ಬೆಟ್ಟತ್ತೂರು ಗ್ರಾಮದಲ್ಲಿ ಕಾಡಾನೆ ದಾಳಿ: ವ್ಯಕ್ತಿ ಸಾವು

Update: 2022-01-05 13:58 GMT

ಮಡಿಕೇರಿ: ನೀರಿನ ಪೈಪ್‌ಲೈನ್ ನ್ನು ದುರಸ್ತಿ ಮಾಡಲು ತೆರಳಿದ್ದ ವ್ಯಕ್ತಿಯೊಬ್ಬರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಘಟನೆ ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ನಡೆದಿದೆ. ಬೆಟ್ಟತ್ತೂರು ನಿವಾಸಿ ಎನ್.ಶಿವ ಪ್ರಸಾದ್(48) ಎಂಬವರೇ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. 

ಶಿವಪ್ರಸಾದ್ ಅವರು ಬೆಟ್ಟದಿಂದ ಹರಿದು ಬರುವ ನೈಸರ್ಗಿಕ ಕೊಲ್ಲಿ ನೀರನ್ನು ಮನೆ ಬಳಕೆಗೆ ಉಪಯೋಗಿಸುತ್ತಿದ್ದರು. ಜ.4ರ ಮಂಗಳವಾರ ರಾತ್ರಿ ನೀರಿನ ಪೂರೈಕೆಗೆ ಅಡೆತಡೆಯಾಗಿದ್ದು, ಈ ಹಿನ್ನೆಲೆಯಲ್ಲಿ ನೀರಿನ ಪೈಪ್ ದುರಸ್ತಿಪಡಿಸಲು ಕಾಫಿ ತೋಟದ ಮೂಲಕ ಕೊಲ್ಲಿ ಕಡೆಗೆ ತೆರಳಿದ್ದರು ಎನ್ನಲಾಗಿದೆ. ಈ ವೇಳೆ ತೋಟದೊಳಗಿದ್ದ ಕಾಡಾನೆ ಹಠಾತ್ ಎದುರಾಗಿ ಶಿವಪ್ರಸಾದ್ ಅವರನ್ನು ತುಳಿದು ಸಾಯಿಸಿದೆ ಎಂದು ತಿಳಿದು ಬಂದಿದೆ.

ರಾತ್ರಿ ಮನೆಯಿಂದ ತೆರಳಿದ್ದ ವ್ಯಕ್ತಿ ಬೆಳಗಾದರೂ ಬಾರದ ಹಿನ್ನೆಲೆಯಲ್ಲಿ ಮೃತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ. ಬುಧವಾರ ಮಧ್ಯಾಹ್ನದ ವೇಳೆಗೆ ಈ ಘಟನೆ ಬೆಳಕಿಗೆ ಬಂದಿದೆ. 

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳಾದ ಆರ್‌ಎಫ್‌ಓ ಮಧು ಸೂದನ್, ಡಿಆರ್‌ಎಫ್‌ಓ ಬಾಬು ರಾಥೋಡ್, ಸಿಬ್ಬಂದಿಗಳಾದ ಯತೀಶ್, ಸಂದೇಶ್, ಸಂಪಾಜೆ ವಲಯ ಸಿಬ್ಬಂದಿಗಳು ಹಾಗೂ ಮಡಿಕೇರಿ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News