ಜಾತಿನಿಂದನೆ ಆರೋಪ: ತರೀಕೆರೆ ಎಸಿಎಫ್ ರತ್ನಾಪ್ರಭಾ ಬಂಧನ, ಅಮಾನತಿಗೆ ಆಗ್ರಹಿಸಿ ಧರಣಿ

Update: 2022-01-05 13:11 GMT

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ಅರಣ್ಯ ವಿಭಾಗದ ಎಸಿಎಫ್ ರತ್ನಾಪ್ರಭಾ ಎಂಬವರು ದಲಿತ ಸಮುದಾಯದ ಸಿಬ್ಬಂದಿ ಹಾಗೂ ಸಾಮಾಜಿಕ ಕಾರ್ಯಕರ್ತರೊಬ್ಬರ ವಿರುದ್ಧ ಜಾತಿ ನಿಂದನೆ ಮಾಡಿದ್ದು, ಇಂತಹ ಜಾತಿವಾದಿ ಮನಸ್ಥಿತಿಯ ಅಧಿಕಾರಿ ವಿರುದ್ಧ ದಲಿತ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಬಂಧಿಸಿ ಹುದ್ದೆಯಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿ ಛಲವಾದಿ ಮಹಾಸಭಾ ಹಾಗೂ ವಿವಿಧ ದಲಿತ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಬುಧವಾರ ಧರಣಿ ನಡೆಸಿದರು.

ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡ ದಲಿತ ಸಂಘಟನೆ ಮುಖಂಡರು, ಕಾರ್ಯಕರ್ತರು ತರೀಕೆರೆ ಅರಣ್ಯ ವಿಭಾಗದ ಎಸಿಎಫ್ ರತ್ನಪ್ರಭಾ ದಲಿತ ವಿರೋಧಿ ಮನಸ್ಥಿತಿಯವರಾಗಿದ್ದು, ಅವರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದರೂ ಇನ್ನೂ ಬಂಧಿಸದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಪೊಲೀಸ್ ಇಲಾಖೆ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಎಸಿಎಫ್ ರತ್ನಾಪ್ರಭಾ ಅವರು ಚಿತ್ರಪ್ಪ ಯರಬಾಳ ಎಂಬ ಸಾಮಾಜಿಕ ಕಾರ್ಯಕರ್ತ ಎಸಿಎಫ್ ಕಚೇರಿ ಎದುರು ಪ್ರತಿಭಟನೆ ಮಾಡಿದರೆಂಬ ಕಾರಣಕ್ಕೂ ಅವರಿಗೂ ಜಾತಿ ನಿಂದನೆ ಮಾಡಿದ್ದು, ಈ ಪ್ರಕರಣದಲ್ಲೂ ರತ್ನಾಪ್ರಭಾ ನಿಂದಿಸಿರುವ ಆಡಿಯೊ ಕೂಡ ವೈರಲ್ ಆಗಿದೆ. ಈ ಸಂಬಂಧ ಎಸಿಎಫ್ ರತ್ನಪ್ರಭಾ ವಿರುದ್ಧ ದೂರು ದಾಖಲಾಗಿದ್ದರೂ ಪೊಲೀಸ್ ಇಲಾಖೆ ಅಧಿಕಾರಿಗಳು ಇದುವರೆಗೂ ಅವರನ್ನು ಬಂಧಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.

ಧರಣಿ ಬಳಿಕ ಮುಖಂಡರು ಎಸಿಎಫ್ ರತ್ನಾಪ್ರಭಾ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಧರಣಿಯಲ್ಲಿ ಛಲವಾದಿ ಮಹಾಸಭಾದ ಕಾರ್ಯದರ್ಶಿ ಬೆಟಗೆರೆ ಮಂಜುನಾಥ್, ಮಾನವ ಹಕ್ಕು ಸಂರಕ್ಷಣಾ ವೇದಿಕೆಯ ಹೊನ್ನೇಶ್, ದಲಿತ ಸಂಘಟನೆಗಳ ಮುಖಂಡರಾದ ದಂಟರಮಕ್ಕಿ ಶ್ರೀನಿವಾಸ್, ಮರ್ಲೆ ಅಣ್ಣಯ್ಯ, ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಕೆ.ಬಿ.ಸುಧಾ, ಗೌಸ್ ಮುನೀರ್, ರಸೂಲ್ ಖಾನ್, ಲಕ್ಷ್ಮಣ್ ಕೆಸವಳಲು, ಸುಂದರೇಶ್, ಕಿರುಗುಂದ ಪುನೀತ್, ಆಲ್ದೂರು ಗಿರೀಶ್, ಸಂತೋಷ್, ಡಾ.ಶಿಲ್ಪಾ, ಕಬ್ಬಗೆರೆ ಮೋಹನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News