×
Ad

ಬಿಜೆಪಿ ಸರಕಾರ ಬ್ರಿಟಿಷರಿಗಿಂತ ಕ್ರೂರವಾಗಿ ವರ್ತಿಸುತ್ತಿದೆ: ರಕ್ಷಾ ರಾಮಯ್ಯ

Update: 2022-01-05 19:51 IST

ಬೆಂಗಳೂರು, ಜ.5: ಸ್ವಾತಂತ್ರ‍್ಯಕ್ಕಾಗಿ ಬ್ರಿಟಿಷರ ವಿರುದ್ಧ ತ್ಯಾಗ ಬಲಿದಾನಗಳ ಮೂಲಕ ಹೋರಾಡಿದ ಮಾದರಿಯಲ್ಲಿ ‘ಮೇಕೆದಾಟು ನಮ್ಮ ನೀರು ನಮ್ಮ ಹಕ್ಕು’ ಪಾದಯಾತ್ರೆಯಲ್ಲಿ ಯುವ ಸಮೂಹ ಪಾಲ್ಗೊಳ್ಳಬೇಕು ಎಂದು ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಕರೆ ನೀಡಿದ್ದಾರೆ.

ಬುಧವಾರ ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲಾ ಮತ್ತು ತಾಲೂಕು ಯುವ ಕಾಂಗ್ರೆಸ್‌ನಿಂದ ಏರ್ಪಡಿಸಿದ್ದ ಮೇಕೆದಾಟು ಪಾದಯಾತ್ರೆ ಹೋರಾಟದ ಸಿದ್ಧತೆ ಹಾಗೂ ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಗಿನ ಬಿಜೆಪಿ ಸರಕಾರ ಬ್ರಿಟಿಷರಿಗಿಂತಲೂ ಕ್ರೂರವಾಗಿ ವರ್ತಿಸುತ್ತಿದೆ. ಕೇಂದ್ರ ಸರಕಾರದ ವಿಳಂಬ ಧೋರಣೆ, ತಮಿಳುನಾಡಿನ ಪಿತೂರಿ ವಿರುದ್ಧ ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವ ಮಾದರಿಯಲ್ಲಿ ಹೋರಾಟ ಮಾಡಲು ಹೊರಟಿದ್ದು, ಈ ಹೋರಾಟವನ್ನು ಅತ್ಯಂತ ವ್ಯವಸ್ಥಿತವಾಗಿ ಹತ್ತಿಕ್ಕುವ ಪ್ರಯತ್ನದಲ್ಲಿ ಬಿಜೆಪಿ ನಾಯಕರು ತೊಡಗಿದ್ದಾರೆ. ನಾಡಿನ ನೆಲ, ಜಲ ವಿಚಾರದಲ್ಲಿ ನಡೆಸುವ ಹೋರಾಟಗಳಿಗೆ ಸರಕಾರ ಬೆಂಬಲ ನೀಡಬೇಕಾಗಿತ್ತು. ಆದರೆ ಬಿಜೆಪಿ ನಾಯಕರು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಅವರು ಆಪಾದಿಸಿದರು.

ಬಿಜೆಪಿ ಸರಕಾರ ಕಣ್ಣು ಕಿವಿ ಇಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದು, ಇಂತಹ ನಾಡ ವಿರೋಧಿ ಸರಕಾರದ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಯುವ ಜನತೆ ಹೆಚ್ಚಿನ ರೀತಿಯಲ್ಲಿ ಪಾಲ್ಗೊಳ್ಳಬೇಕು. ಮೇಕೆದಾಟು ವಿಚಾರದಲ್ಲಿ ರಾಜ್ಯದ ಹಿತ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಯಶಸ್ವಿಯಾಗಿ ಎಲ್ಲರೂ ಪಾಲ್ಗೊಳ್ಳಬೇಕು. ಸರಕಾರದ ಕಣ್ಣು ತೆರೆಸಿ ಕಿವಿ ಹಿಂಡಿ ಬುದ್ಧಿ ಹೇಳಲು ಕಾಂಗ್ರೆಸ್ ಪಕ್ಷ ಹೊರಟಿದ್ದು, ಇಂತಹ ಹೋರಾಟದಲ್ಲಿ ಯುವ ಜನಾಂಗ ಸಾಗರೋಪಾದಿಯಲ್ಲಿ ಪಾಲ್ಗೊಳ್ಳಬೇಕು ಎಂದು ರಕ್ಷಾ ರಾಮಯ್ಯ ಕರೆ ನೀಡಿದರು.

ಈ ಪಾದಯಾತ್ರೆಯನ್ನು ಬಯಲು ಸೀಮೆ ಜನತೆ ನೀರಿಗಾಗಿ ಪಡುತ್ತಿರುವ ಬವಣೆ ನೀಗಿಸಲು ಸಮುದ್ರ ಪಾಲಾಗುತ್ತಿರುವ ನೀರನ್ನು ತಡೆದು ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ತುಮಕೂರು, ಭಾಗಗಳಿಗೆ ನೀರು ಒದಗಿಸಲು ಹಿಂದಿನ ಕಾಂಗ್ರೆಸ್ ಸರಕಾರ ಸಿದ್ಧವಾಗಿತ್ತು. ಪಾದಯಾತ್ರೆಗೆ ಯಾವುದೇ ಅಡ್ಡಿ ಆತಂಕ ಎದುರಾದರೂ ನಾವು ಎದೆಗುಂದುವುದಿಲ್ಲ ಎಂದು ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಅವರು ತಿಳಿಸಿದರು.

ಬಿಜೆಪಿ ಸುಳ್ಳಿನ ಪಕ್ಷ. ಸುಳ್ಳು ಹೇಳಿಕೊಂಡು ಯುವ ಜನರನ್ನು ದಾರಿ ತಪ್ಪಿಸುತ್ತಿದೆ. ನಿರುದ್ಯೋಗ ಸಮಸ್ಯೆ ತೀವ್ರವಾಗಿದ್ದು, 50 ಲಕ್ಷಕ್ಕೂ ಹೆಚ್ಚು ಮಂದಿ ನಿರುದ್ಯೋಗಿಗಳಾಗಿದ್ದಾರೆ. ರೈತರ ಸಮಸ್ಯೆಗಳು ಹೆಚ್ಚಾಗಿವೆ. ಆದರೆ ಸರಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ರಕ್ಷಾ ರಾಮಯ್ಯ ಆಪಾದಿಸಿದರು.

ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಅನಿಲ್ ಯಾದವ್, ರಾಜ್ಯ ಉಸ್ತುವಾರಿ ಸುರಭಿ ದ್ವಿವೇದಿ, ರಾಜ್ಯ ಉಪಾಧ್ಯಕ್ಷೆ ಭವ್ಯಾ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಆರ್.ನಾಗೇಶ್, ತಾಲೂಕು ಅಧ್ಯಕ್ಷ ಸುಮಂತ್, ಟೌನ್ ಅಧ್ಯಕ್ಷ ಸಾಗರ್, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶಾಂತಕುಮಾರ್, ಕೆಪಿಸಿಸಿ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ಸದಸ್ಯ ಚಿನ್ನಪ್ಪ, ಮಾಜಿ ಶಾಸಕ ಮುನಿನರಸಿಂಹಯ್ಯ, ವೆಂಕಟಸ್ವಾಮಿ, ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಜಗನ್ನಾಥ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಚೇತನ್ ಗೌಡ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News