ಶೇ.50ರಷ್ಟು ಸಿಬ್ಬಂದಿಗೆ ರೊಟೇಷನ್ ಆಧಾರದ ಮೇಲೆ ಕೆಲಸ: ಸರಕಾರದ ಸುತ್ತೋಲೆ
ಬೆಂಗಳೂರು, ಜ. 5: ‘ಕೋವಿಡ್ ರೂಪಾಂತರಿ ಒಮೈಕ್ರಾನ್ ಸೋಂಕು ಹರಡುವಿಕೆ ನಿಯಂತ್ರಿಸುವ ದೃಷ್ಟಿಯಿಂದ ಅಗತ್ಯ ಸೇವೆಗಳ ಎಲ್ಲ ಇಲಾಖೆಗಳ ಎಲ್ಲ ವರ್ಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗತಕ್ಕದ್ದು' ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ.
ಬುಧವಾರ ಸುತ್ತೋಲೆ ಹೊರಡಿಸಿರುವ ಅವರು, ಅಗತ್ಯ ಸೇವೆಗಳ ಇಲಾಖೆಗಳನ್ನು ಹೊರತುಪಡಿಸಿ ಇನ್ನುಳಿದ ಇಲಾಖೆಗಳ ಗ್ರೂಪ್ ‘ಎ' ವೃಂದದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಕಚೇರಿಗೆ ಹಾಜರಾಗತಕ್ಕದ್ದು ಮತ್ತು ಗ್ರೂಪ್ ಬಿ, ಸಿ ಮತ್ತು ಡಿ ವೃಂದದ ಅಧಿಕಾರಿ ಮತ್ತು ಸಿಬ್ಬಂದಿಗಳು ಶೇ.50ರಂತೆ ರೊಟೇಷನ್ ಆಧಾರದ ಮೇಲೆ ಕರ್ತವ್ಯಕ್ಕೆ ಹಾಜರಾಗತಕ್ಕದ್ದು ಎಂದು ಸೂಚಿಸಲಾಗಿದೆ.
ಕೋವಿಡ್ ಕರ್ತವ್ಯಕ್ಕಾಗಿ ನಿಯೋಜಿಸಿದ್ದ ಅಧಿಕಾರಿ/ನೌಕರರು ತಪ್ಪದೆ ಹಾಜರಾಗತಕ್ಕದ್ದು. ದೃಷ್ಟಿಹೀನ ಹಾಗೂ ಇತರೆ ದೈಹಿಕ ಅಂಗವೈಕಲ್ಯ ಹೊಂದಿರುವ ಅಧಿಕಾರಿ/ಸಿಬ್ಬಂದಿಗಳು ಮತ್ತು ಗರ್ಭಿಣಿ ಮಹಿಳಾ ಸಿಬ್ಬಂದಿಗಳು ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ. ಈ ಸುತ್ತೋಲೆ ಜ.18ರ ವರೆಗೆ ಜಾರಿಯಲ್ಲಿರುತ್ತದೆ ಎಂದು ಪಿ.ರವಿಕುಮಾರ್ ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.