೀಡುತ್ತೇವೆ ಎಂದು ಸುಳ್ಳು ಹೇಳಿ ಇದೀಗ ಕೋವಿಡ್ ಸೋಂಕು ಪ್ರಕರಣ ಜಾಸ್ತಿ ಆಗಿದೆ ಎಂದು ಹೇಳಿಕೆ ನೀಡಿ, ಇದೀಗ ‘ಕರ್ಫ್ಯೂ' ಹೆಸರಲ್ಲಿ ಸಾರ್ವಜನಿಕರ ಬದುಕನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹೊರಟಿರುವುದು ಇವರ ತಲೆಯಿಲ್ಲದ ತುಘಲಕ್ ಆಡಳಿತಕ್ಕೆ ಸಾಕ್ಷಿಯಾಗಿದೆ' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಇಂದಿಲ್ಲಿ ಆಕ್ಷೇಪಿಸಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಒಮೈಕ್ರಾನ್ ಸೋಂಕು ಎಂಬುದು ಹೆಚ್ಚು ಹರಡಿದರೂ, ಅಪಾಯಕಾರಿ ಅಲ್ಲ ಎಂಬ ಸಂಗತಿಯನ್ನು ವೈದ್ಯಕೀಯ ತಜ್ಞರೇ ಹೇಳುತ್ತಿರುವಾಗ ಎಲ್ಲ ಜನರಿಗೆ ಲಸಿಕೆಯನ್ನು ನೀಡಬೇಕಾದ ಸ್ಥಳದಲ್ಲಿ ಕರ್ಫ್ಯೂ, ಲಾಕ್‌ಡೌನ್ ಎಂದು ಹುಚ್ಚಾಟ ಆಡುತ್ತಿರುವ ಸರಕಾರವು ಮಾನಸಿಕ ಸ್ಥಿಮಿತದ ಜೊತೆಗೆ ಮನುಷ್ಯತ್ವವನ್ನೂ ಕಳೆದುಕೊಂಡಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.

‘ಇವರು ಮಾಡುತ್ತಿರುವ ಲಾಕ್‌ಡೌನ್ ಅಥವಾ ಕರ್ಫ್ಯೂನಲ್ಲಿ ಯಾವುದೇ ಅರ್ಥವಿಲ್ಲ, ಇದು ರೋಗದ ಹೆಸರಲ್ಲಿ ಸರಕಾರವು ಜನರನ್ನು ದೋಚಲು ಮಾಡಿರುವ ವೈದ್ಯಕೀಯ ಹಗರಣದ ತಂತ್ರ ಎಂಬ ಸಂಗತಿಯನ್ನು ಜನಸಾಮಾನ್ಯರೇ ಮಾತಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರಕಾರವು ಕರ್ಫ್ಯೂ ಹೆಸರಲ್ಲಿ ಮಾಡುತ್ತಿರುವ ಹುಚ್ಚಾಟಗಳನ್ನು ಕೂಡಲೇ ನಿಲ್ಲಿಸಿ, ಲಸಿಕಾ ಅಭಿಯಾನವನ್ನು ಹೆಚ್ಚುಗೊಳಿಸಿ, ಜನ ಸಾಮಾನ್ಯರ ಬದುಕಲ್ಲಿ ಆಟ ಆಡುವುದನ್ನು ನಿಲ್ಲಿಸಲಿ ಎಂದು ಅವರು ಆಗ್ರಹಿಸಿದ್ದಾರೆ.

‘ಲಸಿಕೆ ಬಂದ ಮೇಲೂ ಕೊರೋನ ತಡೆಗೆ ಕರ್ಫ್ಯೂ ಮೊರೆ ಹೋಗುವ ಹೊಣೆಗೇಡಿ ಸರಕಾರದ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ತಾನೊಬ್ಬ ಅದಕ್ಷ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆತನಿಂದ ಕೂಡಲೇ ರಾಜೀನಾಮೆ ಹಿಂಪಡೆದು ಕರ್ಫ್ಯೂವನ್ನು ತೆರವುಗೊಳಿಸಬೇಕು' ಎಂದು ಡಾ.ಮಹದೇವಪ್ಪ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News