ಕೋವಿಡ್ ನಿಯಮ ಪಾಲಿಸುವುದು ವಿಪಕ್ಷಗಳ ಜವಾಬ್ದಾರಿ: ಸಿಎಂ ಬೊಮ್ಮಾಯಿ

Update: 2022-01-05 14:08 GMT

ಮಂಡ್ಯ, ಜ.5: ಎಲ್ಲ ಕಡೆಗೂ ಹರಡುತ್ತಿರುವ ಕೋವಿಡ್ ನಿಯಂತ್ರಣಕ್ಕೆ ಕ್ರಮವಹಿಸುವುದು ಸರಕಾರದ ಕರ್ತವ್ಯ. ಈ ವಿಚಾರದಲ್ಲಿ ವಿರೋಧ ಪಕ್ಷಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬುಧವಾರ ಆದಿಚುಂಚನಗಿರಿಯಲ್ಲಿ ನಡೆದ ರಾಜ್ಯ ಯುವಜನೋತ್ಸವದ ಸಮೋರೋಪ ಸಮಾರಂಭಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಯಮಗಳನ್ನು ಎಲ್ಲ ಪಕ್ಷಗಳೂ ಪಾಲಿಸಬೇಕು ಎಂದರು.

ಕೆಲವು ದಿನಗಳಿಂದ ಕೋವಿಡ್ ಹೆಚ್ಚಾಗುತ್ತಿದೆ. ನೆರೆ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ, ಕೇರಳವಲ್ಲದೆ ದೇಶದ ಹಲವು ಕಡೆ ಹತ್ತುದಿನದಿಂದ ಉಲ್ಬಣವಾಗುತ್ತಿದೆ. ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ನಿಯಂತ್ರಣ ಮಾಡುವುದು ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಹೇಳಿದರು.

ಮೇಕೆದಾಟು ಪಾದಯಾತ್ರೆ ನಿಲ್ಲಿಸುವುದಿಲ್ಲವೆಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯಸಿದ ಅವರು, ಕೋವಿಡ್ ನಿಯಂತ್ರಣಕ್ಕೆ ಬಂದ ಮೇಲೆ ಏನು ಬೇಕಾದರೂ ಮಾಡಿಕೊಳ್ಳಲಿ. ಪ್ರಸ್ತುತ ವಿಪಕ್ಷಗಳು ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಪಾಲಿಸುವುದು, ಬಿಡುವುದು ಅವರಿಗೆ ಬಿಟ್ಟಿದ್ದು ಎಂದರು.

ಗೃಹ ಸಚಿವ ಆರಗ ಜ್ಞಾನೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ, ಶಾಸಕ ಕೆ.ಸುರೇಶ್‌ಗೌಡ, ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News